Advertisement

ಕಾಶ್ಮೀರಿ ಪಂಡಿತರ ಹತ್ಯೆ ನಡೆಸಿದ್ದ ಉಗ್ರ ತಾಲಿಬ್‌ ಹುಸೇನ್‌

12:10 AM Jun 08, 2022 | Team Udayavani |

ಬೆಂಗಳೂರು: ಜಮ್ಮು- ಕಾಶ್ಮೀರದ ಹಿಂದೂಗಳ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆಯ ಕಮಾಂಡರ್‌ ತಾಲಿಬ್‌ ಹುಸೇನ್‌ ಅಲಿಯಾಸ್‌ ತಾಲಿಕ್‌ ಸ್ಥಳೀಯ ವ್ಯಕ್ತಿಗಳ ನೆರವಿನಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ ಎನ್ನುವ ಮಾಹಿತಿ ತನಿಖಾ ತಂಡಗಳಿಗೆ ವಿಚಾರಣೆಯಲ್ಲಿ ಲಭಿಸಿದೆ.

Advertisement

ಹೀಗಾಗಿ ನೆರವು ನೀಡಿದ ಮಸೀದಿ ಮುಖ್ಯಸ್ಥರು ಹಾಗೂ ಕಿರಾಣಿ ಅಂಗಡಿ ಮಾಲಕ ಹಾಗೂ ತಾಲಿಬ್‌ನ ಮತ್ತೊಬ್ಬ ಸ್ನೇಹಿತನ ಮೇಲೆ ರಾಜ್ಯ ಪೊಲೀಸರು ನಿಗಾ ವಹಿಸಿದ್ದಾರೆ. ಜಮ್ಮು-ಕಾಶ್ಮೀರ ಪೊಲೀಸರು ಮತ್ತು ರಾಷ್ಟ್ರೀಯ ರೈಫ‌ಲ್ಸ್‌ ಹಾಗೂ ಸಿಆರ್‌ಪಿಎಫ್ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಜೂ. 3ರಂದು ಆರೋಪಿಯನ್ನು ಕರೆದೊಯ್ದಿದ್ದಾರೆ.

ಕೂಲಿ ಕೆಲಸ ಮಾಡಿಕೊಂಡಿದ್ದ
ತಾಲಿಬ್‌ನ ಮೊದಲ ಪತ್ನಿ ಮೃತಪಟ್ಟ ಬಳಿಕ ಆಕೆಯ ಇಬ್ಬರು ಮಕ್ಕಳನ್ನು ಬಿಟ್ಟು, ಮೂವರು ಮಕ್ಕಳಿರುವ ಮಹಿಳೆಯನ್ನು ಎರಡನೇ ವಿವಾಹವಾಗಿದ್ದ. 2019ರ ಡಿಸೆಂಬರ್‌ನಲ್ಲಿ ಬೆಂಗಳೂರಿಗೆ ಬಂದಿದ್ದ ಆರೋಪಿ, ಒಂದು ವರ್ಷಗಳ ಬಳಿಕ ಜಮ್ಮುವಿನಲ್ಲಿದ್ದ ಪತ್ನಿ ಮತ್ತು ಮೂವರು ಮಕ್ಕಳನ್ನು ಕರೆತಂದಿದ್ದ. ಮೆಜೆಸ್ಟಿಕ್‌ ರೈಲ್ವೇ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಕುಟುಂಬ ಸಮೇತ ಪಕ್ಕದಲ್ಲೇ ಟೆಂಟ್‌ನಲ್ಲಿ ವಾಸವಾಗಿದ್ದ.

ಬಾಡಿಗೆ ಆಟೋ ಚಲಾಯಿಸುತ್ತಿದ್ದ
ಕೊರೊನಾ ಕಾರಣದಿಂದ ಹೆಚ್ಚು ಕೆಲಸವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಆಗ ಓಕಳೀಪುರಂನ ಮೌಸೀನ್‌ ಎಂಬಾತನ ಪರಿಚಯವಾಗಿದ್ದು, ಆತನ ಸೂಚನೆ ಮೇರೆಗೆ ಶ್ರೀರಾಮಪುರದಲ್ಲಿರುವ ಮಸೀದಿ ಮುಖ್ಯಸ್ಥ ಅನ್ವರ್‌ ಪಾಷಾನನ್ನು ಭೇಟಿಯಾಗಿದ್ದ. ತನಗೆ ಯಾರಿಲ್ಲ ಹಾಗೂ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ಅನ್ವರ್‌ ಪಾಷಾರಲ್ಲಿ ಗೋಳಾಡಿದ್ದರಿಂದ ಮಸೀದಿ ಸಮೀಪದಲ್ಲೇ ಮನೆಯೊಂದನ್ನು ಬಾಡಿಗೆ ನೀಡಿದ್ದರು. ಜೀವನ ನಿರ್ವಹಣೆಗಾಗಿ ಬಾಡಿಗೆ ಆಟೋ ಚಾಲನೆ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ.

