Advertisement

ಕಾಪು ಪೊಲೀಸರ ಯಶಸ್ವಿ ಕಾರ್ಯಾಚರಣೆ: 6 ಲಕ್ಷ ರೂ. ದೋಚಿದ್ದ ಕಳ್ಳ ಆಂಧ್ರಪ್ರದೇಶದಲ್ಲಿ ಸೆರೆ

12:38 AM Feb 24, 2023 | Team Udayavani |

ಕಾಪು: ಗ್ರಾಹಕರ ಸೋಗಿನಲ್ಲಿ ಖರೀದಿಗೆಂದು ಬಂದು ಅಂಗಡಿ ಮಾಲಕನ ಗಮನ ಬೇರೆಡೆಗೆ ಸೆಳೆದು 6 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದ ತಂಡದಲ್ಲಿದ್ದ ಓರ್ವನನ್ನು ಕಾಪು ಪೋಲಿಸರು ಆಂಧ್ರಪ್ರದೇಶ ರಾಜ್ಯದ ಮದನಪಲ್ಲಿಯಲ್ಲಿ ಬಂಧಿಸಿ ಕರೆತಂದಿದ್ದಾರೆ.

Advertisement

ಆಂಧ್ರಪ್ರದೇಶದ ಸುನಿಲ್‌ (29) ಬಂಧಿತ ಆರೋಪಿ. ಕಳೆದ ಡಿ. 22ರಂದು ರಾತ್ರಿ ಕಾಪು ಮಹಾಲಸಾ ಸ್ಟೋರ್‌ನ ಮಾಲಕ ರಾಘವೇಂದ್ರ ಕಿಣಿ ಅವರು ಅಂಗಡಿ ಮುಚ್ಚುತ್ತಿದ್ದರು. ಈ ವೇಳೆ ಗ್ರಾಹಕರಂತೆ ಮೂರು ಜನ ಬಂದು ಹಾಲು ಕೊಡುವಂತೆ ಕೇಳಿದ್ದರು.

ಆ ವೇಳೆ ಮಾಲಕ ಅಂಗಡಿಯ ಒಳಹೋಗಿ ಹಾಲಿನ ಸ್ಯಾಚೆಟ್‌ ತಂದುಕೊಟ್ಟಿದ್ದರು. ಈ ಸಂದರ್ಭವನ್ನು ಬಳಸಿಕೊಂಡಿದ್ದ ಕಳ್ಳರ ಸೋಗಿನಲ್ಲಿದ್ದ ಗ್ರಾಹಕರು ಅಂಗಡಿ ಬಳಿಯೇ ನಿಲ್ಲಿಸಿದ್ದ ಮಾಲಕನ ಸ್ಕೂಟರ್‌ನಲ್ಲಿಟ್ಟಿದ್ದ 6 ಲಕ್ಷ ರೂ. ನಗದನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಅಂಗಡಿ ಮಾಲಕರು ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಕಾರ್ಯಾಚರಣೆಯಲ್ಲಿ ಕಾಪು ಠಾಣಾ ಎಎಸ್‌ಐ ದಯಾನಂದ ಹಾಗೂ ಕಾಪು ಠಾಣಾ ಸಿಬಂದಿ ಗಣೇಶ್‌ ಹಾಗೂ ಶಿರ್ವ ಠಾಣಾ ಸಿಬಂದಿ ರಾಘವೇಂದ್ರ ಪಾಲ್ಗೊಂಡಿದ್ದರು.

ಅಂತಾರಾಜ್ಯ ತಂಡದವರು
ಚಿತ್ರದುರ್ಗದಲ್ಲಿ ವಾಸವಿದ್ದ ಅಂತಾರಾಜ್ಯ ತಂಡದ ಮೂವರನ್ನು ಪ್ರಕರಣವೊಂದಕ್ಕೆ ಸಂಬಂಧಿಸಿ ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದರು. ಈ ಪೈಕಿ ಇಬ್ಬರು ಜಾಮೀನು ಪಡೆದು ತಲೆಮರೆಸಿಕೊಂಡಿದ್ದರು. ಓರ್ವ ಆರೋಪಿ ಸುನಿಲ್‌ ಪೋಲಿಸ್‌ ಕಸ್ಟಡಿಯಲ್ಲಿದ್ದ. ಈ ಮಾಹಿತಿ ಪಡೆದ ಕಾಪು ಪೋಲಿಸರು ಅಲ್ಲಿಗೆ ತೆರಳಿ ಆರೋಪಿಯನ್ನು ತಮ್ಮ ವಶಕ್ಕೆ ಪಡೆದು ಕರೆತಂದಿದ್ದಾರೆ. ಆರೋಪಿಗಳು ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಹಲವಾರು ಕಳ್ಳತನ ಪ್ರಕರಣಗಳ ಆರೋಪಿಗಳಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next