ಕೆಲವರಿಗೆ ಪ್ರಾಣಿಗಳ ಮೇಲೆ ಅಪಾರವಾದ ಪ್ರೀತಿ ವಿಶ್ವಾಸವಿರುತ್ತದೆ. ಮಾತು ಬಾರದ ಮೂಕ ಪ್ರಾಣಿಗಳನ್ನು ಮಗುವಿನಂತೆ ಸಾಕಿ ಸಲುಹುವ, ಅನ್ನ ನೀರು ಕೊಟ್ಟು ಉತ್ತಮ ನಡೆಯನ್ನು ಕಲಿಸುವ ಪೋಷಕರಂತೆ ನೋಡಿಕೊಳ್ಳುವವರಿದ್ದಾರೆ.
ಇಂಥದ್ದೇ ಒಂದು ಮನುಷ್ಯ – ಪ್ರಾಣಿಯ ಹೃದಯಸ್ಪರ್ಶಿ ಆತ್ಮೀಯ ಬಂಧ ಕೇರಳದಲ್ಲಿದೆ.
ಕೇರಳದ (Kerala)ಮಲಪ್ಪುರಂ ಜಿಲ್ಲೆಯ ಪೆರುಂಪರಂಬ (Perumparamba) ಎಂಬ ಹಳ್ಳಿಯಲ್ಲಿ ರಸ್ತೆಗಳಲ್ಲಿ ಪ್ರತಿ ಸಂಜೆ ಆನೆ ಹಾಗೂ ಯುವಕನೊಬ್ಬ ಆರಾಮವಾಗಿ ನಡೆದುಕೊಂಡು ಹೋಗುವುದನ್ನು ನೋಡಲೆಂದೇ ನೂರಾರು ಮಂದಿ ಇಲ್ಲಿಗೆ ಬರುತ್ತಾರೆ. ಸ್ನೇಹಿತರಿಬ್ಬರು ಶಾಲೆ ಮುಗಿಸಿ ಮನೆಗೆ ಹೋಗುವ ಹಾಗೆ, ಆನೆ ಹಾಗೂ ಈ ಯುವಕ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಅನಾನಸ್ ಹಣ್ಣು ಹಾಗೂ ಚಾಕೋಬಾರ್ ಐಸ್ ಕ್ರೀಮ್ ತಿಂದು ಮನೆಗೆ ಸಾಗುತ್ತಾರೆ.
ಈ ಆನೆಯ ಹೆಸರು ಕಾವೇರಿ. ಸ್ಥಳೀಯವಾಗಿ ಇದನ್ನು ಊರಿನ ಹೆಸರಿಟ್ಟು ‘ಪೆರುಂಪರಂಬು ಕಾವೇರಿ’ ಎಂದು ಕರೆಯುತ್ತಾರೆ. ಈ ಆನೆಯನ್ನು ನೋಡಿಕೊಂಡು, ಆಕೆಯ ಸ್ನೇಹಿತನಾಗಿ, ಸಾಹುಕಾರನಾಗಿ ಇರುವವನ ಹೆಸರು ಮೊಹಮ್ಮದ್ ಶಿಮಿಲ್.(Mohammed Shimi)
ಕಾಲೇಜು ದಿನಗಳಿಂದಲೂ ಪ್ರಾಣಿಪ್ರಿಯನಾಗಿರುವ ಶಿಮಿಲ್ ಇಂದು ʼಕಾವೇರಿʼಯಿಂದ ಸಾಮಾಜಿಕ ಜಾಲತಾಣದಲ್ಲಿ ಬಹಳ ಜನಪ್ರಿಯರಾಗಿದ್ದಾರೆ. 5 ವರ್ಷಗಳ ಹಿಂದೆ ಮೊದಲ ಬಾರಿಗೆ ಅಡಿಮಾಲಿಯಲ್ಲಿ(ಕೇರಳದ ಪಟ್ಟಣ) ಕಾವೇರಿಯನ್ನು ನೋಡಿ ಶಿಮಿಲ್ ಭಾವುಕರಾಗುತ್ತಾರೆ. ದುರ್ಬಲವಾಗಿ, ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಆನೆ ಸರಿಯಾಗಿ ತಿನ್ನುವುದಿಲ್ಲ, ಔಷಧವನ್ನು ತೆಗೆದುಕೊಳ್ಳುವುದಿಲ್ಲ ಎಂದು ಕೇಳಿದಾಗ ಶಿಮಿಲ್ ಅವರಿಗೆ ಆ ಆನೆಯನ್ನು ಹಾಗೆಯೇ ಬಿಟ್ಟು ಬರಲು ಮನಸ್ಸು ಒಪ್ಪುವುದಿಲ್ಲ. ಹೀಗಾಗಿ ʼಕಾವೇರಿʼ ತನಗೆ ಬೇಕೆಂದು ಅದನ್ನು ಖರೀದಿಸಿ ತನ್ನ ಮನೆಯ ಫಾರ್ಮ್ ಗೆ ಕರೆತರುತ್ತಾರೆ.
