Advertisement

ಕಟ್ಟಿನಾಡಿ-ಕಬ್ಬಿನಾಲೆ ಸೇತುವೆ ಮಂಜೂರು; 3.48 ಕೋ.ರೂ. ವೆಚ್ಚದ ಸೇತುವೆಗೆ ಅನುಮೋದನೆ

01:22 AM Jan 03, 2022 | Team Udayavani |

ಕುಂದಾಪುರ: ಹಳ್ಳಿಹೊಳೆ ಗ್ರಾಮದ ಕಬ್ಬಿನಾಲೆ ಭಾಗದ ಗ್ರಾಮಸ್ಥರಿಗೆ ಹೊಸ ವರ್ಷದಲ್ಲಿ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅನೇಕ ವರ್ಷಗಳಿಂದ ನದಿ ದಾಟಲು ಸೇತುವೆಯಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದ ಕಟ್ಟಿನಾಡಿ – ಬೊಮ್ಮನಾಡಿ-ಕಬ್ಬಿನಾಲೆಗೆ ಹೊಸ ಸೇತುವೆ ಮಂಜೂರಾಗಿದೆ.

Advertisement

ಸಂಸದ ಬಿ.ವೈ. ರಾಘವೇಂದ್ರ ಅವರ ಮುತುವರ್ಜಿಯಲ್ಲಿ ನಬಾರ್ಡ್‌ ಯೋಜನೆಯಡಿ ಈ ಸೇತುವೆಗೆ 3.48 ಕೋ.ರೂ. ಅನುದಾನ ಮಂಜೂರಾಗಿದೆ. ಟೆಂಡರ್‌ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದೆ. ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಕೂಡ ಪ್ರಸ್ತಾವನೆ ಸಲ್ಲಿಸಿದ್ದರು.

ಉದಯವಾಣಿ ಸರಣಿ
ಗ್ರಾಮ-ಗ್ರಾಮಗಳ ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ “ಉದಯವಾಣಿ’ ಕಳೆದ ಜು. 2ರಿಂದ ಆರಂಭಿಸಿದ ಗ್ರಾಮಭಾರತ ಸರಣಿಯಲ್ಲಿ ಮೊದಲಿಗೆ ಹಳ್ಳಿ ಹೊಳೆ ಗ್ರಾಮದ ಹಲವು ಸಮಸ್ಯೆಗಳ ಬಗ್ಗೆ “ಇಳಿದಷ್ಟೂ ಸಮಸ್ಯೆ ಆಳ’ ಹಾಗೂ “ಸಾಗರದಷ್ಟು ಸಮಸ್ಯೆಗಳಿಗೆ ಸಾಸಿವೆಯಷ್ಟೇ ಪರಿಹಾರ!’ ಶೀರ್ಷಿಕೆಯಡಿ ಸಮಗ್ರ ವರದಿ ಪ್ರಕಟಿಸಿ ಗಮನಸೆಳೆದಿತ್ತು.

ಇದರಲ್ಲಿ ಕಬ್ಬಿನಾಲೆ, ಕಟ್ಟಿನಾಡಿ, ಬೊಮ್ಮನಾಡಿ ಪರಿಸರದ ಜನ ಸೇತುವೆಯಿಲ್ಲದೆ ಅನುಭವಿಸುತ್ತಿರುವ ಸಂಕಷ್ಟದ ಕುರಿತಂತೆ ಬೆಳಕು ಚೆಲ್ಲಲಾಗಿತ್ತು. ವರದಿಗೆ ಸ್ಪಂದಿಸಿದ ಸಂಸದರು, ಶಾಸಕರು ಸೇತುವೆ ಮಂಜೂರು ಮಾಡಿಸುವಲ್ಲಿ ಶ್ರಮಿಸಿದ್ದಾರೆ.

ಈ ಹಿಂದೆ ಹಳ್ಳಿಹೊಳೆ ಗ್ರಾಮದ ಶೆಟ್ಟಿಪಾಲು-ವಾಟೆಬಚ್ಚಲು ಕಡೆಗೆ ಸಂಪರ್ಕಿಸುವ ರಸ್ತೆಯ ಹಕ್ಕಿನ ಕೊಡ್ಲುವಿನಿಂದ ವಾಟೆಬಚ್ಚಲು ವರೆಗಿನ ರಸ್ತೆ ಅಭಿವೃದ್ಧಿಗೆ 1.25 ಕೋ.ರೂ. ಹಾಗೂ ಇರಿಗೆ ಸಮೀಪದ ಕುಂದಾಲಬೈಲುವಿನಿಂದ ದಾಸನಕೊಡ್ಲು ಕಡೆಗೆ ಹೋಗುವ ರಸ್ತೆಯ ಕಾಂಕ್ರೀಟಿಕರಣಕ್ಕೆ 55 ಲಕ್ಷ ರೂ. ಅನುದಾನವು ಎಸ್ಸಿ/ಎಸ್ಟಿ ಯೋಜನೆ ಯಡಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ ಮಂಜೂರಾಗಿತ್ತು. ಈಗ ಕಟ್ಟಿನಾಡಿ – ಕಬ್ಬಿನಾಲೆಗೆ ಸೇತುವೆ ಮಂಜೂರಾಗಿದೆ. ಹಳ್ಳಿಹೊಳೆ ಗ್ರಾಮದ ಅಭಿವೃದ್ಧಿ ಕುರಿತಂತೆ ಒಂದೊಂದೇ ಅಭಿವೃದ್ಧಿ ಕಾಮಗಾರಿ ಆರಂಭಗೊಳ್ಳುತ್ತಿದೆ. ಈ ನೆಲೆಯಲ್ಲಿ “ಉದಯವಾಣಿ’ಯ ಜನಪರ ಕಾಳಜಿಗೆ ಹಳ್ಳಿಹೊಳೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

ಇದನ್ನೂ ಓದಿ:ಮುಂಬೈನಲ್ಲಿ ವಾಟರ್‌ ಟ್ಯಾಕ್ಸಿಗೆ ಸದ್ಯದಲ್ಲೇ ಚಾಲನೆ

ಸೌಡ ಸೇತುವೆ ಮಂಜೂರು
ಸೌಡ – ಶಂಕರನಾರಾಯಣ ಸೇತುವೆಗೂ ಇದೇ ವೇಳೆ ನಬಾರ್ಡ್‌ ಯೋಜನೆಯಡಿ 15.42 ಕೋ.ರೂ. ಅನುದಾನ ಮಂಜೂರಾಗಿದೆ.

ಹಳ್ಳಿಹೊಳೆ ಗ್ರಾಮದ ಅಭಿವೃದ್ಧಿ ನಿಟ್ಟಿನಲ್ಲಿ ಕಬ್ಬಿನಾಲೆ – ಕಟ್ಟಿನಾಡಿ ಸೇತುವೆಗೆ ಅನುದಾನ ಮಂಜೂರಾಗಿದೆ. ಈಗಾಗಲೇ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಉದಯವಾಣಿ ಪತ್ರಿಕೆ ಅಲ್ಲಿನ ಸಮಸ್ಯೆ ಬಗ್ಗೆ ಗಮನಕ್ಕೆ ತಂದಿದ್ದು, ಶಾಸಕ ಸುಕುಮಾರ ಶೆಟ್ಟರು ಬೇಡಿಕೆ ಸಲ್ಲಿಸಿದ್ದರು.
– ಬಿ.ವೈ. ರಾಘವೇಂದ್ರ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next