Advertisement

ಕಟೀಲು ಆರು ಮೇಳಗಳ ತಿರುಗಾಟ ಆರಂಭ; ಕಾಲಮಿತಿ ಯಕ್ಷಗಾನ ಸೇವೆ

07:26 PM Nov 24, 2022 | Team Udayavani |

ದೀಪಾವಳಿ ಹಬ್ಬವಾದೊಡನೆ ಕರಾವಳಿಯಾದ್ಯಂತ ಸಾಂಸ್ಕೃತಿಕ ನೆಲಮೂಲದ ಹಬ್ಬ , ಆಚರಣೆಗಳಾದ ಜಾತ್ರೆ, ಭೂತಾರಾಧನೆ, ಯಕ್ಷಗಾನ ಮೇಳಗಳ ಸಂಚಾರ ಆರಂಭ. ಇವು ಕೇವಲ ಆಚರಣೆಗಷ್ಟೆ, ಪ್ರದರ್ಶನ ಮತ್ತು ಜೀವನೋಪಾಯಕ್ಕಷ್ಟೇ ಸೀಮಿತವಾಗದೆ ತನ್ನ ಅಂತಃಸತ್ತ್ವ ದಿಂದಾಗಿ ಮೌಲ್ಯಗಳ ಪ್ರಸರಣಕ್ಕೂ ಸಂಸ್ಕಾರಗಳ ಉದ್ದೀಪನಕ್ಕೂ ಕಾರಣವಾಗುತ್ತದೆ. ಕರಾವಳಿಗರ ಭಾವನೆಗಳಲ್ಲಿ ಬಂಧಿ ಯಾಗಿರುವ, ಅ ಧಿದೇವತೆಯ ಕಟೀಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ತನ್ನ ಆರು ತಂಡಗಳನ್ನೊಡಗೂಡಿ ಇಂದು ದಿಗ್ವಿಜಯಕ್ಕೆ ಸಜ್ಜಾಗಿದೆ. ಜನಮನದಲ್ಲಿ ಕಟೀಲು ದೇವಸ್ಥಾನದ ಕುರಿತಾಗಿ ಯಾವ ರೀತಿಯ ಶ್ರದ್ಧೆ ಇದೆಯೋ ಅದೇ ಸದ್ಭಾವನೆ ಕಟೀಲು ಮೇಳಗಳ ಮತ್ತು ಮೇಳದ ಆರಾಧ್ಯಮೂರ್ತಿಯ ಮೇಲಿದೆ. ಇದೊಂದು ರೀತಿಯ ಜಂಗಮ ದೇವಳವೆಂದೇ ಕರೆಯಬಹುದು. ಇದು ಕಲೆಯ ಮೂಲಕ ದೇವರ ಆರಾಧನೆ.

Advertisement

ಶತಮಾನದ ಐತಿಹಾಸಿಕ ಹಿನ್ನೆಲೆಯಿರುವ ಕಟೀಲು ಮೇಳದ ಸಂಚಾರಕ್ಕೆ ತನ್ನದೇ ಆದ ಸತ್ವಯುತ ಮಹತ್ವ ಮತ್ತು ಧಾರ್ಮಿಕ ಭಾವನೆ ಇದೆ. ಕಲೆಯ ಮೂಲಕ ಆಯಾ ಕಲಾಪ್ರದರ್ಶನದ ವಸ್ತು -ಧ್ವನಿ ಹೊರಡಿಸುವ ಸತ್ವಗಳು, ತತ್ವಗಳು ಧಾರ್ಮಿಕ ಭಾವಗಳು ಇವೆಲ್ಲವೂ ಒಟ್ಟಾಗಿ ಭಾರತೀಯ ಮೌಲ್ಯಗಳನ್ನು ಮತ್ತೆ ಮತ್ತೆ ಜನಮಾನಸದಲ್ಲಿ ಬಡಿದೆಬ್ಬಿಸುವಂಥ ಶಕ್ತಿಯುತ ಕೇಂದ್ರಗಳಾಗಿ ಕೆಲಸ ಮಾಡುತ್ತವೆ

