Advertisement

ಕಾಪು ಪೇಟೆ: ಮತ್ತೆ ಮುಂದುವರಿದ ಚರಂಡಿ ತೆರೆಯುವ ಕಾಮಗಾರಿ

06:35 AM Jul 05, 2018 | Team Udayavani |

ಕಾಪು: ಕಾಪು ಪೇಟೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಮುಚ್ಚಿ ಹೋಗಿದ್ದ ಮಳೆ ನೀರು ಹರಿಯುವ ಚರಂಡಿಯನ್ನು ತೆರೆದು ಕೊಡುವ ಮೂಲಕ ಅಸಮರ್ಪಕ ಚರಂಡಿ ವ್ಯವಸ್ಥೆಗೆ ಮುಕ್ತಿ ಕೊಡುವ ಪ್ರಯತ್ನ ಮತ್ತೆ ಮುಂದುವರಿದಿದೆ.

Advertisement

ಕಳೆದ ಮೇ 30 ರಂದು ಸುರಿದ ಮಹಾಮಳೆಯ ಕಾರಣ ಉಂಟಾಗಿದ್ದ ಕೃತಕ ನೆರೆ ಭೀತಿ ಮತ್ತು ಅದರಿಂದಾದ ತೊಂದರೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಪುರಸಭೆ ಕಾಪು ಪೇಟೆಯುದ್ದಕ್ಕೂ ಚರಂಡಿ ಹೂಳೆತ್ತುವಿಕೆ ಕಾಮಗಾರಿಯನ್ನು ನಡೆಸಿತ್ತು. ಆ ಸಂದರ್ಭ ಕೆಲವೊಂದು ಕಡೆಗಳಲ್ಲಿ ಖಾಸಗಿಯವರಿಂದ ಆಕ್ಷೇಪವೂ ವ್ಯಕ್ತವಾಗಿತ್ತು.

ಆದರೂ ಕೂಡಾ ಪುರಸಭೆ ದಿಟ್ಟತೆ ಯಿಂದ ನಾಲ್ಕು ಹಂತಗಳಲ್ಲಿ ಚರಂಡಿ ಹೂಳೆತ್ತುವಿಕೆ ಕಾಮಗಾರಿಯನ್ನು ನಡೆಸಿದ್ದು, ಇದೀಗ ಐದನೇ ಹಂತದ ಕಾಮಗಾರಿ ಭರದಿಂದ ಸಾಗುತ್ತಿದೆ. ಕಾರ್ಮಿಕರನ್ನು ಬಳಸುವಲ್ಲಿ ಕಾರ್ಮಿಕರು ಮತ್ತು ಜೆಸಿಬಿ ಬಳಕೆ ಮಾಡಬೇಕಾದಲ್ಲಿ ಜೆಸಿಬಿ ಮೂಲಕ ಪೇಟೆಯುದ್ದಕ್ಕೂ ಚರಂಡಿ ಬಿಡಿ ಕೊಡಲಾಗುತ್ತಿದೆ. ಚರಂಡಿ ಹೂಳೆತ್ತುವಿಕೆ ಸಂದರ್ಭ ಅಂಗಡಿ ಮುಂಗಟ್ಟುಗಳ ಬಳಿ ಮಾಡಲಾಗಿದ್ದ ಒತ್ತುವರಿಯನ್ನೂ ಪುರಸಭೆ ತೆರವುಗೊಳಿಸಿದೆ.

ಮಳೆ ನೀರು ಹರಿಯುವ  ಚರಂಡಿಯಲ್ಲಿ ಡ್ರೈನೇಜ್‌ ನೀರು ?
ಕಾಪು ಪೇಟೆಯಲ್ಲಿ 16 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಚರಂಡಿ ಬಳಿಕ ಹಂತ ಹಂತವಾಗಿ ಮಣ್ಣು ತುಂಬಿ ಮುಚ್ಚಿ ಹೋಗಿದ್ದು, ಹೊಟೇಲ್‌, ವಸತಿ ಸಂಕೀರ್ಣ ಮತ್ತು ವಾಣಿಜ್ಯ ಸಂಕೀರ್ಣಗಳ ಡ್ರೈನೇಜ್‌ ನೀರು ಮತ್ತು ತ್ಯಾಜ್ಯವನ್ನು ಹರಿಯ ಬಿಟ್ಟಿರುವ ವಿಚಾರವೂ ಚರಂಡಿ ತೆರೆಯುವ ಸಂದರ್ಭ ಬೆಳಕಿಗೆ ಬಂದಿದೆ.