ಶಿಮಿಲ್ ಫಾರ್ಮ್ ಹೌಸ್ ಗೆ ಕಾವೇರಿಯನ್ನು ತಂದ ಒಂದೇ ತಿಂಗಳಿನಲ್ಲಿ ಆಕೆಯ ಸಿಟ್ಟಿನ ಸಮಸ್ಯೆ ಸುಧಾರಿಸಿ, ಆಹಾರವನ್ನು, ಔಷಧವನ್ನು ತೆಗೆದುಕೊಂಡು ದಷ್ಟಪುಷ್ಟವಾಗಿ ಬೆಳೆಯುತ್ತದೆ. ಮೊದ ಮೊದಲಿಗೆ ಶಿಮಿಲ್ ಏನೇ ಮಾಡಿದರೂ ಕಾವೇರಿ ಆತನನ್ನು ಧಿಕ್ಕರಿಸಿ ಸಿಟ್ಟಿನಿಂದ ವರ್ತಿಸುತ್ತಿತ್ತು. ಆದಾದ ಬಳಿಕ ಕಾವೇರಿಯನ್ನು ಅರ್ಥ ಮಾಡಿಕೊಂಡು ಆಕೆಯನ್ನು ಸಾಕಿದಾಗ ಕಾವೇರಿ ಶಿಮಿಲ್ ಗೆ ಹತ್ತಿರವಾಗುತ್ತಾಳೆ.
ಈ ಆತ್ಮೀಯತೆ ದಿನ ಕಳೆದಂತೆ ಹೆಚ್ಚಾಗುತ್ತಾ ಹೋಗುತ್ತದೆ. ಎಲ್ಲಿಯವರೆಗೆ ಎಂದರೆ ಕಾವೇರಿಗೆ ಬೇಕಾಗುವ ಆಹಾರವನ್ನು ನೀಡಲು ಶಿಮಿಲ್ ಅವರೇ ಬೇಕು. ಬೇರೆ ಯಾರಾದರೂ ಬಂದರೆ ಆಕೆ ಸಿಟ್ಟಿನಿಂದ ವರ್ತಿಸುತ್ತಿದ್ದಳು. ಕಾವೇರಿಯನ್ನು ಸ್ಥಳೀಯ ದೇವಸ್ಥಾನಗಳ ಕಾರ್ಯಕ್ರಮ ಮತ್ತು ಆಚರಣೆಗಳಿಗೆ ಆಹ್ವಾನಿಸಲಾಗುತ್ತದೆ. ಹಾಗಾಗಿ ಶಿಮಿಲ್ ಅಲ್ಲಿಗೆ ತೆರಳಲು ಕ್ಯಾರವಾನ್ ನ್ನು ಖರೀದಿಸಿದ್ದಾರೆ.
“ಕಾವೇರಿ 100 ಕಿ.ಮೀ ದೂರದೊಳಗೆ ಮಾತ್ರ ಪ್ರಯಾಣ ಮಾಡುತ್ತಾಳೆ. ಅದಕ್ಕಿಂತ ಜಾಸ್ತಿ ದೂರ ಪ್ರಯಾಣ ಆಕೆಯನ್ನು ಆಯಾಸಗೊಳಿಸುತ್ತದೆ” ಎಂದು ಶಿಮಿಲ್ ಹೇಳುತ್ತಾರೆ.