ಮಸೀದಿ ಮುಖ್ಯಸ್ಥ ಅನ್ವರ್‌ ಪಾಷಾ ವಿಚಾರಣೆ
ತಾಲಿಬ್‌ ಮತ್ತು ಆತನ ಕುಟುಂಬಕ್ಕೆ ಆಶ್ರಯ ನೀಡಿದ ಮಸೀದಿ ಮುಖ್ಯಸ್ಥ ಅನ್ವರ್‌ ಪಾಷಾನನ್ನು ರಾಜ್ಯ ಗುಪ್ತಚರ ಇಲಾಖೆ ಹಾಗೂ ನಗರ ವಿಶೇಷ ಕಾರ್ಯಾಪಡೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾಲಿಬ್‌, ಅನಾಥ ಎಂದು ಹೇಳಿಕೊಂಡಿದ್ದರಿಂದ ಆಶ್ರಯ ನೀಡಲಾಗಿತ್ತು. ಆತ ಉಗ್ರ ಸಂಘಟನೆಯಲ್ಲಿ ತೊಡಗಿರುವ ಮಾಹಿತಿ ಇಲ್ಲ ಎಂದಿದ್ದಾರೆ.

Advertisement

ಹತ್ತು ವರ್ಷಗಳಿಂದ ರೈಲ್ವೇ ನಿಲ್ದಾಣದಲ್ಲಿ ಕೆಲಸ ಮಾಡಿಕೊಂಡಿದ್ದಾಗಿ ಹೇಳಿದ್ದ. ಎರಡು ವರ್ಷಗಳ ಹಿಂದೆ ಕಿರಾಣಿ ಅಂಗಡಿ ಮಾಲೀಕ ಶಂಶುದ್ದೀನ್‌ ಅವರು ಆತನ ಪತ್ನಿಗೆ ತಾಯಿ ಕಾರ್ಡ್‌ ಮಾಡಿಸಿ, ಸರಕಾರಿ ಆಸ್ಪತ್ರೆಯಲ್ಲಿ ಡೆಲಿವರಿ ಕೂಡ ಮಾಡಿಸಲು ನೆರವಾಗಿದ್ದರು.

ಅನಂತರ ಆತನ ಕುಟುಂಬದ ಕಷ್ಟ ಕಂಡು ಮಸೀದಿ ಪಕ್ಕದಲ್ಲೇ ವಾಸಿಸಲು ಜಾಗ ನೀಡಲಾಗಿತ್ತು ಎಂದು ಹೇಳಿದ್ದಾರೆ.

ಆಧಾರ್‌ ಕಾರ್ಡ್‌ ಮಾಡಿಸಿಕೊಂಡಿದ್ದ  ದಂಪತಿ
ಮೊದಲಿಗೆ ಓಕಳೀಪುರಂ ನಿವಾಸಿ ಮೌಸೀನ್‌ ಎಂಬಾತನೇ ತನ್ನ ಆಧಾರ್‌ ಕಾರ್ಡ್‌ ನೀಡಿ ತಾಲಿಬ್‌ಗ 2 ಸಿಮ್‌ ಕಾರ್ಡ್‌ಗಳನ್ನು ಕೊಡಿಸಿದ್ದ. ಒಂದು ವರ್ಷಗಳ ಹಿಂದೆ ಮೌಸೀನ್‌ ಹಾಗೂ ಸ್ಥಳೀಯ ನೆರವಿನೊಂದಿಗೆ ಇಡೀ ಕುಟುಂಬ ಆಧಾರ್‌ ಕಾರ್ಡ್‌ ಮಾಡಿಸಿಕೊಂಡಿದೆ. ಈ ವೇಳೆ ತಾಲಿಬ್‌ ಬದಲಿಗೆ ತಾರಿಕ್‌, ಪತ್ನಿ ಸಲೀಮಾ, ಮಕ್ಕಳಾದ ಆಸೀಫ್, ದಾನೀಫ‌ರ್‌, ಆಶಿಯಾ ಎಂಬ ಹೆಸರಿನಲ್ಲಿ ಆಧಾರ್‌ ಕಾರ್ಡ್‌ ಮಾಡಿಸಿಕೊಂಡಿದ್ದ ಎಂಬುದು ಗೊತ್ತಾಗಿದೆ.

