Advertisement

ಕಸ್ತೂರಿರಂಗನ್‌ ವರದಿ: ದೇಶದ ಜನರಿಗೆ ಮಹಾ ದ್ರೋಹ

02:25 AM Jul 13, 2017 | |

ಬೆಳ್ತಂಗಡಿ: ಕಸ್ತೂರಿ ರಂಗನ್‌ ವರದಿ ಜಾರಿ ಮಾಡಿಯೇ ಸಿದ್ಧ ಎಂದು ನರೇಂದ್ರ ಮೋದಿ ಸರಕಾರ ಸುಪ್ರೀಂ ಕೋರ್ಟಿಗೆ ಅಫಿಧವಿತ್‌ ಸಲ್ಲಿಸಿ, ದೇಶದ ಜನರಿಗೆ ಮಹಾ ದ್ರೋಹ ಬಗೆದಿದೆ ಎಂದು ಕೊಡಗಿನ ಹಿರಿಯ ರೈತ ಮುಖಂಡ ಡಾ| ದುರ್ಗಾಪ್ರಸಾದ್‌ ಹೇಳಿದರು.

Advertisement

ಅವರು ತೋಟತ್ತಾಡಿಯ ಕುತ್ರಿಜಾಲು ಎಂಬಲ್ಲಿ ಎಕೆಜಿ, ಸಂಗಾತಿ, ಗುಂಪುಕಾಂಚರಿ,  ಖಂಡಾ  ಮತ್ತು ದ್ವಿಗ್ವಿಜಯ ಯುವಕ ಮಂಡಲ ಕುತ್ರಿಜಾಲು  ಇದರ ಆಶ್ರಯದಲ್ಲಿ ನಡೆಸಿದ ಕಸ್ತೂರಿರಂಗನ್‌ ವರದಿ ಜಾರಿ ವಿರೋಧಿ ರೈತ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.

ನಿಜವಾಗಿ ಪರಿಸರವನ್ನು ನಾಶ ಮಾಡುತ್ತಿರುವ ಅಮೆರಿಕಾ ಮೊದಲಾದ ಶ್ರೀಮಂತ ರಾಷ್ಟ್ರಗಳನ್ನು ಎದುರಿಸಲಾಗದ ನಮ್ಮಂತಹ ದೇಶಗಳು ಅವರಿಗೆ ಶರಣಾಗಿ ಜನರನ್ನು ಬೀದಿಪಾಲು ಮಾಡಲು ಮುಂದಾಗಿವೆ. ಎಮ್ಮೆಗೆ ಗಾಯ, ಎತ್ತಿಗೆ ಬರೆ ಎಂಬಂತಿದೆ ನಮ್ಮ ಸರಕಾರದ ನೀತಿ. ಜನ ಸಾಮಾನ್ಯರೇ ಪರಿಸರ ನಾಶ ಮಾಡುವವರೆಂದು ನಿರ್ಧರಿಸಿ ಈ ಪರಿಸರ ರಕ್ಷಣೆಗೆ ಯಾವ ಕ್ರಮ ಕೈಗೊಳ್ಳಬೇಕು ಎಂದು ನಿರ್ಧರಿಸಲು ಡಾ| ಮಾಧವ ಗಾಡ್ಗಿàಳ್‌ ಹಾಗೂ ಅನಂತರ ಕಸ್ತೂರಿರಂಗನ್‌ ಸಮಿತಿಗಳ ಮೂಲಕ ವರದಿ ಪಡೆದು ಅದನ್ನು ಜಾರಿಗೊಳಿಸಿ ಈ ಪ್ರದೇಶದಲ್ಲಿ ಜನರನ್ನು ಅತಂತ್ರರನ್ನಾಗಿ ಬದುಕುವಂತೆ ಮಾಡಲು ಮುಂದಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡುವುದಕ್ಕೂ ಪರಿಸರ ರಕ್ಷಣಾ ಸಮಿತಿಯ ಅನುಮತಿ ಪಡೆದುಕೊಳ್ಳಬೇಕು. ಆದ್ದರಿಂದ ಈ ಜನವಿರೋಧಿ ವರದಿಯ ವಿರುದ್ಧ ಜನಾಂದೋಲನ ಮಾಡಲು ನಾವು ಸಿದ್ದರಾಗಬೇಕು ಎಂದರು.

ರಬ್ಬರ್‌ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ, ಕಸ್ತೂರಿರಂಗನ್‌ ವರದಿ ಜಾರಿ ವಿರೋಧಿ ಹೋರಾಟ ಸಮಿತಿಯ ಗೌರವಾಧ್ಯಕ್ಷ ಶ್ರೀಧರ ಭಿಡೆ ಮಾತನಾಡಿ, ನಮಗೆ ಅರಿವಿಲ್ಲದೆಯೇ ಕೇಂದ್ರ ಸರಕಾರ ನಮ್ಮನ್ನು ಮುಖ್ಯವಾಗಿ ಕೃಷಿಕರನ್ನು ಅತಂತ್ರರನ್ನಾಗಿಸುತ್ತದೆ. ನೋಟಿನ ಅಮಾನ್ಯ ಮಾಡುವ ವಿಚಾರ ಕಾರ್ಪೊರೇಟ್‌ಗಳಿಗೆ ಮತ್ತು ಗುಜರಾತಲ್ಲಿ 6 ತಿಂಗಳ ಮೊದಲೇ ಪ್ರಚಾರವಾಗಿದ್ದರೂ ನಮ್ಮಂತಹ ಸಾಮಾನ್ಯರಿಗೆ ತಿಳಿದಿಲ್ಲ. ಇದರಿಂದ ನಾವು ಕಷ್ಟ ಪಡಬೇಕಾಗಿ ಬಂತೇ ವಿನಾ ಇದರಿಂದ ಏನೂ ಸಾಧಿಸಲಾಗಿರಲಿಲ್ಲ. ಅದೇ ರೀತಿ ಈ ಕಸ್ತೂರಿರಂಗನ್‌ ವರದಿಯೂ ನಾಳೆ ನಮ್ಮನ್ನು ಬೀದಿ ಪಾಲು ಮಾಡಿದ ಮೇಲೆ ಚಿಂತೆ ಮಾಡುವ ಬದಲು ಇಂದೇ ಹೋರಾಟಕ್ಕೆ ಸಿದ್ದರಾಗೋಣ ಎಂದರು.

