ಮೂಡುಬಿದಿರೆ/ಬಂಟ್ವಾಳ: ದ್ವಿತೀಯ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕೌಶಿಕ್ ಅಂಗ ವೈಕಲ್ಯದ ಮಿತಿಯ ನಡುವೆಯೂ ಕಾಲಿನಲ್ಲೇ ಪರೀಕ್ಷೆ ಬರೆದು 524 ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ.
ಬಂಟ್ವಾಳ ಕಂಚುಗಾರ ಪೇಟೆ ರಾಜೇಶ ಆಚಾರ್ಯ- ಜಲಜಾಕ್ಷಿ ದಂಪತಿಯ ಪುತ್ರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದತ್ತು ಸ್ವೀಕಾರ ಯೋಜನೆಯಡಿ ಉಚಿತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಎಂದು ಡಾ| ಎಂ ಮೋಹನ ಆಳ್ವ ಪ್ರಶಂಸಿಸಿದರು. ದಿನವೂ ಮನೆಗೆ ಹೋಗಿ ಬಂದೇ ಶಿಕ್ಷಣ ಪಡೆದ ಕೌಶಿಕ್ ಆರು ತಿಂಗಳ ಹಿಂದಷ್ಟೇ ತಂದೆಯನ್ನು ಕಳಕೊಂಡಿದ್ದು ಆಳ್ವಾಸ್ ಆಶ್ರಯದಲ್ಲಿ ಪದವಿ ಶಿಕ್ಷಣ ಪಡೆಯುವ ಹಂಬಲದಲ್ಲಿದ್ದಾರೆ.
ಎರಡು ವರ್ಷಗಳ ಹಿಂದೆ ಬಂಟ್ವಾಳದ ಎಸ್‌ವಿಎಸ್ ದೇವಳ ಪ್ರೌಢಶಾಲೆಯ ವಿದ್ಯಾರ್ಥಿಯಾಗಿ ಕಾಲಿನಲ್ಲೇ ಎಸೆಸೆಲ್ಸಿ ಪರೀಕ್ಷೆ ಬರೆದು ಅಂದಿನ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಅವರ ಗಮನ ಸೆಳೆದಿದ್ದರು. ಆ ಬಳಿಕ ಅವರು ಪೊಳಲಿಗೆ ಭೇಟಿ ನೀಡಿದ ಸಂದರ್ಭ ಕೌಶಿಕ್‌ನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.