ಉಗ್ರ ಸಂಘಟನೆಯ ಕಮಾಂಡರ್‌ ಆಗಿದ್ದ
ಜಮ್ಮು-ಕಾಶ್ಮೀರದಲ್ಲಿ ಹೆಚ್ಚು ಆಕ್ಟೀವ್‌ ಆಗಿದ್ದ ಹಿಜ್ಬುಲ್‌ ಮಾಜಾಹಿದ್ದೀನ್‌ ಸಂಘಟನೆಗೆ 2016ರಲ್ಲಿ ಸೇರ್ಪಡೆಗೊಂಡ ತಾಲಿಬ್‌ ಹುಸೇನ್‌, ಹಂತ-ಹಂತವಾಗಿ ಉಗ್ರ ಸಂಘಟನೆಯ ಧೋರಣೆಗಳನ್ನು ವಿಸ್ತರಿಸಿದ್ದಾನೆ. ಈತನ ಕ್ರಿಯಾಶೀಲ ಕೆಲಸ ಕಂಡು ಸಂಘಟನೆ ಮುಖ್ಯಸ್ಥರು ಜಮ್ಮು-ಕಾಶ್ಮೀರ ವ್ಯಾಪ್ತಿಯ ಕಮಾಂಡರ್‌ ಆಗಿ ನೇಮಿಸಿದ್ದರು. ಶಸ್ತ್ರಾಸ್ತ್ರಗಳೊಂದಿಗೆ ಗುಡ್ಡಪ್ರದೇಶಗಳನ್ನು ಸಲೀಸಾಗಿ ಹತ್ತ ಬಲ್ಲ ತಾಲಿಬ್‌, 2018 ಮತ್ತು 2019ರಲ್ಲಿ ನಡೆದ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಕಾಶ್ಮೀರಿ ಪಂಡಿತರ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಅನಂತರ ತಲೆಮರೆಸಿಕೊಂಡಿದ್ದ. ಹೀಗಾಗಿ ಈತನ ವಿರುದ್ಧ ಸ್ಥಳೀಯ ಪೊಲೀಸರು ಲುಕ್‌ಔಟ್‌ ನೋಟಿಸ್‌ ಕೂಡ ಹೊರಡಿಸಿದ್ದರು. ಎನ್‌ಕೌಂಟರ್‌ಗೂ ಸಿದ್ದತೆ ನಡೆಸಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆ ತಾಲಿಬ್‌, ಸ್ಥಳೀಯ ದಂಪತಿಯೊಬ್ಬರ ನೆರವಿನೊಂದಿಗೆ ಬೆಂಗಳೂರಿಗೆ ಬಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಭಯೋತ್ಪಾದಕನೊಬ್ಬನ ಬಂಧನ ವಿಚಾರದಲ್ಲಿ ಜಮ್ಮು ಕಾಶ್ಮೀರ ಪೊಲೀಸರಿಗೆ ರಾಜ್ಯ ಸರಕಾರದ ಕಡೆಯಿಂದ ಅಗತ್ಯ ನೆರವು ಒದಗಿಸಲಾಗುವುದು
– ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ

ಹಿಜ್ಬುಲ್‌ ಮುಜಾಹಿದ್ದೀನ್‌ ಕಮಾಂಡರ್‌ ಆಗಿದ್ದ ತಾಲೀಬ್‌ ಹುಸೇನ್‌ನನ್ನು ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಕೇಂದ್ರ ಭದ್ರತಾ ಪಡೆ ಜಂಟಿ ಕಾರ್ಯಾಚರಣೆ ನಡೆಸಿ ಬೆಂಗಳೂರಿನಲ್ಲಿ ಬಂಧಿಸಿದೆ. ಕಾಶ್ಮೀರದ ಡಿಜಿಪಿ ಪತ್ರಿಕಾ ಗೋಷ್ಠಿ ನಡೆಸಿದಾಗಲೇ ನಮಗೂ ಗೊತ್ತಾಗಿದೆ. ಕಾಶ್ಮೀರದ ಡಿಜಿಪಿ ಜತೆಯಲ್ಲಿ ನಿರಂತರ ಸಂಪರ್ಕದಲ್ಲಿದ್ದೇವೆ.
– ಸಿ.ಎಚ್‌. ಪ್ರತಾಪ್‌ ರೆಡ್ಡಿ,ನಗರ ಪೊಲೀಸ್‌ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next