Advertisement

Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!

01:10 PM Nov 02, 2024 | Team Udayavani |

ಕಟಪಾಡಿ: ಆನ್‌ಲೈನ್‌, ಗಿಫ್ಟ್ ಪಾರ್ಸೆಲ್‌, ಷೇರು ಮಾರ್ಕೆಟ್‌ ಹೆಸರಲ್ಲಿ ವಂಚನೆ, ಡ್ರಗ್ಸ್‌ ಜಾಲದಲ್ಲಿ ಸಿಲುಕಿದಂತೆ ಬೆದರಿಕೆ ಮುಂತಾದ ಹಲವು ರೀತಿಯಲ್ಲಿ ನಡೆಯುವ ವಂಚನೆಗಳ ಸಾಲಿಗೆ ಈಗ ಹೈನುಗಾರರು ಮತ್ತು ರೈತರನ್ನು ಗೊಬ್ಬರ ಖರೀದಿ ಹೆಸರಲ್ಲಿ ವಂಚಿಸುವ ಹೊಸ ಜಾಲ ಸಕ್ರಿಯವಾಗಿದೆ.

Advertisement

ಮನೆ ಬಾಗಿಲಿಗೆ ಬಂದು ನಿಮ್ಮ ಹಟ್ಟಿಗೊಬ್ಬರವನ್ನು ಲಕ್ಷಾಂತರ ರೂ. ಗಳಿಗೆ ಖರೀದಿಸುವುದಾಗಿ ಮಾತುಕತೆ ನಡೆಸಿ ಉಪಾಯದಿಂದ ಹಣ ಪೀಕಿಸಿ ಪರಾರಿಯಾಗುವ ದಂಧೆ ಇದಾಗಿದೆ. ಕಟಪಾಡಿ ಪರಿಸರದಲ್ಲಿ ಇಂಥ ಕೆಲವು ಘಟನೆಗಳು ನಡೆದಿರುವ ಬಗ್ಗೆ ಪೊಲೀಸ್‌ ದೂರು ದಾಖಲಾಗಿದೆ.

ಕಂಪೆನಿಯೊಂದರ ಅಧಿಕಾರಿ ಎಂದು ನಂಬಿಸಿ ಕರೆ ಮಾಡುವ ವ್ಯಕ್ತಿ ಹಟ್ಟಿಗೊಬ್ಬರ ಖರೀದಿಸುವುದಾಗಿ ಹೇಳಿ ದರ ನಿಗದಿ ಮಾಡುತ್ತಾನೆ. ಬಳಿಕ ಮನೆಗೆ ಬಂದು ಗೊಬ್ಬರ ಒಯ್ಯಲು ಬರುವ ಯಂತ್ರಕ್ಕೆ ಡೀಸೆಲ್‌ ಹಾಕಲು ಎಂದು ಸಾವಿರಾರು ರೂ. ಪಡೆಯುತ್ತಾನೆ. ಕಳೆದ ಸೋಮವಾರ ಕಟಪಾಡಿ ಪರಿಸರದಲ್ಲಿ ಇಂಥ ಎರಡು ಘಟನೆಗಳು ನಡೆದಿವೆ.

ಘಟನೆ 1:

