Advertisement

Katpadi: ಮಟ್ಟುಗುಳ್ಳ ಬೆಳೆ ಮೇಲೆ ಮುಸುಕಿದ ಕಾರ್ಮೋಡ

06:49 PM Dec 11, 2024 | Team Udayavani |

ಕಟಪಾಡಿ: ಜಿ.ಐ. ಮಾನ್ಯತೆ ಪಡೆದ ಮಟ್ಟುಗುಳ್ಳದ ಬೆಳೆ ಮೇಲೆ ಕಾರ್ಮೋಡ ಆವರಿಸಿದೆ. ಫೈಂಜಾಲ್‌ ಚಂಡಮಾರುತದಿಂದಾಗಿ ಸುರಿದ ಮಳೆ ಮತ್ತು ಬಳಿಕ ನಿರಂತರ ಮೋಡ ಮುಸುಕಿದ ವಾತಾವರಣದಿಂದಾಗಿ ಮಟ್ಟುಗುಳ್ಳದ ಗಿಡದ ಹೂವು ಉದುರಲು ಆರಂಭಿಸಿದೆ. ಜತೆಗೆ ಕಾಯಿ ಕೊರಕ ಕೀಟದ ಬಾಧೆಯೂ ಕಾಣಿಸಿಕೊಂಡಿದ್ದು, ಬೆಳೆಗಾರರು ಶೇ. 70ರಷ್ಟು ಬೆಳೆ ಹಾನಿ ಉಂಟಾಗುವ ಆತಂಕದಲ್ಲಿದ್ದಾರೆ.

Advertisement

ಡಿ.2ರಂದು ಸುರಿದ ಮಳೆಯ ನೀರು ಗದ್ದೆಯಿಂದ ಆವಿಯಾಗುತ್ತಿದ್ದಂತೆಯೇ ಗಿಡಗಳು ಕೆಂಪಗಾಗುತ್ತಿವೆ. ಮೋಡದಿಂದಾಗಿ ಹೂವು ಉದುರಲು ಆರಂಭಿಸಿದೆ. ಮಿಡಿ ಗುಳ್ಳ ಮಾತ್ರವಲ್ಲ, ಸಾಧಾರಣವಾಗಿ ಬಲಿತ ಮಟ್ಟುಗುಳ್ಳವೂ ಬಾಡಿ ಉದುರುತ್ತಿದೆ. ಹೂವು ಕಚ್ಚುವಿಕೆ ಕಡಿಮೆ ಆಗುತ್ತಿದೆ. ಇನ್ನೂ ಚಂಡ ಮಾರುತ ಆಗಮಿಸುವ ಮುನ್ಸೂಚನೆ ಇರುವುದು ಬೆಳೆಗಾರರಿಗೆ ಆತಂಕ ಮೂಡಿಸಿದೆ.

ಮಟ್ಟುಗುಳ್ಳ ಬೆಳೆಗಾರರ ಸಂಘದ ವ್ಯಾಪ್ತಿಯ ಮಟ್ಟು, ದಡ್ಡಿ, ಕೈಪುಂಜಾಲು, ಪಾಂಗಾಳಗುಡ್ಡೆ ಪ್ರದೇಶದ ಸುಮಾರು 150 ಎಕರೆ ವ್ಯಾಪ್ತಿಯಲ್ಲಿ ಸುಮಾರು 85 ಬೆಳೆಗಾರರು ಮಟ್ಟುಗುಳ್ಳ ಬೆಳೆ ಬೆಳೆಯುತ್ತಿದ್ದಾರೆ.

ಬೆಳೆ ಇಳಿಕೆ ಬೆಲೆ ಏರಿಕೆ
ಗಿಡಗಳಿಗೆ ಸಮಸ್ಯೆಯಾಗಿ ರುವುದರಿಂದ ಮಾರುಕಟ್ಟೆಗೆ ಬರುವ ಮಟ್ಟುಗುಳ್ಳ ಪ್ರಮಾಣ ಕಡಿಮೆಯಾಗಿದೆ. ಕೆಲವೇ ದಿನಗಳ ಹಿಂದೆ ದಿನಕ್ಕೆ 1500 ಕೆಜಿ ಮಾರುಕಟ್ಟೆ ಪ್ರವೇಶಿಸುತ್ತಿತ್ತು. ಈಗ ಅದು 200-300 ಕೆ.ಜಿ.ಗೆ ಇಳಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ದರವೂ ಕಿಲೋ 1ರ 130-150 ರೂ.ಗೆ ಏರಿದೆ.

ಪರಿಹಾರಕ್ಕಾಗಿ ಅರ್ಜಿ
ಬೆಳೆಹಾನಿಯ ಬಗ್ಗೆ ಮಟ್ಟುಗುಳ್ಳ ಬೆಳೆಗಾರರು ಸಕಾಲದಲ್ಲಿ ನೆರವಿನ ಹಸ್ತದ ಯಾಚಿಸಿ ಪರಿಹಾರಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ. ಶೇ. 70 ಬೆಳೆ ಹಾನಿಯ ಜತೆಗೆ ಇಳುವರಿ ಕುಸಿತವನ್ನು ಕಾಣುತ್ತಿದೆ.
-ಲಕ್ಷ್ಮಣ್‌ ಮಟ್ಟು, ಪ್ರಬಂಧಕರು, ಮಟ್ಟುಗುಳ್ಳ ಬೆಳೆಗಾರರ ಸಂಘ ಮಟ್ಟು

Advertisement

ಅಧಿಕಾರಿಗಳಿಂದ ಪರಿಶೀಲನೆ
ಹಲವಾರು ಕೃಷಿಕರು ಪರಿಹಾರ ಕೋರಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಕೆಲವು ಮಟ್ಟುಗುಳ್ಳ ಬೆಳೆಗಾರರು ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ರೈತ ಕ್ಷೇತ್ರಕ್ಕೆ ತೆರಳಿ ಪರಿಶೀಲನೆ ಯನ್ನೂ ನಡೆಸಲಾಗಿದೆ. ತೋಟಗಾರಿಕಾ ಇಲಾಖೆಯ ಅಧಿಕಾರಿಗಳೂ ಭೇಟಿ ನೀಡಿದ್ದಾರೆ.
-ಲೋಕನಾಥ ಲಮ್ಹಾಣಿ, ಗ್ರಾಮಾಡಳಿತಾಧಿಕಾರಿ, ಕೋಟೆ

-ವಿಜಯ ಆಚಾರ್ಯ ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next