ಶ್ರದ್ಧೆಯ ಹರಕೆ
20ರಿಂದ 25 ವರ್ಷಗಳಿಗಾಗುವಷ್ಟು ಪ್ರದರ್ಶನಗಳು ಈಗಲೇ ನೋಂದಣಿಯಾಗಿರುವುದು ಕರಾವಳಿಗರ ಯಕ್ಷಗಾನದ ಮೇಲಿನ ಶ್ರದ್ಧೆ, ಕಟೀಲು ದುರ್ಗೆಯ ಮೇಲಿನ ಭಕ್ತಿಗೆ ದ್ಯೋತಕವಾಗಿದೆ.

‌ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಪ್ರಿಯೆ. ಆದ್ದರಿಂದ ಭಕ್ತರು ತಮ್ಮ ಬಯಕೆ, ಇಷ್ಟಾರ್ಥ ಸಿದ್ಧಿಗೆ ತಾಯಿಗೆ ಯಕ್ಷಗಾನ ಸೇವೆಯನ್ನು ನೀಡುತ್ತೇವೆ ಎಂದು ಹರಕೆ ಹೊರುತ್ತಾರೆ. ಯಕ್ಷಗಾನ ನಡೆಯುವಲ್ಲಿ ಕಟೀಲು ಶ್ರೀದೇವಿಯೇ ಬರುತ್ತಾಳೆಂಬ ನಂಬಿಕೆ. ತಮ್ಮ ಮನೆಗೆ ಕಟೀಲು ಮಾತೆ ಆಗಮಿಸಬೇಕೆಂದು ಯಕ್ಷಗಾನ ಮಾಡುವ ಮೂಲಕ ದೇವಿಯ ಆರಾಧನೆ ಮಾಡುತ್ತಾರೆ

ದೇವಿ ಮಹಾತ್ಮೆ
ಕಟೀಲು ಮೇಳದಲ್ಲಿ “ಶ್ರೀ ದೇವಿ ಮಹಾತ್ಮೆ ಪ್ರಸಂಗಕ್ಕೆ ವಿಶೇಷ ಪ್ರಾಶಸ್ತ್ಯವಿದ್ದು, ಒಂದೊಂದು ಮೇಳಗಳಲ್ಲಿಯೂ ವರ್ಷಕ್ಕೆ ಕನಿಷ್ಠ 90ರಿಂದ 100ರಷ್ಟು ಇದೇ ಪ್ರಸಂಗವನ್ನು ಆಡಿಸಲಾಗುತ್ತದೆ. “ಶ್ರೀದೇವಿ ಲಲಿತೋಪಾಖ್ಯಾನ’, ಕಟೀಲು ಕ್ಷೇತ್ರ ಮಹಾತ್ಮೆ ಸೇರಿದಂತೆ ಎಲ್ಲಾ ಪೌರಾಣಿಕ ಪ್ರಸಂಗಗಳನ್ನು ಆಡಿಸಲಾಗುತ್ತದೆ. ಈಗಿನ ಜನಮನದಲ್ಲಿ ಮುಖ್ಯವಾಗಿ ಬೇಕಾಗಿರುವಂಥ ಮೌಲ್ಯಪ್ರಜ್ಞೆಯ ಉದಯ ಇಂಥ ಕಲಾತಂಡಗಳ ಪ್ರದರ್ಶನದಿಂದಾಗುತ್ತದೆ. ಅತ್ಯಂತ ಸರಳವಾಗಿ ಭಾರತೀಯ ಮೌಲ್ಯಪರಂಪರೆಯ ಪ್ರಸರಣ ಪ್ರಾಚೀನದಲ್ಲಿ ಆಗುತ್ತಿದ್ದುದು ನಾಟಕ ತಂಡಗಳ (ಭರತನ ನಾಟ್ಯಶಾಸ್ತ್ರಕ್ಕೆ ಸಾಮಿಪ್ಯದಲ್ಲಿ ಇದ್ದು ಪ್ರದರ್ಶನ ಕೊಡುವ ಕಲೆ ಯಕ್ಷಗಾನ ಎಂಬುದು ವಿದ್ವಾಂಸರು ಒಪ್ಪಿದ ವಿಚಾರ) ಮೂಲಕವೆಂಬುದು ಐತಿಹಾಸಿಕ ತಥ್ಯ. ಅದೇ ಪರಂಪರೆಯನ್ನು ಯಕ್ಷಗಾನ ತಂಡಗಳು ಮುಂದುವರಿಸುತ್ತಾ ಇವೆ.

