Advertisement

Kaup: ಬೀಚ್‌ನಲ್ಲಿನ್ನು ಪ್ಯಾರಾ ಮೋಟರಿಂಗ್‌

08:21 PM Nov 29, 2024 | Team Udayavani |

ಕಾಪು: ಮನೋಹರಗಡ‌ ಕೋಟೆಯ ಪಳೆಯುಳಿಕೆ, ಬೃಹದಾಕಾರದ ಬಂಡೆಯ ಮೇಲೆ ಬ್ರಿಟಿಷರಿಂದ ನಿರ್ಮಿಸಲ್ಪಟ್ಟ ಲೈಟ್‌ ಹೌಸ್‌ನೊಂದಿಗೆ ಗಮನ ಸೆಳೆಯುತ್ತಿರುವ ಕಾಪು ಬೀಚ್‌ನಲ್ಲಿ ಸಾಹಸ ಪ್ರವಾಸೋದ್ಯಮಕ್ಕೆ ಪೂರಕವಾಗಿ ಪ್ಯಾರಾ ಮೋಟರಿಂಗ್‌ ರೈಡ್‌ ಜೋಡಣೆಯಾಗಲಿದೆ ಪ್ರವಾಸೋದ್ಯಮ ಇಲಾಖೆಯ ಅನುಮತಿಯೊಂದಿಗೆ ಕರಾವಳಿ ಅಡ್ವೆಂಚರ್ ನೇತೃತ್ವದಲ್ಲಿ ಡಿ. 1ರಿಂದ ಕಾಪು ಬೀಚ್‌ನಲ್ಲಿ ಪ್ಯಾರಾ ಮೋಟರಿಂಗ್‌ ಆರಂಭವಾಗಲಿದೆ.

Advertisement

8-10 ಕಿ. ಮೀ. ರೈಡ್‌
ಕಾಪುವಿನಿಂದ ಮಟ್ಟು ಬೀಚ್‌ಗೆ ತೆರಳಿ ಅಲ್ಲಿಂದ ಕಾಪುವಿಗೆ ಮರಳುವ ವ್ಯವಸ್ಥೆಯಿದ್ದು 8-10 ಕಿ.ಮೀ. ದೂರದ ಸುಂದರ ಪ್ರವಾಸಿ ಅನುಭವ ದೊರಕಲಿದೆ. ಸಿಂಗಲ್‌ ರೈಡರ್‌ ವ್ಯವಸ್ಥೆಯ ಪ್ಯಾರಾ ಮೋಟರಿಂಗ್‌ನಲ್ಲಿ ನುರಿತ ಪೈಲಟ್‌ಗಳು ಕಾರ್ಯ ನಿರ್ವಹಿಸಲಿದ್ದಾರೆ. ಆನ್‌ಲೈನ್‌ ಬುಕ್ಕಿಂಗ್‌ ಮತ್ತು ದೂರವಾಣಿ ಮೂಲಕ ಬುಕ್ಕಿಂಗ್‌ಗೆ ವ್ಯವಸ್ಥೆಯಿದೆ.

ಇನ್ನಷ್ಟು ಆಕರ್ಷಣೆಗಳು
ಕಾಪು ಬೀಚ್‌ನಲ್ಲಿ ಸ್ಕೂಬಾ ಡೈವಿಂಗ್‌ ವ್ಯವಸ್ಥೆಯಿದೆ. ಅದರ ಜತೆಗೆ ಮಕ್ಕಳ ಮನೋರಂಜನೆಗಾಗಿ ವಿವಿಧ ವ್ಯವಸ್ಥೆಗಳಿವೆ. ಮಿನಿ ಬೈಕ್‌ ರೈಡಿಂಗ್‌, ಒಂಟೆ ಸವಾರಿ, ಬಿಸಿಲಿಗೆ ಮೈಯ್ಯೊಡ್ಡಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯಿದೆ. ಡಿ.1ರಿಂದ ವಾಟರ್‌ ನ್ಪೋರ್ಟ್ಸ್ ರೂಪದಲ್ಲಿ ಸ್ಪೀಡ್‌ ಬೋಟ್‌, ಜಸ್ಕಿ, ಬಂಪರ್‌, ಬನಾನ ಬೋಟ್‌ ಸಹಿತ ನಾಲ್ಕೈದು ಮನೋರಂಜನಾ ಸಲಕರಣೆಗಳೂ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ.