ಕಟಪಾಡಿ ಪರಿಸರದ ಹಳೆ ಎಂಬಿಸಿ ರಸ್ತೆಯ ನಿವಾಸಿ ಗೀತಾ ಕಮಲಾಕ್ಷ ಪ್ರಭು ಅವರ ಮನೆಗೆ ಮೇಕೆ ಗಡ್ಡದ ವ್ಯಕ್ತಿಯೊಬ್ಬ ಸೋಮವಾರ ಬೆಳಗ್ಗೆ 10 ಗಂಟೆಗೆ ಬಂದು ತನ್ನನ್ನು ಗೋಬರ್‌ ಗ್ಯಾಸ್‌ ಕಂಪೆನಿಯೊಂದರ ಮ್ಯಾನೇಜರ್‌ ಎಂದು ಪರಿಚಯಿಸಿಕೊಂಡಿದ್ದ. ನಮ್ಮ ಘಟಕದಲ್ಲಿ ಕಾಂಪೋಸ್ಟ್‌ ತಯಾರಿಸಲು ಹಟ್ಟಿಗೊಬ್ಬರ ಬೇಕು. ನಿಮ್ಮ ಗೊಬ್ಬರಕ್ಕೆ 1 ಲಕ್ಷ ರೂ. ದರ ನೀಡುತ್ತೇನೆ. ಸ್ವಲ್ಪ ಹೊತ್ತಿನಲ್ಲಿ ಉದ್ಯಾವರದಿಂದ ಉಷಾ ಮೇಡಂ ಎಂಬವರು ಯಂತ್ರ ತರುತ್ತಾರೆ. ಅದಕ್ಕೆ ಡೀಸೆಲ್‌ ಹಾಕಲು 5 ಸಾವಿರ ರೂ. ಕೊಡಿ ಎಂದು ಕೇಳಿದ. ಇದರಲ್ಲಿ ಏನೋ ಮೋಸದ ವಾಸನೆ ಇದೆ ಎಂದು ತಿಳಿದ ಮನೆಯವರು ನಮಗೆ ನೀಡುವ 1 ಲಕ್ಷ ರೂ. ಯಿಂದಲೇ 5 ಸಾ.ರೂ.ಯನ್ನು ಮುರಿದುಕೊಳ್ಳಿ ಎಂದು ಹೇಳಿದಾಗ ಆತ ಉಪಾಯದಿಂದ ಅಲ್ಲಿಂದ ಕಾಲ್ಕಿತ್ತಿದ್ದ.

Advertisement

ಘಟನೆ 2:

ಅದೇ ದಿನ ಬೆಳಗ್ಗೆ 11.30ರ ಸುಮಾರಿಗೆ ಪಾಂಗಾಳ ಮೂಡಬೆಟ್ಟು ಕಟ್ಟಿಕೆರೆ ಬಳಿಯ ಕ್ರಿಶ್ಚಿಯನ್‌ ಕೃಷಿಕರೊಬ್ಬರ ಮನೆಗೆ ಹೋಗಿದ್ದ ವ್ಯಕ್ತಿಯೊಬ್ಬ ಗೊಬ್ಬರಕ್ಕೆ 32 ಸಾವಿರ ರೂ. ನಿಗದಿ ಮಾಡಿದ್ದ. ಹಿಂದಿನಂತೆಯೇ ಗೊಬ್ಬರ ಒಯ್ಯುವ ಯಂತ್ರಕ್ಕೆ ಡೀಸೆಲ್‌ ಪೆಟ್ರೋಲ್‌, ಆಯಿಲ್‌ ತಂದಿರಿಸಲು 3,500 ರೂ. ನೀಡಲು ತಿಳಿಸಿದ್ದ. ಈ ಮನೆಯವರು ಆತನ ಜತೆಗೇ ಕಟಪಾಡಿ ಪೇಟೆಗೆ ತೆರಳಿ ಹಣ ನೀಡಿದ್ದಾರೆ. ಆತ ಈ ಕೃಷಿಕರನ್ನು ಅಲ್ಲೇ ಇಳಿಸಿ ಬೈಕ್‌ನಲ್ಲಿ ಉಡುಪಿ ಕಡೆಗೆ ತೆರಳಿದ್ದಾನೆ! ಕಾದು ಸುಸ್ತಾದ ರೈತರು ಮಧ್ಯಾಹ್ನ 3.30ರ ಹೊತ್ತಿಗೆ ಆತ ನೀಡಿದ ನಂಬರ್‌ ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್‌ ಬಂದಿತ್ತು. ಆ ಬಳಿಕ ಕರೆ ಮಾಡಿದರೆ ತಾನು ಮಂಗಳೂರಿನ ವಕೀಲ ಎಂದು ಉತ್ತರ ಬರುತ್ತಿದೆ. ನನ್ನ ಮೊಬೈಲ್‌ ಕಳವಾಗಿತ್ತು. ಬಳಿಕ ಸಿಮ್‌ ಬ್ಲಾಕ್‌ ಮಾಡಿ ಬೇರೆ ಸಿಮ್‌ ಮೂಲಕ ಕರೆ ಸ್ವೀಕರಿಸಿದ್ದಾಗಿ ಉತ್ತರ ಸಿಕ್ಕಿತ್ತು ಎನ್ನಲಾಗಿದೆ. ‌

