ಕಾಪು: ಕಟಪಾಡಿಯಲ್ಲಿ ಅಂಗಡಿಯೊಂದರ ಮುಂಭಾಗದಲ್ಲಿ ಸೋಮವಾರ ರಾತ್ರಿ ಇರಿಸಿ ಹೋಗಿದ್ದ ಬೈಕನ್ನು ಕದ್ದೊಯ್ದ ಆರೋಪಿಗಳನ್ನು ಬೈಕ್ ಸಹಿತವಾಗಿ 24 ಗಂಟೆಯೊಳಗೆ ಕಾಪು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಕಟಪಾಡಿ ಕೋಟೆ ಗ್ರಾಮದ ಇಂದಿರಾನಗರ ನಿವಾಸಿ ಸೈಯ್ಯದ್ ನಾಸಿರ್ (22), ಕೋಟೆ ಗ್ರಾಮದ ಪಡು ಏಣಗುಡ್ಡೆ ನಿವಾಸಿ ಉಬೇದುಲ್ಲಾ (21) ಬಂಧಿತ ಆರೋಪಿಗಳು. ಅವರನ್ನು ಉದ್ಯಾವರ ಫಾರೆಸ್ಟ್ ಗೇಟ್ ಬಳಿ ಬೈಕ್ ಸಮೇತವಾಗಿ ಸೆರೆ ಹಿಡಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದ ವಿವರ: ಕಟಪಾಡಿಯ ಹರೀಶ್ ಆಚಾರ್ಯ ಅವರು ಮೇ 29ರಂದು ರಾತ್ರಿ 10 ಗಂಟೆಯ ವೇಳೆಗೆ ತಮ್ಮ ಮೋಟಾರ್ ಬೈಕನ್ನು ಕಟಪಾಡಿ – ಶಿರ್ವ ರಸ್ತೆಯ ಕೃಷ್ಣ ಜನರಲ್ ಸ್ಟೋರ್ ಬಳಿ ನಿಲ್ಲಿÉಸಿ ಹೋಗಿದ್ದರು. ಮೇ 30ರಂದು ಬೆಳಗ್ಗೆ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿದ್ದು, ಈ ಬಗ್ಗೆ ಕಾಪು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು.
ಬೈಕ್ ಕಳವಾಗಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಕಾಪು ಪೊಲೀಸರು ಚುರುಕಾಗಿ ವಿವಿಧೆಡೆ ಹುಡುಕಾಟ ನಡೆಸಲು ಮುಂದಾಗಿದ್ದರು. ಈ ಸಂದರ್ಭ ಉದ್ಯಾವರ ಫಾರೆಸ್ಟ್ ಗೇಟ್ ಬಳಿ ಆರೋಪಿಗಳು ಬೈಕ್ ಸಮೇತವಾಗಿ ಸಂಚರಿಸುತ್ತಿರುವುದನ್ನು ಗಮನಿಸಿದ ಪೊಲೀಸರು ಬೈಕನ್ನು ತಡೆ ಹಿಡಿದು, ಆರೋಪಿಗಳನ್ನು ಮತ್ತು ಬೈಕನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್ ಅವರ ಮಾರ್ಗದರ್ಶನದಲ್ಲಿ, ಕಾಪು ಎಸ್‌ಐ ಜಗದೀಶ್ ರೆಡ್ಡಿ ನಿರ್ದೇಶನದಂತೆ ಕ್ರೈಂ ಎಸ್‌ಐ ಬಿ. ಲಕ್ಷ್ಮಣ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬಂದಿಗಳಾದ ಮಹಾಬಲ ಶೆಟ್ಟಿಗಾರ್, ಕೃಷ್ಣ ಪೂಜಾರಿ, ಗಣೇಶ್, ಸಂದೀಪ್ ಶೆಟ್ಟಿ, ಮೋಹನ್‌ಚಂದ್ರ ಮೊದಲಾದವರು ಭಾಗವಹಿಸಿದ್ದರು.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.