ಕಾಪು ಬೀಚ್‌ ವಿಶೇಷತೆಗಳೇನು?
– ಕಾಪು ಬೀಚ್‌ ಪ್ರಶಾಂತ ಕಡಲ ತೀರವಾಗಿದ್ದು ನೀಲಿ ಬಣ್ಣದ ನೀರು ಮತ್ತು ಶುದ್ಧ ಮರಳಿನಿಂದಾಗಿ ಪ್ರವಾಸಿಗರನ್ನು ಸೆಳೆಯುತ್ತಿದೆ.
– 1901ರಲ್ಲಿ ಬಂಡೆಯ ಮೇಲೆ ನಿರ್ಮಿಸಲಾದ 27 ಮೀಟರ್‌ ಎತ್ತರದ ದೀಪಸ್ತಂಭವು ಪ್ರಮುಖ ಆಕರ್ಷಣೆಗಳಲ್ಲಿ ಒಂದು.
– ಸಮುದ್ರದ ನೀರು ಅಲೆ ಅಲೆಗಳಾಗಿ ಕಲ್ಲು ಬಂಡೆಗಳಿಗೆ ಅಪ್ಪಳಿಸುವುದನ್ನು ಕಂಡು ಪ್ರವಾಸಿಗರು ರೋಮಾಂಚನಗೊಳ್ಳುತ್ತಾರೆ.
– ಲೈಟ್‌ಹೌಸ್‌ನ ಸುತ್ತಲೂ ಇರುವ ಬಂಡೆಕಲ್ಲುಗಳಲ್ಲಿ ಓಡಾಡುವಾಗ ತುಂಬ ಎಚ್ಚರ ಇರಬೇಕು. ನೀರಿನಲ್ಲಿ ಆಡುವಾಗಲೂ ಜಾಗೃತೆ ಬೇಕು.

ಈಗ ಸಿಂಗಲ್‌, ಮುಂದೆ ಡಬಲ್‌
ಕಾಪು ಬೀಚ್‌ನಲ್ಲಿ ಪ್ಯಾರಾ ಮೋಟರಿಂಗ್‌ ರೈಡ್‌ಗೆ ಅನುಮತಿಗಾಗಿ ಎರಡು ವರ್ಷಗಳಿಂದ ಪ್ರಯತ್ನ ನಡೆಸುತ್ತಿದ್ದೇವೆ. ಪ್ರಸ್ತುತ ಸಿಂಗಲ್‌ ರೈಡರ್‌ ವ್ಯವಸ್ಥೆಯನ್ನು ಜೋಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಡಬ್ಬಲ್‌ ರೈಡಿಂಗ್‌ಗೆ ವ್ಯವಸ್ಥೆ ಮಾಡಲಾಗುವುದು.
-ರಾಜೇಶ್‌ ಎಸ್‌. ಸುವರ್ಣ, ಕರಾವಳಿ ಅಡ್ವೆಂಚರ್

Advertisement

ಸುರಕ್ಷತೆ, ರಕ್ಷಣೆಗೆ ಪ್ರಮುಖ ಆದ್ಯತೆ
ಪ್ಯಾರಾ ಮೋಟರಿಂಗ್‌ ರೈಡ್‌ಗೆ ಅನುಮತಿ ನೀಡಲಾಗಿದೆ. ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಸೂಕ್ತ ದರ ನಿಗದಿ ಮಾಡಿಕೊಂಡು ರೈಡ್‌ಗೆ ಅವಕಾಶ ಮಾಡಿಕೊಡುವಂತೆ ಸೂಚನೆ ನೀಡಲಾಗಿದೆ. ಪ್ರವಾಸಿಗರ ರಕ್ಷಣೆ, ಭದ್ರತೆ ಮತ್ತು ಸುರಕ್ಷತೆ ಹಾಗೂ ಬೀಚ್‌ನಲ್ಲಿರುವ ಪ್ರವಾಸಿಗರಿಗೂ ತೊಂದರೆಯಾಗದಂತೆ ಕ್ರಮ ವಹಿಸಲು ಸೂಕ್ತ ನಿರ್ದೇಶನ ನೀಡಲಾಗಿದೆ.
-ಕುಮಾರ್‌ ಸಿ.ಯು., ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಉಡುಪಿ

ಪ್ರವಾಸೋದ್ಯಮ ಬೆಳೆಸಲು ಪೂರಕ
ಖಾಸಗಿ ಸಹಭಾಗಿತ್ವದೊಂದಿಗೆ ಪ್ಯಾರಾ ಮೋಟರಿಂಗ್‌ ರೈಡ್‌, ವಾಟರ್‌ ನ್ಪೋರ್ಟ್ಸ್ ಆರಂಭಕ್ಕೆ ಸಿದ್ಧತೆಗಳು ನಡೆಯುತ್ತಿರುವುದು ಸ್ವಾಗತಾರ್ಹ. ಕಾಪು ಸೇರಿದಂತೆ ಪಡುಬಿದ್ರಿ, ಹೆಜಮಾಡಿ, ಮಟ್ಟು ಸೇರಿ ವಿವಿಧ ಬೀಚ್‌ಗಳಲ್ಲಿ ಪ್ರವಾಸೋದ್ಯಮ ಬೆಳೆಸಲು ಪ್ರಯತ್ನಿಸುತ್ತಿದ್ದೇವೆ.
-ಗುರ್ಮೆ ಸುರೇಶ್‌ ಶೆಟ್ಟಿ, ಶಾಸಕರು, ಕಾಪು

ಏನಿದು ಪ್ಯಾರಾ ಮೋಟರಿಂಗ್‌?
ಇದು ಪ್ಯಾರಾ ಗ್ಲೈಡಿಂಗ್‌, ಪ್ಯಾರಾ ಸೈಲಿಂಗ್‌ಗಿಂತ ಸ್ವಲ್ಪ ಭಿನ್ನ. ಇದೊಂದು ಅಲ್ಟ್ರಾಲೆ„ಟ್‌ ವಿಮಾನ. ಹಾರಾಟ, ಸಾಹಸ ಕ್ರೀಡೆಗಳು ಮತ್ತು ವೈಮಾನಿಕ ಛಾಯಾಚಿತ್ರಗ್ರಹಣಕ್ಕಾಗಿ ಇಲ್ಲಿ ಅವಕಾಶವಿದೆ. ಇಲ್ಲಿ ಪೈಲಟ್‌ಗಳು ಮತ್ತು ಸವಾರರ ಹಿಂದೆ ಒಂದು ರೆಕ್ಕೆಗೆ ಜೋಡಿಸಲಾದ ಮೋಟರೀಕೃತ ಬೆನ್ನು ಹೊರೆ ಘಟಕ ಇರುತ್ತದೆ. ಪೋರ್ಟಬಲ್‌ ಎಂಜಿನ್‌ ಚಾಲಿತ ಪ್ರೊಪೆಲ್ಲರ್‌ ವ್ಯವಸ್ಥೆಯನ್ನು ಬಳಸಿಕೊಂಡು ಟೇಕ್‌ ಆಫ್‌ ಮಾಡಲು ಮತ್ತು ಹಾರಲು ಅವಕಾಶವಿರುತ್ತದೆ. ಇದರ ಮೂಲಕ ವೇಗವನ್ನು ಹೆಚ್ಚಿಸಲು ಮತ್ತು ಕಡಿಮೆ ಮಾಡಲು ಅವಕಾಶವಿದೆ. ಪೈಲಟ್‌ಗಳು ಸಾಂಪ್ರದಾಯಿಕ ರನ್‌ವೇ ಅಗತ್ಯವಿಲ್ಲದೇ ಸಣ್ಣ ಜಾಗ ಅಥವಾ ತೆರೆದ ಪ್ರದೇಶಗಳಿಂದ ಪ್ಯಾರಾಮೋಟರನ್ನು ಮೇಲೆ ಹಾರಿಸಬಹುದು ಮತ್ತು ಇಳಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next