Advertisement
ಕೊರೊನಾ ಎರಡನೇ ಅಲೆಯ ಕಾರಣದಿಂದ ಕಳೆದ ಮಾರ್ಚ್ ತಿಂಗಳಾಂತ್ಯದಿಂದ ಕಾಪು ಬೀಚ್‌ಗೆ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶಕ್ಕೆ ಅಧಿಕೃತವಾಗಿ ನಿರ್ಬಂಧ ವಿಽಸಲಾಗಿತ್ತು. ಇದರಿಂದಾಗಿ ಬೀಚ್ ಪ್ರವಾಸೋದ್ಯಮ ಸಂಪೂರ್ಣವಾಗಿ ನಿಂತು ಹೋಗಿದ್ದು, ಬೀಚ್‌ನಲ್ಲಿ ವ್ಯಾಪಾರ ವಹಿವಾಟುಗಳೂ ಸಂಪೂರ್ಣ ಸ್ಥಗಿತಗೊಂಡಿದ್ದವು.
Related Articles
Advertisement
ಬೀಚ್‌ನಲ್ಲಿ ಸಂಜೆ ವೇಳೆ ಹೆಚ್ಚುತ್ತಿದೆ ಜನಸಂದಣಿ : ಅದರ ಜೊತೆಗೆ ವಿಽಸಲಾಗಿದ್ದ ರಾಜ್ಯಾದ್ಯಂತ ಕೊರೊನಾ ಕಾರಣದ ನಿರ್ಬಂಧಗಳು ಕೂಡಾ ಒಂದೊಂದಾಗಿ ತೆರವಾಗಿದ್ದು ಕಾಪು ಬೀಚ್‌ನಲ್ಲಿ ನಿಂತು ಹೋಗಿದ್ದ ಬಹುತೇಕ ಚಟುವಟಿಕೆಗಳು, ಅಂಗಡಿಗಳು ಕೂಡಾ ಒಂದೊಂದಾಗಿ ತೆರೆದುಕೊಂಡಿವೆ. ಇದರಿಂದಾಗಿ ಕಳೆದ ಒಂದು ವಾರದಿಂದೀಚೆಗೆ ಕಾಪು ಬೀಚ್‌ಗೆ ಆಗಮಿಸುವ ಸ್ಥಳೀಯ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ವಿಹಾರಾರ್ಥಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಳೆದ ಎರಡು ವಾರಗಳಿಂದೀಚಿಗೆ ವಾರಾಂತ್ಯದಲ್ಲಿ ಬೀಚ್‌ಗೆ ಬರುವ ಹೊರ ಜಿಲ್ಲೆಗಳು, ಹೊರ ರಾಜ್ಯಗಳ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು ಶನಿವಾರ ಮತ್ತು ರವಿವಾರ ಸಂಜೆ ಬೀಚ್‌ನಲ್ಲಿ ಹೆಚ್ಚಿನ ಜನಸಂದಣಿ ಕಂಡು ಬರುತ್ತಿದೆ.
ನಿಂತು ಹೋಗಿದ್ದ ಚಟುವಟಿಕೆಗಳು ಪುನರಾರಂಭ : ಕೊರೊನಾ ಕಾರಣದಿಂದ ನಿಂತು ಹೋಗಿದ್ದ ಚಟುವಟಿಕಗಳ ಸಹಿತವಾಗಿ ಪುಟ್ಟ ಮಕ್ಕಳನ್ನು ಸೆಳೆಯುವ ಮನೋರಂಜನಾ ಆಟಿಕೆಗಳು, ಕ್ರೂಸರ್ ಬೈಸಿಕಲ್, ಇನ್‌ಪ್ಲಾಟೇಬಲ್ ಜಂಪಿಂಗ್, ಬಂಗೀ ಜಂಪಿಂಗ್, ಸ್ಕೈ ಜಂಪರ್, ಜಾಲಿ ಬೈಕ್ ರೈಡಿಂಗ್, ಗಾಳಿಪಟ ಮಾರಾಟ ಮತ್ತು ಹಾರಾಟ ಮೊದಲಾದ ಮನೋರಂಜನಾ ಚಟುವಟಿಕೆಗಳು ಪುನರಾರಂಭಗೊಂಡಿದ್ದು ಬೀಚ್‌ಗೆ ಬರುವ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುತ್ತಿವೆ. ಬೀಚ್ ವಾಟರ್ ಸ್ಪೋರ್ಟ್ಸ್ ಸಹಿತವಾದ ವಿವಿಧ ಚಟುವಟಿಕೆಗಳು ಕೆಲವೇ ದಿನಗಳಲ್ಲಿ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ.
ಪಾರಂಪರಿಕ ತಾಣ ಕಾಪು ಲೈಟ್‌ಹೌಸ್‌ಗೆ 120 ವರ್ಷ ಪೂರ್ಣಗೊಳ್ಳುತ್ತಿದ್ದು ಮೂಲ ಸೌಕರ್ಯಗಳ ಜೋಡಣೆ ಮತ್ತು ಕೊರೊನಾ ಕಾರಣದಿಂದಾಗಿ ಮಕ್ಕಳ ಸೆಳೆಯುವ ಆಟಿಕೆ ಸೌಲಭ್ಯಗಳೊಂದಿಗಿನ ಚಟುವಟಿಕೆಗಳು ನಿಂತು ಹೋಗಿರುವುದರಿಂದ ಬೀಚ್‌ಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಗಣೀಯವಾಗಿ ಇಳಿಮುಖಗೊಂಡಿರುವುದರ ಬಗ್ಗೆ ಉದಯವಾಣಿ ಸುದಿನದಲ್ಲಿ ಸೆ.17 ವಿಶೇಷ ಲೇಖನ ಪ್ರಕಟಗೊಂಡಿತ್ತು. ಸುದಿನದಲ್ಲಿ ಲೇಖನ ಪ್ರಕಟಗೊಂಡ 10 ದಿನದಲ್ಲಿ ವಿವಿಧ ಮನೋರಂಜನಾ ಚಟುವಟಿಕೆಗಳು ಮತ್ತೆ ಪ್ರಾರಂಭಗೊಳ್ಳುತ್ತಿರುವುದು ಪ್ರವಾಸಿಗರಲ್ಲಿ ಸಂತಸ ಮೂಡಿಸಿದೆ.