Advertisement

ಕಸ್ತೂರಿ ರಂಗನ್‌ ವರದಿ ಜಾರಿಗೆ ಬದ್ಧ: ಖಂಡ್ರೆ

09:18 PM Jul 29, 2023 | Team Udayavani |

ಬೆಂಗಳೂರು: ಪಶ್ಚಿಮಘಟ್ಟ ಸಂರಕ್ಷಣೆಗಾಗಿ ಡಾ| ಕಸ್ತೂರಿ ರಂಗನ್‌ ನೀಡಿದ್ದ ವರದಿಯನ್ನು ಪ್ರಬಲ ವಿರೋಧದ ನಡುವೆಯೂ ಜಾರಿಗೊಳಿಸಲು ರಾಜ್ಯ ಸರಕಾರ ಮುಂದಾಗಿದೆ.

Advertisement

ಕಸ್ತೂರಿ ರಂಗನ್‌ ತಂಡದ ವರದಿಯು ಅವೈಜ್ಞಾನಿಕವಾಗಿದ್ದು, ಯಾವುದೇ ಕಾರಣಕ್ಕೂ ಅದನ್ನು ಜಾರಿಗೊಳಿಸಬಾರದು ಎಂದು ಕೇಂದ್ರ ಸರಕಾರಕ್ಕೆ ಹಿಂದಿನ ಬಿಜೆಪಿ ಸರಕಾರ ಶಿಫಾರಸು ಮಾಡಿತ್ತು.

ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ಕರ್ನಾಟಕವು ಇತರ 6 ನೆರೆಯ ರಾಜ್ಯಗಳು ಮತ್ತು ಕೇಂದ್ರ ಸರಕಾರದೊಂದಿಗೆ ಸಮಾಲೋಚಿಸಿ ಕಸ್ತೂರಿ ರಂಗನ್‌ ವರದಿಯನ್ನು ಜಾರಿಗೊಳಿಸಲಿದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಏಟ್ರಿಯಾ ವಿಶ್ವವಿದ್ಯಾನಿಲಯ ಆಯೋಜಿಸಿದ್ದ ಅಂತರ್‌ ಪ್ರಭೇದಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸರಕಾರ ಪಶ್ಚಿಮ ಘಟ್ಟ ಮತ್ತು ಅದರ ಜೀವವೈವಿಧ್ಯಗಳ ರಕ್ಷಣೆ ಹಾಗೂ ಸಂರಕ್ಷಣೆಗೆ ಕಸ್ತೂರಿ ರಂಗನ್‌ ವರದಿಯನ್ನು ಜಾರಿಗೊಳಿಸಲು ಬದ್ಧವಾಗಿದೆ. ಸಂಜಯ್‌ ಕುಮಾರ್‌ ನೇತೃತ್ವದ ಎರಡನೇ ಸಮಿತಿಯು ಡಿಸೆಂಬರ್‌ ವೇಳೆಗೆ ವರದಿಯನ್ನು ನೀಡುವ ನಿರೀಕ್ಷೆಯಿದ್ದು, ಅದರ ಆಧಾರದ ಮೇಲೆ ಸರಕಾರ ಮತ್ತಷ್ಟು ಪ್ರಜ್ಞಾಪೂರ್ವಕವಾಗಿ ವರದಿ ಜಾರಿಗೆ ಕೆಲಸ ಮಾಡಲಿದೆ ಎಂದರು.

ಜನಹಿತ, ಜೀವವೈವಿಧ್ಯ ಸಂರಕ್ಷಣೆ
ಪಶ್ಚಿಮ ಘಟ್ಟಗಳ ಬಹುತೇಕ ಭಾಗವನ್ನು ಕರ್ನಾಟಕ ರಾಜ್ಯ ಹಂಚಿಕೊಂಡಿದ್ದು, ಅದರ ಭೌಗೋಳಿಕ ಪ್ರದೇಶಗಳಲ್ಲಿ 11 ಜಿಲ್ಲೆಗಳು ಬರುತ್ತವೆ. ಈ ಜಿಲ್ಲೆಗಳಲ್ಲಿನ ಪರ್ವತ ಪ್ರದೇಶಗಳಲ್ಲಿ ವಾಸಿಸುವ ಜನರ ಹಿತಾಸಕ್ತಿ ಕಾಪಾಡುವುದು ಅಗತ್ಯ. 10 ವರ್ಷಗಳಿಂದ ಕಸ್ತೂರಿ ರಂಗನ್‌ ವರದಿ ನನೆಗುದಿಗೆ ಬಿದ್ದಿದ್ದು, ಅದಕ್ಕೂ ಮುನ್ನ ಗಾಡ್ಗಿಳ್‌ ಸಮಿತಿ ವರದಿಗೂ ಇದೇ ದುಃಸ್ಥಿತಿ ಎದುರಾಗಿತ್ತು. ವರದಿ ಜಾರಿಗೆ ಕಾನೂನು ರೂಪಿಸುವುದರ ಜತೆಗೆ ವನ್ಯಜೀವಿ ಮತ್ತು ಪರಸರ ಸಂರಕ್ಷಣೆಯ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಗ್ರಾ.ಪಂ.ಗಳಲ್ಲಿ ಅರಣ್ಯ ಸಮಿತಿಗಳು, ಅಂಗನವಾಡಿಗಳು ಹಾಗೂ ಶಾಲಾ ಮಕ್ಕಳನ್ನು ಈ ಜಾಗೃತಿ ಅಭಿಯಾನಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದೂ ಅವರು ಹೇಳಿದ್ದಾರೆ.

Advertisement

ಪಶ್ಚಿಮಘಟ್ಟದ ಜೀವ ವೈವಿದ್ಯ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂರಕ್ಷಣೆ, ತಂತ್ರಜ್ಞಾನ ಮತ್ತು ಶಿಕ್ಷಣದ ಬಗ್ಗೆ ಸುದೀರ್ಘ‌ವಾದ ಅರಿವು ಮೂಡಿಸಲು ಪ್ರಾಥಮಿಕ ಶಾಲಾ ಹಂತದಿಂದಲೇ ಪಠ್ಯಕ್ರಮವನ್ನು ತತ್‌ಕ್ಷಣ ಪರಿಚಯಿಸುವ ಅಗತ್ಯವಿದೆ.
– ಈಶ್ವರ ಖಂಡ್ರೆ, ಅರಣ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next