Advertisement

ಕಾಪು: ಒಳಚರಂಡಿ ಕಾಮಗಾರಿ ವೇಳೆ ದುರಂತ; ಕಾರ್ಮಿಕರಿಬ್ಬರ ಸಾವು

01:20 PM Feb 28, 2018 | Team Udayavani |

ಕಾಪು: ಕಾಪು ಪೇಟೆಯ ಒಳ ಚರಂಡಿ ನೀರು ಸರಬರಾಜು ಯೋಜನೆಗಾಗಿ ಪೈಪ್‌ಲೈನ್‌ ಮತ್ತು ಮ್ಯಾನ್‌ಹೋಲ್‌ ಅಳವಡಿಸುವುದಕ್ಕಾಗಿ ಜೆಸಿಬಿ ಮೂಲಕ ಹೊಂಡ ತೆಗೆಯುತ್ತಿದ್ದ ಸಂದರ್ಭ ಮಣ್ಣು ಕುಸಿದು ಕಾರ್ಮಿಕರಿಬ್ಬರು ಮೃತಪಟ್ಟ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.

Advertisement

ಗುತ್ತಿಗೆ ಕಾರ್ಮಿಕರಾದ ದಾವಣಗೆರೆ ಜಿಲ್ಲೆ, ಮ್ಯಾಸರಹಳ್ಳಿಯ ದಾಸಪ್ಪ (42) ಮತ್ತು ಚಿತ್ರದುರ್ಗ ಜಿಲ್ಲೆ, ನಂದಿಪುರ ಗ್ರಾಮದ ಉಮೇಶ್‌ (40) ಮೃತರು.

ಕಾಪು ಪೇಟೆಯಲ್ಲಿ ಕರ್ನಾಟಕ ನೀರು ಮತ್ತು ಒಳಚರಂಡಿ ಸರಬರಾಜು ಮಂಡಳಿಯ ಮೂಲಕ ಬಿಡುಗಡೆ ಗೊಂಡಿರುವ ಪೈಪ್‌ಲೈನ್‌ ಮತ್ತು ಮ್ಯಾನ್‌ಹೋಲ್‌ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಜೆಸಿಬಿ ಬಳಸಿ ಹೊಂಡ ತೆಗೆಯ ಲಾಗಿತ್ತು.

ಕಾರ್ಮಿಕರು ಹೊಂಡದ ಇಕ್ಕೆಲಗಳಲ್ಲಿ ನಿಂತು ಹೊಂಡದ ಆಳ- ಅಗಲ ಅಳೆಯುತ್ತಿದ್ದಾಗ ಮತ್ತೂಂದು ಮಗ್ಗುಲಿನಲ್ಲಿ ವಾಹನ ಸಂಚರಿಸಿದ್ದು, ನೆಲ ಅದುರಿ ಡಾಮರು ರಸ್ತೆ ಮತ್ತು ಮಣ್ಣು ಜತೆಯಾಗಿ ಹೊಂಡದೊಳಗೆ ಕುಸಿದು ದುರಂತ ಸಂಭವಿಸಿದೆ.

ರಕ್ಷಣೆಗೆ ಪ್ರಯತ್ನ
ಸುಮಾರು 12 ಅಡಿ ಆಳದ ಈ ಹೊಂಡಕ್ಕೆ ಕಾರ್ಮಿಕರಿಬ್ಬರು ಆಯತಪ್ಪಿ ಬಿದ್ದ ಕೂಡಲೇ ಜೆಸಿಬಿ ಚಾಲಕ ಜೆಸಿಬಿಯಿಂದಲೇ  ಹೊಂಡದ ಮಣ್ಣು ತೆಗೆದು ಸಹೋದ್ಯೋಗಿ ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನ ಮಾಡಿದ್ದರು.
ಕಾರ್ಮಿಕರನ್ನು ಪತ್ತೆಹಚ್ಚಿ ಆಮ್ಲಜನಕ ನೀಡಲೆತ್ನಿಸಲಾಯಿತು. ಸತತ 30 ನಿಮಿಷಗಳ ಪ್ರಯತ್ನದ ಬಳಿಕ ಕಾರ್ಮಿಕರನ್ನು ಹೊರತೆಗೆದು ಉಡುಪಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಇಬ್ಬರೂ ಕೊನೆಯುಸಿರೆಳೆದರು ಎನ್ನಲಾಗಿದೆ.

Advertisement

ಗುತ್ತಿಗೆ ವಹಿಸಿಕೊಂಡಿದ್ದ ಮೇಸಿŒ ಮತ್ತು ಗುತ್ತಿಗೆದಾರ ಕಂಪೆನಿ ಮುನ್ನೆಚ್ಚರಿಕೆ ತೆಗೆದುಕೊಳ್ಳದಿರುವುದು ದುರ್ಘ‌ಟನೆಗೆ ಕಾರಣ ಎಂದು ಆರೋಪಿಸಲಾಗಿದೆ.