Advertisement

ಕಟೀಲು ಮೇಳದ ಕಲಾವಿದರು, ದೇವಸ್ಥಾನದ ಅರ್ಚಕ ವೃಂದ, ಮೇಳದ ವ್ಯವಸ್ಥಾಪಕರು , ದೇವಳದ ಆಡಳಿತ ಮಂಡಳಿಯ ಒಟ್ಟಂದದ ಕಾರ್ಯಪಟುತ್ವದಲ್ಲಿ ಇಲ್ಲಿಯವರೆಗೂ ಸಮರ್ಥವಾಗಿ ನಡೆದುಕೊಂಡು ಬಂದ ಮೌಲ್ಯ ಪ್ರಸರಣದ ಈ ಕಾರ್ಯ ಈ ವರುಷವೂ ಯಶಸ್ವಿಯಾಗಿ ನಡೆಯಲಿ ಎಂಬುದು ಹಾರೈಕೆ.

ಟ್ರಸ್ಟ್‌
ಕಟೀಲು ಆರು ಮೇಳಗಳಿಗೂ ಶ್ರೀ ದುರ್ಗಾಪರಮೇಶ್ವರೀ ಯಕ್ಷಧರ್ಮ ಭೋಧಿನಿ ಚಾರಿಟೇಬಲ್‌ ಟ್ರಸ್ಟ್‌ ನಿಂದ ಆರು ಬಸ್‌, ಆರು ಲಾರಿ ಹಾಗೂ ಜನರೇಟರ್‌ ಸೆಟ್‌ ಹಾಗೂ ವಿದ್ಯುದಲಂಕಾರ, ಧ್ವನಿವರ್ಧಕ ನೀಡಿದ್ದಾರೆ.

ಕಾಲಮಿತಿ
ಜಿಲ್ಲಾಧಿಕಾರಿಯವರು ಇದೊಂದು ವಿಶೇಷ ಪ್ರಕರಣ ಎಂದು ಪರಿಭಾವಿಸಿ ರಾತ್ರಿ 12.30ರವರೆಗೆ ಯಕ್ಷಗಾನ ಪ್ರದರ್ಶನಕ್ಕೆ ಲಿಖಿತ ಅನುಮತಿ ನೀಡಿದ್ದಾರೆ. ಆದ್ದರಿಂದ ಈ ವರ್ಷ ಕಟೀಲು ಮೇಳಗಳು ಆರಂಭದ ಹಾಗೂ ಕೊನೆಯ ದಿನ ಪೂರ್ಣರಾತ್ರಿ ಪ್ರದರ್ಶನ ನೀಡಿ, ತಿರುಗಾಟವಿಡೀ ಸಂಜೆ 5.45ಕ್ಕೆ ಚೌಕಿ ಪೂಜೆ ನಡೆಸಿ 6.45ವರೆಗೆ ಪೂರ್ವರಂಗ ಪ್ರದರ್ಶನ ನೀಡಿ, ರಾತ್ರಿ 12.30ರವರೆಗೆ ಪ್ರಸಂಗ ಪ್ರದರ್ಶನ ನೀಡಲಿವೆ.
-ವಿ| ಹರಿನಾರಾಯಣದಾಸ ಆಸ್ರಣ್ಣ , ಕಟೀಲು

ಲೇಖನ : ಕೃಷ್ಣಪ್ರಕಾಶ ಉಳಿತ್ತಾಯ, ಮಂಗಳೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next