Advertisement

ಕೋಟೆ: ಅಭಿವೃದ್ಧಿಯ ಕೋಟೆ ನಿರ್ಮಾಣವೊಂದೇ ಬಾಕಿ

04:43 PM Aug 04, 2022 | Team Udayavani |

ಕಟಪಾಡಿ: ಶಾಲೆಯೇ ಇಲ್ಲದ ಕೋಟೆ ಗ್ರಾಮವು ಶೇ.100 ರಷ್ಟು ಸಾಕ್ಷರತಾ ಗ್ರಾಮ. ಸಂಪೂರ್ಣ ಸಾಕ್ಷರತಾ ಗ್ರಾ. ಪಂ. ಎಂದು ಘೋಷಿಸಲಾಗಿದೆ. ಇದೇ ಈ ಗ್ರಾಮದ ಅಚ್ಚರಿ. ಇಲ್ಲೀಗ ಇರುವ ಒಂದು ಶಾಲೆ ಪಾಠಕ್ಕೆ ಮುಚ್ಚಿದೆ, ಚುನಾವಣೆಗೆ ತೆರೆಯುತ್ತದೆ. ಇದು ಮತ್ತೂಂದು ಅಚ್ಚರಿ. ಕಾಪು ತಾಲೂಕು ವ್ಯಾಪ್ತಿಯಲ್ಲಿರುವ ಕೋಟೆ ಗ್ರಾಮವು ಜಿಲ್ಲಾ ಕೇಂದ್ರವಾದ ಉಡುಪಿಯಿಂದ 7 ಕಿ.ಮೀ. ಅಂತರದಲ್ಲಿದೆ. ಕಾಪು ವಿಧಾನ ಸಭಾ ಕ್ಷೇತ್ರ ಮತ್ತು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಜನಸಂಖ್ಯೆ 3405, 781 ಮನೆಗಳಿವೆ. ವಿಸ್ತೀರ್ಣ ಸುಮಾರು 462.6 ಹೆಕ್ಟೇರುಗಳು. ಮೂರು ಅಂಗನವಾಡಿಗಳಿವೆ. ಮುಚ್ಚಿರುವ ಪಿವಿಎನ್‌ ಹಿರಿಯ ಪ್ರಾಥಮಿಕ ಶಾಲೆ ಚುನಾವಣೆಗೆ ಮಾತ್ರ ತೆರೆದುಕೊಳ್ಳುತ್ತದೆ. ಕೋಟೆ ಗ್ರಾಮ ಉತ್ತರಕ್ಕೆ ಉದ್ಯಾವರ ಗ್ರಾ.ಪಂ., ದಕ್ಷಿಣಕ್ಕೆ ಇನ್ನಂಜೆ ಹಾಗೂ ಉಳಿಯಾರಗೋಳಿ ಗ್ರಾ.ಪಂ., ಪೂರ್ವಕ್ಕೆ ಕಟಪಾಡಿ ಗ್ರಾ.ಪಂ, ಪಶ್ಚಿಮಕ್ಕೆ ಮಟ್ಟು ಗ್ರಾಮದಿಂದ ಸುತ್ತುವರಿದಿದೆ.

Advertisement

ಆ ಹೆಗ್ಗಳಿಕೆ ಈಗ ಪಳೆಯುಳಿಕೆ

ಕೋಟೆ ಗ್ರಾ.ಪಂ. ಕಚೇರಿ ಕಟ್ಟಡದ ಮುಂಭಾಗದಲ್ಲಿ ಸ್ವಾತಂತ್ರ್ಯ ಪೂರ್ವದ ಹಳೆಯ ರೇಡಿಯೋ ಕಟ್ಟಡವಿದೆ. ಗ್ರಾಮಸ್ಥರಿಗೆ ಪ್ರಥಮವಾಗಿ ರೇಡಿಯೋ ಮಾಧ್ಯಮ ಪರಿಚಯವಾಗಿದ್ದು ಇಲ್ಲಿಂದಲೇ. ವಿಶಾಲವಾದ ಮೈದಾನದ ಹತ್ತಿರ ಇದ್ದ ಈ ಕಟ್ಟಡವು ಬಹುತೇಕ ವೃತ್ತಾಕಾರವಾಗಿದೆ. ಸುತ್ತಲೂ ಕಿಟಕಿಗಳನ್ನು ಹೊಂದಿದೆ. ಈ ಕಟ್ಟಡದಲ್ಲಿ ಪ್ರಪ್ರಥಮವಾಗಿ ರೇಡಿಯೋವನ್ನು ಅಳವಡಿಸಿ ಸುತ್ತಲಿನ ಕಿಟಕಿಗಳಿಗೆ ಧ್ವನಿವರ್ಧಕ ಅಳವಡಿಸಿ ಪ್ರತಿದಿನ ನಿಗದಿತ ವೇಳೆಯಲ್ಲಿ ಕಾರ್ಯಕ್ರಮ ಪ್ರಸಾರಿಸಲಾಗಿತ್ತು. ಗ್ರಾಮಸ್ಥರು ಮೈದಾನದಲ್ಲಿ ಕುಳಿತು ರೇಡಿಯೋ ಕಾರ್ಯಕ್ರಮ ಆಲಿಸುತ್ತಿದ್ದರು. ಅದೀಗ ಪಳೆಯುಳಿಕೆ.

