ಕಾಪು: ಹದಿನೈದು ತಿಂಗಳ ಹಿಂದೆ ನಡೆದ ಅಪಘಾತದಿಂದ ಗಾಯಗೊಂಡಿದ್ದ ಗಾಯಾಳು ಅನಾರೋಗ್ಯ ಉಲ್ಬಣಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಎ. 16ರಂದು ನಡೆದಿದೆ.
ಬೈಂದೂರು ಮೂಲದ ಪ್ರಸ್ತುತ ಮಣಿಪುರ ಗ್ರಾಮದ ಕೋಡಂಗಳದಲ್ಲಿ ವಾಸವಿರುವ ಗಣೇಶ್ ನಾವಡ ಮೃತರು.
ಗಣೇಶ್ ಅವರಿಗೆ 2023ರ ಜ. 9ರಂದು ಕುಂಭಾಸಿ ಆನೆಗುಡ್ಡೆ ಸ್ವಾಗತ ಗೋಪುರ ಬಳಿ ರಸ್ತೆ ಅಪಘಾತವಾಗಿ ತಲೆಗೆ ಹಾಗೂ ಕೈ ಕಾಲುಗಳಿಗೆ ಗಂಭೀರ ಗಾಯವಾಗಿತ್ತು. ತಲೆಗೆ ಆದ ಗಂಭೀರ ಗಾಯಗಳಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆ ಮತ್ತು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪ್ರಸ್ತುತ ತಿಂಗಳಿಗೊಮ್ಮೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು.
ಎ. 14ರಂದು ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಚಿಕಿತ್ಸೆಯಲ್ಲಿರುವಾಗಲೇ ಎ. 16ರಂದು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ರಸ್ತೆ ಅಪಘಾತದಿಂದ ತಲೆಗೆ ಆದ ಗಂಭೀರ ಗಾಯ ಅಥವಾ ಇನ್ಯಾವುದೋ ಕಾರಣದಿಂದ ಮೃತ ಪಟ್ಟಿರಬಹುದಾಗಿದೆ ಎಂದು ಮೃತರ ಸಹೋದರ ನೀಡಿರುವ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.