ತೋಟತ್ತಾಡಿ ಆಂಟನೀಸ್‌ಚರ್ಚಿನ ಧರ್ಮಗುರು ಫಾ| ತೋಮಸ್‌ ಪಾರೆಕಾಟಿಲ್‌ ಅವರು ರೈತ ಸಮಾವೇಶವನ್ನು ಉದ್ಘಾಟಿಸಿದರು.

Advertisement

ಕರ್ನಾಟಕ ರಾಜ್ಯರೈತ  ಸಂಘದ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಕ.ರಂ. ವರದಿ ಜಾರಿ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್‌ ಭಟ್‌ ಕೊಜಂಬೆ ಭಾಗವಹಿಸಿದ್ದರು.

ಕರ್ನಾಟಕ ಪ್ರಾಂತ ರೈತ ಸಂಘದ ಬೆಳ್ತಂಗಡಿ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಕ.ರಂ.ವರದಿ ವಿರೋಧಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ. ಭಟ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರತಿ ಪಂಚಾಯತು ಮಟ್ಟದ ಆಂದೋಲನ ನಡೆಸಿ ತೀವ್ರ ಸ್ವರೂಪದ ಹೋರಾಟಕ್ಕೆ ಕರೆ ನೀಡಿದರು.

ಕೆ.ಪಿ.ಆರ್‌.ಎಸ್‌. ತಾಲೂಕು ಅಧ್ಯಕ್ಷ ಲಕ್ಷ್ಮಣ ಗೌಡ, ಕುಡುಮಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮುಖ್ಯಸ್ಥ ರಾಘವ ಗೌಡ, ಎಕೆಜಿ ಸಂಗಾತಿ ಗುಂಪಿನ ಅಧ್ಯಕ್ಷ ಲಕ್ಷ್ಮಣ ಭಂಡಾರಿ, ಕಾರ್ಯದರ್ಶಿ ಕೆ.ಪಿ. ಜೋಸೆಫ್‌, ದಿಗ್ವಿಜಯ ಯುವಕ ಮಂಡಲದ ಅಧ್ಯಕ್ಷ ಜಿಬಿ ಹಾಗೂ ಕಾರ್ಯದರ್ಶಿ ನಿತಿನ್‌ ಉಪಸ್ಥಿತರಿದ್ದರು. ವಿಜೇಶ್‌ ಕುತ್ರಿಜಾಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿನೋಯಿ ತೋಟತ್ತಾಡಿ ವಂದಿಸಿದರು.

ವರದಿ  ಜಾರಿ ತಡೆಯುವುದೇ ರಕ್ಷಣೆಗಿರುವ  ದಾರಿ
ಕಾಂಗ್ರೆಸ್‌ ಸರಕಾರ ಡಾ| ಮಾಧವ ಗಾಡ್ಗಿಳ್‌, ಕಸ್ತೂರಿರಂಗನ್‌ ಸಮಿತಿಗಳನ್ನು  ರಚಿಸಿ ಪಡೆದ ವರದಿಯನ್ನು ಇಂದು ಬಿಜೆಪಿ ಸರಕಾರ ಜಾರಿ ಮಾಡಲು ಮುಂದಾಗಿದೆ. ನಮ್ಮ ಈ ಭಾಗದ 8 ಸಂಸದರೂ ಮೌನವಾಗಿದ್ದುಕೊಂಡು ಕೇಂದ್ರ ಸರಕಾರದ ನಿರ್ಧಾರ ವನ್ನು ವಿರೋಧಿಸಲೂ ಸಾಧ್ಯವಾಗದವ ರಾಗಿದ್ದಾರೆ. ರಾಜ್ಯ ಸರಕಾರ ಮಾತ್ರ ಜನವಸತಿ ಪ್ರದೇಶ ಬಿಡಲು ವಿನಂತಿಸಿ ಆಕ್ಷೇಪ ಸಲ್ಲಿಸಿದ್ದರೂ ಕೇಂದ್ರ ಅದನ್ನು ಗಣನೆಗೆ ತೆಗೆದುಕೊಂಡಿಲ್ಲ. ಆದರೆ ರಾಜ್ಯ ಸರಕಾರ ಕೂಡ ಅರಣ್ಯವಾಸಿಗಳ ಪ್ರದೇಶದ ಬಗ್ಗೆ ಯಾವುದೇ ಆಕ್ಷೇಪ ಸಲ್ಲಿಸಿಲ್ಲ. ಕಸ್ತೂರಿರಂಗನ್‌ ವರದಿ ಜಾರಿಯನ್ನು ತಡೆಯುವುದೇ ನಮ್ಮ ಬದುಕಿನ ರಕ್ಷಣೆಗಿರುವ ದಾರಿ .
– ಡಾ| ದುರ್ಗಾಪ್ರಸಾದ್‌ , ಹಿರಿಯ ಮುಖಂಡ 

Advertisement

Udayavani is now on Telegram. Click here to join our channel and stay updated with the latest news.

Next