ಬೆಂಗಳೂರು: ಕೌನ್ ಬನೇಗಾ ಮಹಾ ಕರೋಡ್ ಪತಿ ಹೆಸರಿನಲ್ಲಿ ಕೋಟಿ ರೂಪಾಯಿ ಆಸೆಗೆ ಬಲಿ ಬಿದ್ದ ಯುವಕನೊಬ್ಬ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೌನ್ ಬನೇಗಾ ಮಹಾ ಕರೋಡ್ ಪತಿ ಹೆಸರಿನಲ್ಲಿ ಇಸ್ಮಾಯಿಲ್ ಷರೀಫ್ ಎಂಬಾತನಿಗೆ ಕರೆ ಮಾಡಿ, ನಿಮ್ಮ ಮೊಬೈಲ್ ಸಂಖ್ಯೆ ಲಕ್ಕಿ ನಂಬರ್ ನಲ್ಲಿ ಸೆಲೆಕ್ಟ್ ಆಗಿದೆ. ನಿಮಗೆ ಕೋಟ್ಯಂತರ ರೂಪಾಯಿ ಹಣ ಬಂದಿದೆ ಎಂದು ಹೇಳಿದ್ದರು.
ಅಷ್ಟೇ ಅಲ್ಲ ಈ ಕರೆ ಮಾಡಿದವರು ಇಸ್ಮಾಯಿಲ್ ಮೊಬೈಲ್ ಗೆ ಲಕ್ಕಿ ವಿನ್ನರ್ ಆಗಿದ್ದ ಟಿವಿಶೋನ ವಿಡಿಯೋವನ್ನು ಕಳುಹಿಸಿದ್ದರು. ಇದರಿಂದ ಇಸ್ಮಾಯಿಲ್ ಖುಷಿಗೊಂಡಿದ್ದ. ನಂತರ ಕರೆ ಮಾಡಿ, ಮೊದಲು ನೀವು 50 ಸಾವಿರ ರೂಪಾಯಿ ಡೆಪಾಸಿಟ್ ಮಾಡಬೇಕು ಎಂದಿದ್ದರು.
ಅದರಂತೆ ಇಸ್ಮಾಯಿಲ್ 50 ಸಾವಿರ ಡೆಪಾಸಿಟ್ ಮಾಡಿದ್ದ, ತದನಂತರ ಮತ್ತೆ ಕರೆ ಮಾಡಿದ ಅವರು 65ಸಾವಿರ ರೂಪಾಯಿ ಡೆಪಾಸಿಟ್ ಮಾಡಲು ಹೇಳಿದ್ದರು. ಮೂರನೇ ಬಾರಿ ಕೌನ್ ಬನೇಗಾ ಮಹಾ ಕರೋಡ್ ಪತಿ ಹೆಸರಿನಲ್ಲಿ ಕರೆ ಮಾಡಿದಾಗ, ನನ್ನ ಬಳಿ ಈಗ ಎಲ್ಲಾ ಹಣ ಖಾಲಿಯಾಗಿದೆ. ಈಗಾಗಲೇ ಸಾಲ ಮಾಡಿ ನಿಮಗೆ ಹಣ ಕೊಟ್ಟಿದ್ದೇನೆ, ನೀವು ನನಗೆ ಬಂದಿರುವ ಹಣ ಕೊಡಿ, ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ.
ಅಂತೂ ಇಸ್ಮಾಯಿಲ್ ಗೆ ತಾನು ಮೋಸ ಹೋಗಿದ್ದೇನೆ ಎಂದು ತಿಳಿದು ಕಂಗಾಲಾಗಿದ್ದು, ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿರುವುದಾಗಿ ವರದಿ ವಿವರಿಸಿದೆ.