ಲೈಸೆನ್ಸ್‌ ರದ್ಧು ಪಡಿಸುವ ಎಚ್ಚರಿಕೆ
ಹಲವು ಕಡೆಗಳಲ್ಲಿ ಚರಂಡಿ ಹೂಳೆತ್ತುವಿಕೆ ಸಂದರ್ಭ ಮಳೆ ನೀರು ಹರಿಯುವ ಚರಂಡಿಗೆ ಒಳ ಚರಂಡಿಯ ತ್ಯಾಜ್ಯವನ್ನು ಬಿಡುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ. ಇಂತಹ ಹತ್ತಾರು ಪ್ರಕರಣಗಳು ಬೆಳಕಿಗೆ ಬಂದಿದ್ದು, ಅಂತಹ ಕಟ್ಟಡಗಳು ಮತ್ತು ಹೊಟೇಲ್‌ಗ‌ಳ ಮಾಲಕರಿಗೆ ನೋಟೀಸ್‌ ನೀಡಿ, ಎಚ್ಚರಿಕೆ ನೀಡಲಾಗಿದೆ. ಇನ್ನೂ ಕೂಡಾ ಅದೇ ರೀತಿ ಮುಂದುವರಿದರೆ ಪುರಸಭಾ ಅಧಿನಿಯಮದಂತೆ ಉದ್ಧಿಮೆ ಪರವಾನಿಗೆ ಮತ್ತು ಕಟ್ಟಡ ಲೈಸೆನ್ಸ್‌ ರದ್ದುಪಡಿಸಲು ಅವಕಾಶವಿದೆ ಎಂದು ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದ್ದಾರೆ.

Advertisement

ಕಾಪು ಪೇಟೆ – ಹೊಸ ಮಾರಿಗುಡಿ 
ರಸ್ತೆಯಿಂದ ರಾಷ್ಟಿÅàಯ ಹೆದ್ದಾರಿಯವರೆಗೆ ತೆರೆದಿರುವ ಚರಂಡಿ ತಿಂಗಳಾದರೂ ಇನ್ನೂ ಕೂಡಾ ಹಾಗೆಯೇ ಉಳಿದಿದೆ. ಇದ ರಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗಿದ್ದು, ವಾಹನ ಸಂಚಾರಕ್ಕೂ ಪದೇ ಪದೇ ಅಡೆತಡೆ ಉಂಟಾಗುತ್ತಿದೆ. ಇಲ್ಲಿನ ಸಮಸ್ಯೆಯನ್ನು ಕೂಡಾ ಶೀಘ್ರದಲ್ಲಿ ಪರಿಹರಿಸುವಂತೆ ಸ್ಥಳೀಯರು ಪುರಸಭೆಯನ್ನು  ಆಗ್ರಹಿಸಿದ್ದಾರೆ.

20 ಲ. ರೂ.ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆ 
ಕಾಪು ಪೇಟೆಯಲ್ಲಿ ಚರಂಡಿಯ ಕೊರತೆಯಿಂದಾಗಿ ಉಂಟಾಗಿದ್ದ ತೊಂದರೆ ಸರಿಪಡಿಸುವ ನಿಟ್ಟಿನಲ್ಲಿ ಹಿಂದಿನ ಮುಖ್ಯಾಧಿಕಾರಿ ಶೀನ ನಾಯ್ಕ ಅವರು ಆರಂಭಿಸಿದ್ದ ಕಾಮಗಾರಿಯನ್ನು ನಾವು ಮುಂದುವರಿದ್ದೇವೆ. ನಾಗರಿಕರಿಗೆ ತೊಂದರೆಯಾಗದ ರೀತಿಯಲ್ಲಿ ಮತ್ತು ಗುತ್ತಿಗೆ ಆಧಾರದಲ್ಲಿ ಚರಂಡಿ ಬಿಡಿಸಲಾಗುತ್ತಿದೆ. ಮಳೆ ಹಾನಿ ಮತ್ತು  ಪ್ರಕೃತಿ ವಿಕೋಪ ನಿಧಿಯಡಿಯಲ್ಲಿ 20 ಲಕ್ಷ ರೂ. ಅನುದಾನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳಿಂದ ಪೂರಕ ಸ್ಪಂದನೆ ದೊರಕಿದೆ . 
– ರಾಯಪ್ಪ ಪುರಸಭೆ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next