ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರವಿವಾರ 44 ಜೋಡಿಗಳಿಗೆ ಸರಳ ವಿವಾಹ ನಡೆಯಿತು.
ಮೇ ತಿಂಗಳಿನಲ್ಲಿ ದೇಗುಲದಲ್ಲಿ ಒಟ್ಟು ಸರಳ 210 ವಿವಾಹಗಳು ನಡೆದಿದ್ದು, ಮೇ 25ರಂದು 21 ಮದುವೆಗಳು ನಡೆಯಲಿವೆ.
ಕೇವಲ 801 ರೂ.ಗಳಲ್ಲಿ ದೇವರ ಎದುರು ವಿವಾಹ ಆಗುವ ಅವಕಾಶ ಇದ್ದು, ವಿವಾಹ ನೋಂದಣಿಯ ದಾಖಲೆ ಪತ್ರವನ್ನೂ ನೀಡಲಾಗುತ್ತದೆ. ಅನೇಕರು ಕಟೀಲಿನಲ್ಲೇ ವಿವಾಹವಾಗುವುದಾಗಿ ಹರಕೆ ಹೊರುತ್ತಾರೆ. ಆರ್ಥಿಕವಾಗಿ ಕಷ್ಟ ದಲ್ಲಿರುವವರು ಮಾತ್ರವಲ್ಲದೆ ಉದ್ಯಮಿ ಗಳು, ಪ್ರತಿಷ್ಠಿತರು ಕೂಡ ದೇವರ ಎದುರು ಸರಳ ವಿವಾಹವಾಗುತ್ತಾರೆ.
ದಾಖಲೆಯ ಸೇವೆಗಳು
ಕಷ್ಟ ನಿವಾರಣೆ, ಆರೋಗ್ಯ ಇತ್ಯಾದಿ ಕಾರಣಗಳಿಗಾಗಿ ತುಲಾಭಾರ ಸೇವೆ ಹರಕೆ ಹೊರುವ ಭಕ್ತರು ದೇಗುಲದಲ್ಲಿ ಸೇವೆ ಸಲ್ಲಿಸುತ್ತಾರೆ. ರವಿವಾರ 23 ತುಲಾಭಾರ ಸೇವೆಗಳು ನಡೆದಿದ್ದು, ಮೇ ತಿಂಗಳಲ್ಲಿ ಇದುವರೆಗೆ ಒಟ್ಟು 437 ತುಲಾಭಾರ ಸೇವೆಗಳು ನೆರವೇರಿವೆ.
Related Articles
ದೇಗುಲದಲ್ಲಿ ಪ್ರತೀ ದಿನ ಮೂರು ಹೊತ್ತು ಅನ್ನಪ್ರಸಾದ ವಿತರಣೆ ನಡೆಯುತ್ತಿದ್ದು, ಹತ್ತು ಸಾವಿರದಷ್ಟು ಮಂದಿ ಅನ್ನಪ್ರಸಾದ ಸ್ವೀಕರಿಸುತ್ತಾರೆ.
ಅನ್ನದಾನ ಮಾತ್ರವಲ್ಲದೆ ಅನ್ನಪ್ರಸಾದ ಸ್ವೀಕರಿಸುವುದೂ ಕಟೀಲಿನಲ್ಲಿ ಹರಕೆ ಸೇವೆ ಆಗಿದೆ. ಮೇ ತಿಂಗಳಿನಲ್ಲಿ ಇದುವರೆಗೆ ಕ್ಷೇತ್ರದಲ್ಲಿ 525 ಮಕ್ಕಳಿಗೆ ಅನ್ನಪ್ರಾಶನ ನಡೆದಿದೆ.
ಕಟೀಲು ದೇವಿಗೆ ಪ್ರಿಯವೆನಿಸಿದ ಹೂವಿನ ಪೂಜೆ ಈ ತಿಂಗಳಿನಲ್ಲಿ 43 ಸಾವಿರದಷ್ಟು ನಡೆದಿವೆ. 3500ರಷ್ಟು ಸೀರೆಗಳು ದೇವರಿಗೆ ಸಮರ್ಪಿತವಾಗಿವೆ. 600ಕ್ಕೂ ಮಿಕ್ಕಿ ವಾಹನ ಪೂಜೆಗಳಾಗಿವೆ.