ಬೆಂಗಳೂರು: ಪಶ್ಚಿಮಘಟ್ಟ ಸಂರಕ್ಷಣೆಗೆಂದು ಮಾಧವ ಗಾಡ್ಗಿàಳ್, ಕಸ್ತೂರಿ ರಂಗನ್ ನೀಡಿದ ವರದಿ ಅವೈಜ್ಞಾನಿಕವಾಗಿದ್ದು, ಯಾವುದೇ ಕಾರಣಕ್ಕೂ ಈ ಮಾರಕ ವರದಿಗಳನ್ನು ಜಾರಿಗೊಳಿಸಬಾರದು ಎಂದು ಬಿಜೆಪಿಯ ಆರಗ ಜ್ಞಾನೇಂದ್ರ ಆಗ್ರಹಿಸಿದರು.
ರಾಜ್ಯಪಾಲ ಭಾಷಣದ ಮೇಲಿನ ವಂದನಾ ನಿರ್ಣಯ ಬೆಂಬಲಿಸಿ ಮಾತನಾಡಿದ ಕಾಂಗ್ರೆಸ್‌ನ ಬಿ.ಆರ್.ಪಾಟೀಲ್, ಮಲೆನಾಡಿನಲ್ಲಿ ಪರಿಸರ ಹಾಳಾಗಿ ನದಿಗಳು ಬತ್ತುತ್ತಿವೆ. ಜುಲೈ ತಿಂಗಳು ಬಂದರೂ ಮುಂಗಾರು ಚುರುಕಾಗಿಲ್ಲ. ಉತ್ತರ ಕರ್ನಾಟಕ ಭಾಗಕ್ಕೆ ಹರಿಯಬೇಕಾದ ನದಿಗಳು ಒಣಗಿ ನಿಂತಿವೆ. ನಮ್ಮ ಸರಾಕರ ಇದ್ದಾಗ ಪರ್ಯಾಯ ವ್ಯವಸ್ಥೆ ಇಲ್ಲದೆ ಮರಳು ಗಣಿಗಾರಿಕೆ ನಿಷೇಧಿಸಿದೆ. ಇದೂ ಸರಿಯಲ್ಲ ಎಂದರು.
ಆಗ ಮಧ್ಯಪ್ರವೇಶಿಸಿದ ಆರಗ ಜ್ಞಾನೇಂದ್ರ, ನೀವು ಹೇಳಿದ್ದು ಸರಿ ಇದೆ. ಪಶ್ಚಿಮಘಟ್ಟದಲ್ಲಿ ನದಿಗಳು ಹುಟ್ಟುತ್ತಿದ್ದು, ಅವು ಹರಿಯಬೇಕು, ಕಾಡು ಉಳಿಯಬೇಕು ಎಲ್ಲವೂ ಸರಿ. ಜತೆಗೆ ನಮ್ಮ ಬದುಕೂ ಉಳಿಯಬೇಕಲ್ಲವೇ? ಗಾಡ್ಗಿàಳ್ ವರದಿ, ಕಸ್ತೂರಿ ರಂಗನ್ ವರದಿಗಳು ಬಹಳ ಅವೈಜ್ಞಾನಿಕವಾಗಿವೆ. ಅದನ್ನು ಎಲ್ಲೋ ಕುಳಿತು ತಯಾರಿಸಲಾಗಿದೆ. ನಮ್ಮಲ್ಲಿಗೆ ಬಂದು ಪ್ರವಾಸ ಮಾಡಿ, ವೈಜ್ಞಾನಿಕವಾಗಿ ಸಿದ್ಧಪಡಿಸಿದ್ದಲ್ಲ. ಪಶ್ಚಿಮಘಟ್ಟದಲ್ಲಿ ಬದುಕುತ್ತಿರುವ ನಮಗೆ ಕತೆ ಗೊತ್ತಿದೆ. ರಸ್ತೆ ಮಾಡುವಂತಿಲ್ಲ, ರಸ್ತೆ ರಿಪೇರಿ ಮಾಡುವಂತಿಲ್ಲ, ಚರಂಡಿ ಕಡಿಯುವಂತಿಲ್ಲ, ಮನೆ ಕಟ್ಟುವಂತಿಲ್ಲ, ತೋಟಕ್ಕೆ ಔಷಧ ಇತ್ಯಾದಿ ಸಿಂಪಡಿಸುವಂತಿಲ್ಲ.