ಕಾಲಿಗೆ ಸರಪಳಿಯಿಲ್ಲದೆ ದಾರಿಯಲ್ಲಿ ಆರಾಮವಾಗಿ ತಿರುಗಾಡುವ ʼಕಾವೇರಿʼಯನ್ನು ನೋಡಿ ಜನಭೀತಿಗೊಳ್ಳುವುದಿಲ್ವಾ ಎನ್ನುವ ಮಾತಿಗೆ ಪ್ರತಿಕ್ರಿಸುವ ಶಿಮಿಲ್, “ಕಾವೇರಿ ಯಾವುದೇ ಖಾಸಗಿ ಜಾಗಕ್ಕೆ ಪ್ರವೇಶಿಸಲು ಮುಕ್ತವಾಗಿ ಸ್ವತಂತ್ರವನ್ನು ಹೊಂದಿದ್ದಾಳೆ. ಏಕೆಂದರೆ ಅವಳು ಕಾಡಿನ ಹುಲ್ಲನ್ನು ಮಾತ್ರ ತಿನ್ನುತ್ತಾಳೆ. ಬೆಳೆದ ಬೆಳೆಗಳನ್ನು ಅವಳು ತಿನ್ನುವುದಿಲ್ಲ. ತಾನೇ ಮನೆಗೆ ವಾಪಾಸು ಆಗುತ್ತಾಳೆ. ಯಾರೂ ಅವಳನ್ನು ಕರೆದುಕೊಂಡು ಹೋಗುವ ಅಗತ್ಯವಿಲ್ಲ” ಎನ್ನುತ್ತಾರೆ.
ನನ್ನ ʼಪಾರ್ಥಸಾರಥಿʼ ಮತ್ತೊಂದು ಗಂಡಾನೆಯೂ ಇದೆ. ಇದನ್ನು ನಾನು 8 ವರ್ಷದ ಹಿಂದೆ ಖರೀದಿಸಿದ್ದೇನೆ. ಎರಡೂ ಆನೆಗಳನ್ನು ನೋಡಿಕೊಳ್ಳಲು ಕೇರ್ ಟೇಕರ್ಸ್ ಗಳಿದ್ದಾರೆ. ಇಬ್ಬರನ್ನು ನಾನು ತುಂಬಾ ಇಷ್ಟಪಡುತ್ತೇನೆ ಅದಕ್ಕಾಗಿ ನನ್ನನ್ನು ಮಾಹುತ ಎಂದು ಕರೆಸಿಕೊಳ್ಳುವುದಿಲ್ಲ ಎಂದು ಶಿಮಿಲ್ ಹೇಳುತ್ತಾರೆ.
ನಾನು ʼಕಾವೇರಿʼಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೇನೆ. ಹೀಗಾಗಿ ನನ್ನ ಕುಟುಂಬದ ಕೂಡ ನನ್ನನ್ನು ತಮಾಷೆ ಮಾಡುತ್ತದೆ. ನಾನು ಕಾವೇರಿಯನ್ನು ಬಿಟ್ಟು ಒಂದು ದಿನವೂ ದೂರವಿದ್ದರೆ ತುಂಬಾ ಕಷ್ಟವಾಗುತ್ತದೆ. ಅದಕ್ಕಾಗಿ ನಾನು ಒಂದು ದಿನವೂ ರಜೆ ತೆಗೆದುಕೊಳ್ಳುವುದಿಲ್ಲ. ಈ ಕಾರಣದಿಂದ ನನ್ನ ಹೆಂಡತಿ ಮತ್ತು ಮಗ ನನ್ನಿಂದ ದೂರವಿರುತ್ತಾರೆ. ಆದರೆ ಅದು ಕ್ಷಣಿಕದ ಮುನಿಸು. ಅವಳಿಗೂ ʼಕಾವೇರಿʼ ಅಂದರೆ ಇಷ್ಟವೆನ್ನುತ್ತಾರೆ ಶಿಮಿಲ್.
