ಕನ್ನಡದಲ್ಲಿ ಈಗಾಗಲೇ ಅನೇಕ ನೈಜ ಘಟನೆ ಆಧಾರಿತ ಚಿತ್ರಗಳು ಬಂದಿವೆ. ಆ ಸಾಲಿಗೆ ಈಗ “ಕಟ್ಟ ಕಡೆಯ ನಿಮಿಷ’ ಎಂಬ ಸಿನಿಮಾವೂ ಸೇರಿದೆ. ಹೌದು, ಇದೊಂದು ಪಕ್ಕಾ ಹಾರರ್ ಫೀಲ್ ಇರುವಂತಹ ಚಿತ್ರ. “ಮೊಗ್ಗಿನ ಮನಸು’ ಮೂಲಕ ನಾಯಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಮೂವರು ನಾಯಕರ ಪೈಕಿ ಜೆ ಡಿ ಆಕಾಶ್ ಈ ಚಿತ್ರದ ಹೀರೋ. ಅವರಿಗೆ ಸ್ಟೇಫಿ ಡೇವಿಡ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಇನ್ನು, “ಕಟ್ಟ ಕಡೆಯ ನಿಮಿಷ’ ಚಿತ್ರದ ಕಥೆ 1960ರಲ್ಲಿ ಒಂದು ಚರ್ಚ್‌ನಲ್ಲಿ ನಡೆದಂತಹ ಸತ್ಯ ಘಟನೆ ಇಟ್ಟುಕೊಂಡು ಮಾಡಲಾಗಿದೆ. ಈ ಚಿತ್ರವನ್ನು ಜಗನ್ ಅಲೋಶಿಯಸ್ ನಿರ್ದೇಶಿಸಿದ್ದಾರೆ. ನಿರ್ದೇಶಕರು ಈ ಹಿಂದೆ ಕನ್ನಡದಲ್ಲಿ ಬಂದು ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡ “6-5=2′ ಚಿತ್ರವನ್ನು ತಮಿಳು ಭಾಷೆಯಲ್ಲಿ ರಿಮೇಕ್ ಮಾಡಿದ್ದರು. ಈಗ “ಕಟ್ಟ ಕಡೆಯ ನಿಮಿಷ’ ಚಿತ್ರವನ್ನು ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ತಯಾರು ಮಾಡಲಾಗುತ್ತಿದೆ.
ಪಕ್ಕಾ ಸಸ್ಪೆನ್ಸ್ ಹಾರರ್ ಕಥಾಹಂದರ ಹೊಂದಿರುವ ಈ ಚಿತ್ರ ಈಗಾಗಲೇ ಶೇ.90ರಷ್ಟು ಚಿತ್ರೀಕರಣಗೊಂಡಿದೆ. ಚಿತ್ರದಲ್ಲಿ ಎರಡು ಭರ್ಜರಿ ಫೈಟ್ಸ್ ಹಾಗೂ ಒಂದು ಹಾಡು ಇದೆ. ಯತೀಶ್ ಅವರು ಆರ್ಯನ್ ಪ್ರೊಡಕ್ಷನ್ ಮೂಲಕ ಸಿನಿಮಾ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಜೀವಾ, ಲೋವಿಕಾ,ನಿತ್ಯಾರಾಜ್ ಗಣೇಶ್‌ರಾವ್ ಸೇರಿದಂತೆ ಇತರರು ನಟಿಸಿದ್ದಾರೆ. ಬೆಂಗಳೂರು, ಹಾಸನ ಸಮೀಪದ ಶೆಟ್ಟಿಹಳ್ಳಿ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಇನ್ನು ಒಂದು ಫೈಟು ಮತ್ತು ಪ್ಯಾಚ್‌ವರ್ಕ್ ಮಾಡಿದರೆ ಚಿತ್ರ ಪೂರ್ಣಗೊಳ್ಳಲಿದೆ.
ನಾಯಕ ಜೆ ಡಿ ಆಕಾಶ್ ಅವರು ಈ ಹಿಂದೆ “ಬೀಗ’, “ಕಮರೊಟ್ಟು ಚೆಕ್‌ಪೋಸ್ಟ್’ ಚಿತ್ರದಲ್ಲಿ ನಟಿಸಿದ್ದರು. ಅವರ ಅಭಿನಯದ “ಬಿರುಮಳೆ’ ಬಿಡುಗಡೆಗೆ ತಯಾರಾಗುತ್ತಿದೆ. ಈಗ “ಕಟ್ಟ ಕಡೆಯ ನಿಮಿಷ’ ಸಿನಿಮಾ ಗೆಲುವು ಕೊಡುವ ಭರವಸೆ ಇಟ್ಟುಕೊಂಡಿದ್ದಾರೆ. ಲಾಕ್‌ಡೌನ್ ನಂತರ ಚಿತ್ರಮಂದಿರಗಳು ಆರಂಭಗೊಂಡ ಬಳಿಕ ಚಿತ್ರ ಪ್ರೇಕ್ಷಕರ ಎದುರು ಬರಲಿದೆ. ಚಿತ್ರಕ್ಕೆ ಕಿರಣ್ ಗಜ ಛಾಯಾಗ್ರಹಣವಿದೆ. ಇತ್ತೀಚೆಗೆ ಚಿತ್ರದ ಫಸ್ಟ್‌ಲುಕ್ ರಿಲೀಸ್ ಆಗಿದೆ.