ಇನ್ನಷ್ಟು ವಂಚನೆಗಳು

ಕಟಪಾಡಿ ಭಾಗದಲ್ಲಿ ಸಾವಯವ ಗೊಬ್ಬರ, ಕೃಷಿ ಪ್ಲಾಂಟೇಶನ್‌, ಹೈನುಗಾರಿಕೆ ಹೆಸರಿನಲ್ಲಿ ಲಕ್ಷಾಂತರ ರೂ. ಸಬ್ಸಿಡಿ ಕೊಡಿಸುವುದಾಗಿ ನಂಬಿಸಿ, ಹಲವರಿಂದ ಹಣ ಪಡೆದು ವಂಚಿಸಿದ ಘಟನೆಗಳು ನಡೆದಿವೆ.

ಫ್ರೆಂಚ್‌ ಗಡ್ಡದ ಕುಳ್ಳಗಿನ ವ್ಯಕ್ತಿ

ಕಟಪಾಡಿ ಪರಿಸರದಲ್ಲಿ ವಂಚಿಸಿದವನು ಮೇಕೆ ಗಡ್ಡ ಬಿಟ್ಟ ಕುಳ್ಳಗಿನ, ಸುಮಾರು 35-40 ವರ್ಷದ ವ್ಯಕ್ತಿ. ಆತ ಉಡುಪಿ ನೋಂದಣಿಯ ಕಪ್ಪು ಬೈಕ್‌ನಲ್ಲಿ ಬಂದಿದ್ದು, ನೀಲಿ ಜೀನ್ಸ್‌ ಪ್ಯಾಂಟ್‌, ಬಿಳಿ ಬಣ್ಣದ ಅಂಗಿ ಧರಿಸಿದ್ದ ಎನ್ನಲಾಗಿದೆ.

ಗಣ್ಯರ ಹೆಸರು ಹೇಳಿ ವಂಚನೆ!

ಈ ವ್ಯಕ್ತಿ ಸ್ಥಳೀಯ ಹಲವು ಗಣ್ಯರ ಹೆಸರು ಹೇಳಿ ಅವರ ಪರಿಚಯ ಇದೆ ಹಾಗೂ ಕೆಲವರ ಸಂಬಂಧಿ ಎಂದೆಲ್ಲ ಹೇಳಿಕೊಂಡಿದ್ದ. ಜತೆಗೆ ಸಮಾಜ ಸೇವಕ ಈಶ್ವರ್‌ ಮಲ್ಪೆಯ ಅವರ ತಮ್ಮ ಎಂದೂ ಹೇಳಿಕೊಂಡಿದ್ದ. ಇಂಥ ವಂಚಕರು ಮತ್ತೆ ಕಂಡುಬಂದಲ್ಲಿ ಅವರ ಫೋಟೋ, ವೀಡಿಯೋ ತೆಗೆದಿಟ್ಟುಕೊಳ್ಳಬೇಕು ಹಾಗೂ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು.

ಹಣ ಕೊಡಲು ನಾವು ಒಪ್ಪಲಿಲ್ಲ ನಮ್ಮ ಹಟ್ಟಿಗೊಬ್ಬರಕ್ಕೆ 1 ಲಕ್ಷ ರೂ. ನೀಡುವ ಭರವಸೆ ನೀಡಿ ಮುಂಗಡ 5 ಸಾ. ರೂ. ನೀಡಲು ತಿಳಿಸಿದ್ದ. ಅದಕ್ಕೆ ನಾವು ಒಪ್ಪಲಿಲ್ಲ. ಆತ ಕಟಪಾಡಿಯ ಪರಿಚಿತ ಗೋಬರ್‌ ಗ್ಯಾಸ್‌ ಇಂಡಸ್ಟ್ರಿಯ ಉದ್ಯಮಿ ಸಹಿತ ಕೆಲವು ಪ್ರಮುಖರ ಹೆಸರನ್ನೂ ಬಳಸಿಕೊಂಡಿದ್ದ. – ಗೀತಾ ಕಮಲಾಕ್ಷ ಪ್ರಭು, ಕಟಪಾಡಿಯ ಹೈನುಗಾರ

Advertisement

Udayavani is now on Telegram. Click here to join our channel and stay updated with the latest news.

Next