ವಿದ್ಯಾರ್ಥಿ ಜೀವನದಿಂದಲೂ ಪ್ರಾಣಿಪ್ರಿಯನಾಗಿರುವ ಶಿಮಿಲ್: ಆನೆಗಳೊಂದಿಗೆ ಹೆಚ್ಚಿನ ಸಮಯ ಕಳೆಯುವ ಶಿಮಿಲ್ ಅವರ ಪ್ರಾಣಿ ಪ್ರೀತಿ ಆನೆಗಳಿಗಷ್ಟೇ ಸೀಮಿತವಾಗಿಲ್ಲ. ಅವರ ಬಳಿ ಇನ್ನು ಹಲವು ಪ್ರಾಣಿಗಳಿವೆ. ಅದಕ್ಕಾಗಿಯೇ ಶೆಡ್ ಗಳನ್ನು ನಿರ್ಮಿಸಿಕೊಂಡಿದ್ದಾರೆ.
ಮನೆಯಲ್ಲಿ ಸಾಕುತ್ತಿದ್ದ ಮೀನುಗಳನ್ನು ನೋಡಿಕೊಳ್ಳಲು ಪ್ರಾರಂಭಿಸಿದಾಗಿನಿಂದ ಪ್ರಾಣಿಗಳ ಬಗ್ಗೆ ಶಿಮಿಲ್ ಅವರ ಒಲವು ಆರಂಭವಾಯಿತು. ಮೊದಲಿಗೆ ಇದು ಅವರ ಹೆತ್ತವರಿಗೆ ಇಷ್ಟವಿರಲಿಲ್ಲ. ಕೆಲವೊಮ್ಮೆ ದಾರಿಯಲ್ಲಿ ಹೋದಾಗ ಯಾರೋ ಬಿಟ್ಟು ಹೋಗುತ್ತಿದ್ದ ಬೆಕ್ಕಿನ ಮರಿಗಳನ್ನು ಮನೆಗೆ ತಂದು ಸಾಕುತ್ತಿದ್ದರು. ಅಪ್ಪ- ಅಮ್ಮನಿಗೆ ತಿಳಿಯದಂತೆ ಅವುಗಳನ್ನು ಮನೆಯ ಹಿಂದೆ ಸಾಕಿ ಸಲಹುತ್ತಿದ್ದರು.
ಬೆಂಗಳೂರಿನಲ್ಲಿದ್ದಾಗ ಹಸುಗಳನ್ನು ಸಾಕಿದ್ದ ಶಿಮಿಲ್: ನಾನು ಬಿಬಿಎ ಅಧ್ಯಯನಕ್ಕಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾಗ. ಅಲ್ಲಿ ವೃದ್ಧೆಯೊಬ್ಬರು ಕೆಲ ಹಸುಗಳನ್ನು ಸಾಕುತ್ತಿದ್ದರು. ಕಾಲೇಜು ಮುಗಿದ ಬಳಿಕ ಆ ಹಸುಗಳೊಂದಿಗೆ ಸಮಯ ಕಳೆಯುತ್ತಿದ್ದೆ. ನಾನು ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ಕೆಳಗಿದ್ದ ಪಾರ್ಕಿಂಗ್ ಏರಿಯಾದಲ್ಲಿ ನಮ್ಮ ಎರಡು ಹಸುಗಳು ಮತ್ತು ಕರುವನ್ನು ಸಾಕಲು ನಾನು ಮಾಲೀಕರ ಬಳಿ ಅನುಮತಿಯನ್ನು ಕೇಳಿದ್ದೆ” ಎಂದು ಹಳೆಯ ದಿನಗಳ ಬಗ್ಗೆ ಶಿಮಿಲ್ ಹೇಳುತ್ತಾರೆ.