ಶಾಸಕ ವಿನಯಕುಮಾರ್‌ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌, ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಜೆ.ಶೆಟ್ಟಿ, ಕಾಪು ಪುರಸಭಾ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಎಚ್‌. ಉಸ್ಮಾನ್‌, ಮುಖ್ಯಾಧಿಕಾರಿ ರಾಯಪ್ಪ ಭೇಟಿ ನೀಡಿದ್ದಾರೆ.

ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರ ಚಂದ್ರ, ಕಾಪು ಸಿಐ ಹಾಲಮೂರ್ತಿ ರಾವ್‌, ಕಾಪು ಎಸ್‌ಐ ನಿತ್ಯಾನಂದ ಗೌಡ ತನಿಖೆ ಮುಂದುವರಿಸಿದ್ದಾರೆ.

ಕುಟುಂಬಕ್ಕೆ ಆಧಾರವಾಗಿದ್ದರು
ಮೃತರ ಪೈಕಿ ದಾಸಪ್ಪ ದಾವಣಗೆರೆ ಜಿಲ್ಲೆಯವರಾಗಿದ್ದರೆ, ಮತ್ತೋರ್ವ ಉಮೇಶ್‌ ಚಿತ್ರದುರ್ಗ ಜಿಲ್ಲೆಯವರಾಗಿದ್ದಾನೆ. ದಾವಣಗೆರೆ ಮೂಲದ ದಾಸಪ್ಪ ಅವರ ಪತ್ನಿ ಮೂರು ವರ್ಷಗಳ ಹಿಂದೆ ತೀರಿ ಹೋಗಿದ್ದಾರೆ. ಇಬ್ಬರು ಹೆಣ್ಣುಮಕ್ಕಳು ಊರಿನಲ್ಲಿ ಸಂಬಂಧಿಕರ ಜತೆಗಿದ್ದು, ಶಿಕ್ಷಣ ಪಡೆಯುತ್ತಿದ್ದಾರೆ. ತಾಯಿಯಿಲ್ಲದ ಮಕ್ಕಳಿಗೆ ತಂದೆಯೇ ಆಧಾರವಾಗಿದ್ದರು. ಚಿತ್ರದುರ್ಗ ಮೂಲದ ಉಮೇಶ್‌ಗೆ ಪತ್ನಿ, ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರಿದ್ದು, ಅವರು ಕೂಡ ತಮ್ಮ ಊರಿನಲ್ಲೇ ಇದ್ದಾರೆ. ಉಮೇಶ್‌ ತನ್ನ ಕುಟುಂಬಕ್ಕೆ ಆಧಾರವಾಗಿದ್ದರು. ಮೃತರಿಬ್ಬರೂ ಕಳೆದ ಮೂರು ವರ್ಷಗಳಿಂದ ಉಡುಪಿಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು.

– ಇತರರಿಗೆ ಎಚ್ಚರಿಕೆ ನೀಡುತ್ತಿದ್ದರು
ಮೃತ ದಾಸಪ್ಪ ಮತ್ತು ಉಮೇಶ್‌ ಕಾಮಗಾರಿ ನಡೆಯುತ್ತಿದ್ದ ಪ್ರದೇಶ ದಲ್ಲಿ ರಸ್ತೆ ಪಕ್ಕ ನಿಲ್ಲಿಸುತ್ತಿದ್ದ ವಾಹನಗಳನ್ನು ತೆರವುಗೊಳಿಸುವಂತೆ ಮತ್ತು ಹೊಂಡದ ಬಳಿ ಯಾರೂ ನಡೆದಾಡದಂತೆ ಸಾರ್ವಜನಿಕರಿಗೆ ನಿರಂತರ ವಾಗಿ ಎಚ್ಚರಿಕೆ ನೀಡುತ್ತಿದ್ದರು. ಅಲ್ಲದೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರಲ್ಲೂ ನಿಧಾನವಾಗಿ, ಜಾಗರೂಕತೆಯಿಂದ ವಾಹನ ಚಲಾಯಿಸುವಂತೆ ವಿನಂತಿ ಮಾಡುತ್ತಿದ್ದರು. ಇತರರನ್ನು ಎಚ್ಚರಿಸುತ್ತಿದ್ದ ಕಾರ್ಮಿಕರೇ ಮಣ್ಣು ಕುಸಿದು ಮೃತಪಟ್ಟಿರುವುದು ವಿಪರ್ಯಾಸ.

Advertisement

Udayavani is now on Telegram. Click here to join our channel and stay updated with the latest news.

Next