ಆರು ಕೆರೆ ಅಭಿವೃದ್ಧಿಯಾಗಲಿ

ಕೋಟೆಗ್ರಾಮದಲ್ಲಿ ಮಂಡೆ ಜಾಲ ಕೆರೆ, ದಾರು ಕೆರೆ, ಸುಡುಕಾಡು ಕೆರೆ, ಸ್ವಜಲಧಾರ ಕೆರೆ ಸಹಿತ ಇತರೇ ಸರಕಾರಿ ಕೆರೆಗಳ ಹೂಳೆತ್ತಿ ಸುಸಜ್ಜಿತಗೊಳಿಸಬೇಕಿದೆ. ಇದರಿಂದ ಅಂತರ್ಜಲ ಮಟ್ಟದ ವೃದ್ಧಿಗೊಂಡು ಗ್ರಾಮದ ನೀರಿನ ಕೊರತೆಯ ಸಮಸ್ಯೆ ಯನ್ನು ನೀಗಿಸಿ, ಕೃಷಿಗೂ ಪೂರಕವಾಗಲಿದೆ.

Advertisement

ಸುಸಜ್ಜಿತ ಸರಕಾರಿ ಕಟ್ಟಡಗಳು ಬರಲಿ

ಕೋಟೆ ಗ್ರಾ.ಪಂ. ಕೋಟೆ ಗ್ರಾಮದಲ್ಲಿ ಕಾರ್ಯಾಚರಿಸುತ್ತಿದೆ. 1995ರಲ್ಲಿ ಉದ್ಘಾಟನೆ ಗೊಂಡ ಕಟ್ಟಡ ಇಂದಿಗೆ ಸೂಕ್ತವೆನಿಸುತ್ತಿಲ್ಲ. ಅದೀಗ ಸುಸಜ್ಜಿತ ಗೊಳ್ಳಬೇಕಿದೆ. ಪಶು ಆಸ್ಪತ್ರೆಗೂ ಸೂಕ್ತ ಕಟ್ಟಡ ಹಾಗೂ ಸುಸಜ್ಜಿತ ಗ್ರಂಥಾಲಯವೂ ತೆರೆದುಕೊಳ್ಳಬೇಕಿದೆ. ಮಕ್ಕಳ ಆಟದ ಕ್ರೀಡಾಂಗಣ ಅಭಿವೃದ್ಧಿ, ಪರಿಶಿಷ್ಟ ಪಂಗಡದ ಕಾಲೊನಿ ಅಭಿವೃದ್ಧಿಯಾಗಬೇಕಿದೆ.

ಪ್ರಮುಖ ರಸ್ತೆಯಾದ ಪಳ್ಳಿಗುಡ್ಡೆಯಿಂದ ಸುಮಾರು 3 ಕಿ.ಮೀ. ವ್ಯಾಪ್ತಿಯ ಕೋಟೆ ಕಮಾನು ಮೀನುಗಾರಿಕೆ ರಸ್ತೆಯು ಬಹೂಪಯೋಗಿಯಾಗಿದ್ದು, ಅಗಲಗೊಳ್ಳುವುದರೊಂದಿಗೆ ಅಭಿವೃದ್ಧಿಗೊಳ್ಳಬೇಕಿದೆ. ಇಲ್ಲಿ ಕಾರ್ಯಾಚರಿಸುವ ಬಹುತೇಕ ಎಲ್ಲ ಸರಕಾರಿ ಕಚೇರಿ ಕಟ್ಟಡಗಳು ಸುಸಜ್ಜಿತ ಸ್ವಂತ ಸೂರಿನಡಿ ನೆಲೆಗಾಣಬೇಕಿದೆ.