ಹೀಗಿರುವಾಗಲೇ ಉದ್ಯಮಿಯಾಗಿದ್ದ ಶಿಮಿಲ್ ಅವರ ತಂದೆಗೆ ಅನಾರೋಗ್ಯ ಉಂಟಾದ ಕಾರಣ. ಅವರು ಅರ್ಧದಲ್ಲೇ ತನ್ನ ಶಿಕ್ಷಣವನ್ನು ಮೊಟಕುಗೊಳಿಸಿ ಊರಿಗೆ ಮರಳುತ್ತಾರೆ. ಬೆಂಗಳೂರಿನಲ್ಲಿ ಸಾಕುತ್ತಿದ್ದ ಹಸು ಹಾಗೂ ಕರುವನ್ನು ಕರೆತರುವುದಾಗಿ ಶಿಮಿಲ್ ಬೊಲೆರೊ ವಾಹನವನ್ನು ಖರೀದಿಸುತ್ತಾರೆ. ಅಲ್ಲಿಂದ ಬೊಲೆರೊದಲ್ಲಿ ಕರುವನ್ನು ಹಾಗೂ ಮತ್ತೊಂದು ವ್ಯಾನ್ ನಲ್ಲಿ ಹಸುವನ್ನು ತಂದು ತನ್ನ ಮನೆಯ ಶೆಡ್‌ಗೆ ನಲ್ಲಿ ಸಾಕಲು ಶುರು ಮಾಡುತ್ತಾರೆ.
“ಮನೆಯಲ್ಲಿ ಜಾಗದ ಕೊರತೆಯಿದ್ದ ಕಾರಣ, ಪ್ರಾಣಿಗಳನ್ನು ಸಾಕಲು ಕಷ್ಟವಾಗುತ್ತಿತ್ತು. ಹಾಗಾಗಿ ನಮ್ಮ ಕಛೇರಿಯ ಹಿಂಬದಿಯ ಗದ್ದೆಯ ಬಳಿಯ ಶೆಡ್‌ನಲ್ಲಿ ಹಸುಗಳನ್ನು ಸಾಕಿದ್ದೆ. ಆ ಬಳಿಕ ನಾವು ಹೊಸ ಮನೆಗೆ ಶಿಫ್ಟ್ ಆದಾಗ, ಅಲ್ಲಿ ದೊಡ್ಡ ಶೆಡ್ ವೊಂದನ್ನು ಪ್ರಾಣಿಗಳಿಗಾಗಿಯೇ ಮೀಸಲಿಟ್ಟೆ” ಎಂದು ಶಿಮಿಲ್ ಹೇಳುತ್ತಾರೆ.
ಹಸುಗಳಿಂದ ಶುರು ಮಾಡಿದ ಅವರ ಶೆಡ್ ನಲ್ಲಿಂದು ಕುದುರೆಗಳು, ಎಮ್ಮೆಗಳು, ನಾಯಿಗಳು, ಬೆಕ್ಕುಗಳು, ಕೋಳಿಗಳು, ಬಾತುಕೋಳಿಗಳು, ನವಿಲು ಕೂಡ ಇದೆ. ಒಂದು ಕಾಲದಲ್ಲಿ ಶಿಮಿಲ್ ಅವರ ಬಳಿ 30 ಕುದುರೆಗಳಿದ್ದವು. ಆದರೆ ಈಗ 9 ಕುದುರೆಗಳಿವೆ. ಶಿಮಿಲ್ , ಪಶುಸಂಗೋಪನಾ ಇಲಾಖೆಯೊಂದಿಗೆ ಸೇರಿ ಬೀದಿ ನಾಯಿ ಹಾಗೂ ಇತರೆ ಪ್ರಾಣಿಗಳನ್ನು ರಕ್ಷಿಸುವ ಕೆಲಸವನ್ನು ಮಾಡುತ್ತಾರೆ.
ಶಿಮಿಲ್ ʼಕಾವೇರಿʼ ಸೇರಿದಂತೆ ಇತರೆ ಪ್ರಾಣಿಗಳೊಂದಿಗೆ ಆತ್ಮೀಯ ಬಂಧದ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅವರ ಯೂಟ್ಯೂಬರ್ (IKKANTE KAVERI) ಚಾನೆಲ್ ಗೆ 61.7 ಸಾವಿರ ಸಬ್ ಸ್ಕ್ರೈಬರ್ಸ್ ಇದ್ದಾರೆ.
-ಸುಹಾನ್ ಶೇಕ್