ಕಟಪಾಡಿ: ಅನಾವಶ್ಯಕ ವಿಷಯಕ್ಕೆ ಮೂಗು ತೂರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ… ! ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸಬೇಕಾಗುವುದು ನಿಶ್ಚಳ ಎಂಬುವುದಕ್ಕೆ ಉದ್ಯಾವರದಲ್ಲಿ ಡಿ.12ರಂದು ನಡೆದ ಈ ಘಟನೆಯು ಸ್ಪಷ್ಟ ಉದಾಹರಣೆ..
ಉದ್ಯಾವರ ಶ್ರೀ ಶಂಭುಶೈಲೇಶ್ವರ ದೇಗುಲದ ಅರ್ಚಕರ ಮನೆಯ ಬಳಿಯಲ್ಲಿ ಬೆಳ್ಳಂಬೆಳಗ್ಗೆಯೇ 6.30 ಗಂಟೆಯ ಸುಮಾರಿಗೆ ಇಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಇಲ್ಲಿ ಅಪರಿಚಿತ ಬೀದಿ ನಾಯಿಯೊಂದು ಅಲ್ಯುಮೀನಿಯಂ ಕೊಡಪಾನದಲ್ಲಿ ಮೂಗು ತೂರಿಸಲು ಹೋಗಿ ತಲೆಯೇ ಸಿಲುಕಿಸಿಕೊಂಡು ಅಪಾಯಕಾರಿಯಾದ ಪರಿಸ್ಥಿತಿಯಲ್ಲಿ ಕಂಡು ಬಂದಿತ್ತು.
ಎಲ್ಲಿಂದಲೋ ಬಂದಿದ್ದ ಶ್ವಾನದ ಈ ದುಸ್ಥಿಯನ್ನು ಕಂಡ ಅರ್ಚಕ ಗಣಪತಿ ಆಚಾರ್ಯರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಕೂಡಲೇ ಸ್ಥಳೀಯರ ಸಹಕಾರವನ್ನು ಯಾಚಿಸಿದ್ದು, ಸೋಮನಾಥ ಉದ್ಯಾವರ, ರಾಕೇಶ್ ಉದ್ಯಾವರ ಮತ್ತಿತರರು ಬಂದು ಸುಮಾರು ಒಂದು ಗಂಟೆಗೂ ಮಿಕ್ಕಿದ ಕಾಲ ಸಾಕಷ್ಟು ಹರಸಾಹಸ ಪಟ್ಟು ತಾವೂ ಕೂಡಾ ಅಪಾಯವನ್ನು ಎದುರಿಸಿಕೊಂಡು ಕೊಡಪಾನದ ಬಾಯಿಯನ್ನು ತುಂಡರಿಸಿ ನಾಯಿಯನ್ನು ಸ್ವತಂತ್ರಗೊಳಿಸಿದರು.