Advertisement

ಕಾಪು : ಪೊಲಿಪುವಿನಲ್ಲಿ ಕಡಲ್ಕೊರೆತ ಭೀತಿ, ಕಾಮಗಾರಿ ವಿಳಂಬ ಖಂಡಿಸಿ ಸ್ಥಳೀಯರಿಂದ ಪ್ರತಿಭಟನೆ

03:35 PM May 20, 2022 | Team Udayavani |

ಕಾಪು‌ : ಕಾಪು ಪುರಸಭಾ ವ್ಯಾಪ್ತಿಯ ಪೊಲಿಪು ವಾರ್ಡ್‌ ನ ಸಮುದ್ರ ತೀರದಲ್ಲಿ ಕಡಲ್ಕೊರೆತ ತಡೆಗೆ ತಡೆಗೋಡೆ ರಚಿಸುವ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿರುವುದರಿಂದ ಸ್ಥಳೀಯರಲ್ಲಿ ಕಡಲ್ಕೊರೆತದ ಭೀತಿ ಎದುರಾಗಿದ್ದು ಸರಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಖಂಡಿಸಿ ಸ್ಥಳೀಯರು ಶುಕ್ರವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನೆಯಲ್ಲಿ‌‌ ಭಾಗವಹಿಸಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಈ ಹಿಂದೆ ಸಮುದ್ರ ದಡದಲ್ಲಿ ಹಾಕಲಾಗಿದ್ದ ತಡೆಗೋಡೆಯನ್ನು ತೆರವುಗೊಳಿಸಿ, ಹೊಸತಾಗಿ ಸದೃಢವಾದ ತಡೆಗೋಡೆ ನಿರ್ಮಿಸಿಕೊಡುತ್ತೇವೆ ಎಂದು ವಾಗ್ದಾನ ಮಾಡಿ ಯಾವುದೇ ರೀತಿಯ ಕಾಮಗಾರಿಯನ್ನು ಕೈಗೊಳ್ಳದ ಪರಿಣಾಮ ಈ ಪರಿಸರದ 8ರಿಂದ 10 ಮನೆಗಳು ಮತ್ತು ಹಲವಾರು ತೆಂಗಿನಮರಗಳು ನೀರು ಪಾಲಾಗುವ ಹಂತದಲ್ಲಿವೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಆತಂಕದಿಂದ ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ರಾಜ್ಯ ಸರಕಾರ ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ವಿವಿಧ ರೀತಿಯ ಅಕ್ರಮಗಳನ್ನು ಬೆಂಬಲಿಸುತ್ತಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂಧಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಇಲ್ಲಿನ ಸಮಸ್ಯೆಗೆ ಎರಡು ದಿನದಲ್ಲಿ ಪರಿಹಾರ ನೀಡದಿದ್ದಲ್ಲಿ ಕರಾವಳಿಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪುರಸಭಾ ಸದಸ್ಯೆ ರಾಧಿಕಾ ಸುವರ್ಣ ಮಾತನಾಡಿ, ಇಲ್ಲಿನ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿ, ಕಾರ್ಯ ನಿರ್ವಾಹಕ ಅಭಿಯಂತರರು, ಗುತ್ತಿಗೆದಾರರು ಮತ್ತು ಜನಪ್ರತಿನಿಧಿಗಳಿಗೆ ಮಾಹಿತಿ ನೀಡಲಾಗಿದೆ. ಎಲ್ಲರೂ ಶೀಘ್ರದಲ್ಲೇ ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಭರವಸೆ ನೀಡಿ ಮೂರು ತಿಂಗಳು ಕಳೆದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವ ಕಾರಣ ಮತ್ತು ಮಳೆಗಾಲವು ಪ್ರಾರಂಭವಾಗಿದ್ದು ಮನೆ ಮರಗಳು ಸಮುದ್ರ ಪಾಲಾಗುವ ಭೀತಿಯಿರುವುದರಿಂದ ಎಲ್ಲರನ್ನೂ ಎಚ್ಚರಿಸುವ ಸಲುವಾಗಿ ಸಾಂಕೇತಿಕವಾಗಿ ಪ್ರತಿಭಟನೆ ಆಯೋಜಿಸಲಾಗಿದೆ.

ಇದನ್ನೂ ಓದಿ : ಆಸಕ್ತಿಯೇ ನಮ್ಮನ್ನು ಮುನ್ನಡೆಸುವ ದೊಡ್ಡ ಶಕ್ತಿ : ಘಟಂ ವಾದಕ ಗಿರಿಧರ್‌ ಉಡುಪ ಮನದ ಮಾತು…

Advertisement

ಪುರಸಭಾ ಸದಸ್ಯರಾದ ಫರ್ಜಾನಾ, ಶೋಭಾ‌ ಬ‌ಂಗೇರ, ಕಾಂಗ್ರೆಸ್ ಮುಖಂಡರಾದ ರಾಜೇಶ್ ಮೆಂಡನ್, ಸುಧಾಕರ ಸಾಲ್ಯಾನ್, ಅಶ್ವಿನಿ ಬಂಗೇರ, ಲವ ಕರ್ಕೇರ, ದೇವರಾಜ್ ಕೋಟ್ಯಾನ್ , ಅರುಣ್ ಶೆಟ್ಟಿ, ಅಶೋಕ್ ನಾಯಿರಿ, ಸ್ಥಳೀಯರಾದ ಸದಾನಂದ ಸುವರ್ಣ, ರತ್ನಾಕರ ಮೆಂಡನ್, ಲಕ್ಷ್ಮಣ ಸುವರ್ಣ, ಸದಾಶಿವ ಸುವರ್ಣ, ಅಶೋಕ್ ಸುವರ್ಣ, ಉದಯ ಸುವರ್ಣ, ಮನೋಜ್ ಪುತ್ರನ್, ದಿನೇಶ್ ಕುಂದರ್, ದಿನೇಶ್ ಮೆಂಡನ್, ಸೂರ್ಯನಾರಾಯಣ್, ಅಖಿಲ್, ರೋಹಿಣಿ, ಸುಧಾಕರ ಸುವರ್ಣ, ರಿತೇಶ್, ಕೃಷ್ಣ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next