ಈಗಿರುವ ಅರಣ್ಯ ಕಾಯ್ದೆಗಳೇ ನಮ್ಮನ್ನು ಕಾಡುತ್ತಿವೆ. ನಮಗೆ ಅಲ್ಲಿನ ಬದುಕೇ ಬೇಡ ಎನ್ನುವಂತಾಗಿದೆ. ಅಲ್ಲಿ ಕಾಡು ಉಳಿದಿದ್ದರೆ ಸ್ಥಳೀಯರಿಂದಲೇ ಹೊರತು ಅರಣ್ಯ ಇಲಾಖೆ ಅಥವಾ ಕಾಯ್ದೆಗಳಿಂದಲ್ಲ. ಹೀಗಾಗಿ ಕಸ್ತೂರಿ ರಂಗನ್ ವರದಿ ಒಪ್ಪಲು ಸಾಧ್ಯವಿಲ್ಲ ಎಂದು ನಮ್ಮ ಸರಕಾರ ಇದ್ದಾಗಲೇ ಕೇಂದ್ರಕ್ಕೆ ಪತ್ರ ಬರೆದಿದ್ದು, ಅದು ನಿರ್ಣಯವೂ ಆಗಿದೆ. ಗಣಿಗಾರಿಕೆ ನಿಲ್ಲಿಸುವ ವಿಚಾರದಲ್ಲಿ ಯಾರ ಅಭ್ಯಂತರವೂ ಇಲ್ಲ. ಆದರೆ, ಕಸ್ತೂರಿ ರಂಗನ್, ಗಾಡ್ಗಿàಳ್ ವರದಿ ಜಾರಿಗೆ ವಿರೋಧವಂತೂ ಇದೆ. ಈ ಬಗ್ಗೆ ವ್ಯಾಪಕ ಚರ್ಚೆಯಾಗಲಿ ಎಂದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾಜಿ ಸಚಿವ ಸಿ.ಸಿ.ಪಾಟೀಲ್ ಮಾತನಾಡಿ, ಮರಳಿಗೆ ಪರ್ಯಾಯ ವ್ಯವಸ್ಥೆ ಆಗಬೇಕು. ಅದಿಲ್ಲದೆ ಮರಳುಗಾರಿಕೆ ನಿಲ್ಲಿಸಿದ್ದು ಸರಿಯಿಲ್ಲ. ಆದರೆ ಯಾವುದೇ ಕಾರಣಕ್ಕೂ ಯಾಂತ್ರೀಕೃತ ಮರಳುಗಾರಿಕೆಗೆ ಅವಕಾಶ ಕೊಡಬಾರದು ಎಂದರು.
ಬಿ.ಆರ್. ಪಾಟೀಲ್ ಮಾತನಾಡಿ, ಮಲೆನಾಡಿನಲ್ಲಿ ಮರ ಕಡಿದು ಸಾಗಿಸಿದ ಟಿಂಬರ್ ಲಾಬಿ, ಕಳ್ಳಸಾಗಾಟ ನಿಲ್ಲಬೇಕು. ಇಲ್ಲದಿದ್ದರೂ ಸಮಸ್ಯೆ ಹೆಚ್ಚಲಿದೆ ಎಂದರು. ಮತ್ತೆ ಮಧ್ಯಪ್ರವೇಶಿಸಿದ ಜ್ಞಾನೇಂದ್ರ, ವಾರಾಹಿ, ಶರಾವತಿಯಂತಹ ಯೋಜನೆಗಳಿಗೂ ಅರಣ್ಯ ನಾಶವಾಗಿದೆ. ಮುಳುಗಡೆಯೂ ಆಗಿದೆ ಎಂದು ಸ್ಪಷ್ಟನೆ ನೀಡಿದರು.