ಐತಿಹಾಸಿಕ ಹಿನ್ನೆಲೆ

ಕೋಟೆ ಗ್ರಾ.ಪಂ. ನ ಕೋಟೆ ಗ್ರಾಮದ ಪಡು, ಬಡಗು ಹಾಗೂ ತೆಂಕು ದಿಕ್ಕುಗಳಲ್ಲಿ ಹೊಳೆ ಹರಿಯುತ್ತಿದ್ದು, ಈ ಹೊಳೆಯನ್ನು ಈ ಗ್ರಾಮಕ್ಕೆ ಸುತ್ತುವರಿದಿರುವ ಕೋಟೆ ಎನ್ನಲಾಗಿದೆ. ಹಾಗಾಗಿ ಈ ಪ್ರದೇಶಕ್ಕೆ ಕೋಟೆ ಎಂಬ ಹೆಸರು ಬಂದಿತಂತೆ. ಅರ್ಥಿಕವಾಗಿ ಕೃಷಿ ಇಲ್ಲಿನವರಿಗೆ ಆಧಾರ. ಭತ್ತ ಪ್ರಮುಖ ಬೆಳೆ. ಜತೆಗೆ ಇತರೆ ಬೆಳೆಗಳನ್ನೂ ಬೆಳೆಯಲಾಗುತ್ತಿದ್ದು, ಮೀನುಗಾರಿಕೆ, ಹೈನುಗಾರಿಕೆ, ಕೋಳಿ ಸಾಕಣೆಯಂತ ಉದ್ಯಮದಲ್ಲೂ ತೊಡಗಿದ್ದಾರೆ. ಕೆಲವು ಸಣ್ಣ ಉದ್ಯಮಗಳೂ ಇವೆ.

ಸರ್ವರ ಸಹಕಾರ ಅಗತ್ಯ: ಆರೋಗ್ಯ ಕೇಂದ್ರದ ಕಟ್ಟಡವನ್ನು ನಿರ್ಮಿಸಬೇಕಿದೆ. ಪರಿಶಿಷ್ಟ ಪಂಗಡದ ಕಾಲನಿ ಅಭಿವೃದ್ಧಿಗೊಳ್ಳಬೇಕಿದ್ದು, ಸಮಾಜಮಂದಿರ ಸಭಾಭವನ ಸುಸಜ್ಜಿತಗೊಳಿಸಬೇಕಿದೆ. ಸುಸಜ್ಜಿತ ನೂತನ ಗ್ರಾ.ಪಂ. ಕಟ್ಟಡ ನಿರ್ಮಿಸಿ ಒಂದೇ ಸೂರಿನಡಿ ಸರಕಾರಿ ಸೌಲಭ್ಯಗಳನ್ನು ಗ್ರಾಮಸ್ಥರಿಗೆ ಒದಗಿಸಲು ಅಧಿಕಾರಿಗಳು, ಜನಪ್ರತಿನಿಧಿಗಳ ಸಹಕಾರ ಬೇಕಿದೆ. – ಕಿಶೋರ್‌ ಕುಮಾರ್‌ ಅಂಬಾಡಿ, ಅಧ್ಯಕ್ಷರು, ಕೋಟೆ ಗ್ರಾ.ಪಂ.

ಬೇಡಿಕೆ ಸಲ್ಲಿಸಲಾಗಿದೆ: ಕೋಟೆ ಕಂಡಿಗದಿಂದ ಕಜಕಡೆ ತನಕ ಆಯ್ದ ಭಾಗಗಳಲ್ಲಿ ನದಿದಂಡೆ ಸಂರಕ್ಷಣೆಯ ಮೂಲಕ ಜಮೀನು ಪ್ರದೇಶಗಳಿಗೆ ನೀರು ನುಗ್ಗದಂತೆ ಮತ್ತು ಉಪ್ಪು ನೀರು ಬಾಧಿತಗೊಳ್ಳದಂತೆ ವ್ಯವಸ್ಥೆ ಕಲ್ಪಿಸಬೇಕು. ಪ್ರಮುಖ ಪುರಾತನ ತೋಡುಗಳ ಹೂಳೆತ್ತಿ ಕೃತಕ ನೆರೆ ತಪ್ಪಿಸಬೇಕು. ಕಾಲು ಸಂಕ ನಿರ್ಮಿಸಬೇಕು. ಈ ಬಗ್ಗೆ ಶಾಸಕರು, ಇಲಾಖೆಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. -ರತ್ನಾಕರ್‌ ಕೋಟ್ಯಾನ್‌, ಗ್ರಾ.ಪಂ. ಸದಸ್ಯ

-ವಿಜಯ ಆಚಾರ್ಯ ಉಚ್ಚಿಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next