ಪುಣೆ: ಪುಣೆಯಲ್ಲಿ ತುಳು ಕನ್ನಡಿಗರ ಧಾರ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿರುವ ಅಯ್ಯಪ್ಪ ಸ್ವಾಮಿ ಸಾನ್ನಿಧ್ಯ ಕಾತ್ರಜ್ ಶ್ರೀ ಆಯ್ಯಪ್ಪ ಮಂದಿರ ನಮಗೆ ಹೆಮ್ಮೆಯ ದ್ಯೋತಕವಾಗಿದೆ. ಅಯ್ಯಪ್ಪಸೇವಾ ಸಮಿತಿ,ಮಂದಿರದ ಮಂಡಳಿಯ ಪದಾಧಿಕಾರಿ ಗಳ ಪರಿಶ್ರಮ ಪುಣೆಯ ದಾನಿಗಳ, ಭಕ್ತರ, ಸಹಕಾರದಿಂದ ದೈವಿಚ್ಛೆಯಂತೆ ದಿವ್ಯ ದೇಗುಲದ ನಿರ್ಮಾಣವಾಗಿ ಆರಾಧ್ಯ ದೇವರು ಅಯ್ಯಪ್ಪ ಸ್ವಾಮಿ, ಪರಿವಾರ ದೇವರುಗಳ ಸಂಕುಲವು ಆಸ್ತಿಕ ಭಕ್ತರನ್ನು ತನ್ನೆಡೆಗೆ ಕೈಬಿಸಿ ಕರೆಯುತ್ತಿದೆ.
ಮಂದಿರದ ಸ್ಥಾಪನೆಯಿಂದ ಈವರೆಗೆ ಭಕ್ತರ ಸಹಕಾರದ ಮುಖೇನ ಸೇವಾ ಕಾರ್ಯಗಳು ನಡೆಯುತ್ತಾ ಬರುತ್ತಿದೆ. ಜಾತಿ,ಮತ ಭೇದವಿಲ್ಲದೆ ತುಳು ಕನ್ನಡಿಗರಲ್ಲದೆ ಇತರ ಎಲ್ಲಾ ಭಾಷಿಕರು ಶ್ರದ್ದಾ ಭಕ್ತಿಯಿಂದ ಇಲ್ಲಿ ಪೂಜೆ ಸಲ್ಲಿಸುತ್ತಾರೆ. ವರ್ಷಂಪ್ರತಿ ಹಲವಾರು ಧಾರ್ಮಿಕ ಸೇವೆಗಳು, ವಿಶೇಷ ಪೂಜಾ ಕಾರ್ಯಗಳು, ಭಕ್ತರ ಇಷ್ಟಾರ್ಥ ಸೇವಾ ಪೂಜೆಗಳು, ಮಂದಿರದ ಮುಖಾಂತರ ಅಯ್ಯಪ್ಪ ಮಾಲಾಧಾರಣೆ, ಶಬರಿ ಮಲೆ ಯಾತ್ರೆ, ಸಾಮಾಜಿಕ ಸೇವಾ ಕಾರ್ಯಗಳು, ಶೈಕ್ಷಣಿಕ, ಶಿಕ್ಷಣ, ಅರೋಗ್ಯ, ಕಲಾ ಸೇವೆಗಳು ನಡೆಯುತ್ತಾ ಬರುತ್ತಿವೆ. ಇದಕ್ಕೆಲ್ಲ ಭಕ್ತರ ಸಹಕಾರ ಸದಾ ಸಿಗುತ್ತಿದೆ. ಭಕ್ತರ ಸಂಖ್ಯೆ ಹೆಚ್ಚಾದಂತೆ ನಮಗೆ ಸ್ಥಳಾವಕಾಶವು ಬೇಕು. ಆಸುಪಾಸಿನಲ್ಲಿರುವ ಸ್ಥಳವು ಮಂದಿರದ ಸುಪರ್ದಿಗೆ ಪಡೆಯು ವಂತಾಗಬೇಕು. ಇದರ ಕಾರ್ಯವೂ ನಡೆಯುತ್ತಿದೆ ಎಂದು ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುಭಾಶ್ ಶೆಟ್ಟಿ ಅವರು ನುಡಿದರು.
ಅ. 17 ರಂದು ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂದಿರದ ಮುಂದಿನ ಯೋಜನೆಗಳಿಗೆ ಭಕ್ತರ, ದಾನಿಗಳ, ಸಹಾಯ ಸಹಕಾರ ಬೇಕಾಗಿದೆ. ಮಂದಿರದ ಅಭಿವೃದ್ದಿ ಹಾಗೂ ಭಕ್ತರ ಮನೋಭಿಲಾಷೆ ಈಡೇರುವಂತೆ ಅಯ್ಯಪ್ಪ ಸ್ವಾಮೀ ಕೃಪೆ ತಮಗೆಲ್ಲರಿಗೂ ಸಿಗುವಂತಾಗಲಿ. ಅಲ್ಲದೆ ಮಂದಿರದ ಇತರ ಅಭಿವೃದ್ದಿ ಕಾರ್ಯಗಳಿಗೆ ಪುಣೆಯ ತುಳು- ಕನ್ನಡಿಗರ ಸಹಕಾರ ಸದಾ ಸಿಗುತ್ತಿರಲಿ ಎಂದು ನುಡಿದರು.
ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ರಘುರಾಮ್ ರೈ, ಕೋಶಾಧಿಕಾರಿ ಜಗದೀಶ್ ಶೆಟ್ಟಿ, ಉಪಾಧ್ಯಕ್ಷ ಸುಧಾಕರ್ ಶೆಟ್ಟಿ, ಮಾಜಿ ಅಧ್ಯಕ್ಷ ಶೇಖರ್ ಪೂಜಾರಿ, ಕಾರ್ಯಕಾರಿ ಸಮಿತಿ ಕಾರ್ಯಾಧ್ಯಕ್ಷ ಹರೀಶ್ ಪೂಜಾರಿ, ಮಹಿಳಾ ಸಮಿತಿ ಅಧ್ಯಕ್ಷೆ ವಿನೋಧಾ ಶೆಟ್ಟಿ, ಮಂದಿರದ ಪ್ರಧಾನ ಅರ್ಚಕ ಹರೀಶ್ ಭಟ್ ಹಾಗೂ ಪೊಲೀಸ್ ಅಧಿಕಾರಿ ಅನಿಲ್ ನಿಂಬಾಳ್ಕರ್ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ದೇವರಿಗೆ ಪ್ರಾರ್ಥನೆಗೈದರು. ಪದಾಧಿಕಾರಿಗಳು ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿದರು. ಸುಧಾಕರ್ ಶೆಟ್ಟಿ ಅವರು ಸ್ವಾಗತಿಸಿದರು. ಸಂಘದ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ವಾರ್ಷಿಕ ವರದಿಯನ್ನು ಗೌರವ ಕಾರ್ಯದರ್ಶಿ ರಘುರಾಮ್ ರೈ ಅವರು ಸಭೆಯ ಮುಂದಿಟ್ಟರು. ಕೋಶಾಧಿಕಾರಿ ಜಗದೀಶ್ ಶೆಟ್ಟಿ ಅವರು ವಾರ್ಷಿಕ ಲೆಕ್ಕ ಪತ್ರವನ್ನು ಸಭೆಯ ಮುಂದಿಟ್ಟು ಅನುಮೋದನೆ ಪಡೆದರು.
ಸಭೆಯಲ್ಲಿ ನವೆಂಬರ್ 16 ರಿಂದ ಮೊದಲ್ಗೊಂಡು ಶಬರಿಮಲೆ ಯಾತ್ರೆಯ ಮಾಲಾಧಾರಣೆ ಗೈಯಲಾಗುವುದು. ಅಲ್ಲದೆ ಅಯ್ಯಪ್ಪ ಮಂದಿರದ ವಾರ್ಷಿಕ ಮಹಾಪೂಜೆಯನ್ನು ಡಿಸೆಂಬರ್ 16 ಶನಿವಾರದಂದು ನಡೆಸುವುದೆಂದು ಸಭೆಯಲ್ಲಿ ತಿಳಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಪ್ರಭಾಕರ್ ಕೋಟ್ಯಾನ್ ಅವರು ಮಾತನಾಡಿದರು.
ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ಪ್ರಕಟಿಸಲಾಯಿತು. ತಿಂಗಳ ಸಂಕ್ರಮಣದ ವಿಶೇಷ ಪೂಜೆಯು ಪ್ರಧಾನ ಅರ್ಚಕರಾದ ಹರೀಶ್ ಭಟ್ ಅವರ ನೇತೃತ್ವದಲ್ಲಿ ಜರಗಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಸದಸ್ಯರು ಮಹಾಸಭೆಯಲ್ಲಿ ಪಾಲ್ಗೊಂಡರು. ಶೇಖರ್ ಪೂಜಾರಿ ವಂದಿಸಿದರು. ಕೊನೆಯಲ್ಲಿ ಪ್ರಸಾದ ರೂಪದಲ್ಲಿ ಅನ್ನದಾನ ನೆರವೇರಿತು.