ಶ್ರೀನಗರ: ಜಮ್ಮು-ಕಾಶ್ಮೀರದ ಬದ್ಗಾಂನಲ್ಲಿ ಉಗ್ರರು 36 ವರ್ಷದ ಸರಕಾರಿ ಉದ್ಯೋಗಿಯ ಹತ್ಯೆ ಮಾಡಿರುವುದನ್ನು ಖಂಡಿಸಿ ಇಡೀ ಕಾಶ್ಮೀರಿ ಪಂಡಿತ ಸಮುದಾಯ ಬೀದಿಗಿಳಿದಿದೆ.
ತಮ್ಮ ಸಮುದಾಯದ ರಕ್ಷಣೆಗೆ ಆಗ್ರಹಿಸಿ ಗುರುವಾರ ರಾತ್ರಿಯಿಂದಲೇ ಕಣಿವೆಯ ವಿವಿಧೆಡೆ ನಿರಂತರ ಪ್ರತಿಭಟನೆ ಆರಂಭ ವಾಗಿದೆ.
ಶುಕ್ರವಾರ ಬೆಳಗ್ಗೆ ಬದ್ಗಾಂನ ಶೇಖ್‌ಪೋರಾ ಪ್ರದೇಶದಲ್ಲಿ ಜಮಾಯಿಸಿದ ಕಾಶ್ಮೀರಿ ಪಂಡಿತರು ಅಲ್ಲಿಂದ ಶ್ರೀನಗರ ಏರ್‌ಪೋರ್ಟ್‌ನತ್ತ ಹೊರಟಿದ್ದು, ಅವರನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗಿಸಬೇಕಾಯಿತು.
ಸಮುದಾಯದ ಬಹುತೇಕ ಮಂದಿ ತಮ್ಮ ತಾತ್ಕಾಲಿಕ ಶಿಬಿರಗಳನ್ನು ತೊರೆದು ರಸ್ತೆಗಿಳಿದಿದ್ದು, ತಮಗೆ ಸುರಕ್ಷೆ ಒದಗಿಸದ ಆಡಳಿತ ಹಾಗೂ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. “ಇದೇನಾ ನಿಮ್ಮ ಪುನರ್ವಸತಿ? ಕೊಲ್ಲಲ್ಪಡಲೆಂದೇ ನಮ್ಮನ್ನು ಇಲ್ಲಿಗೆ ಕರೆತಂದಿರಾ’ ಎಂದೂ ಆಕ್ರೋಶಭರಿತರಾಗಿ ಪ್ರಶ್ನಿಸಿದ್ದಾರೆ.
Related Articles
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಶುಕ್ರವಾರ ರಾಹುಲ್ ಭಟ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಶುಕ್ರವಾರ ಬೆಳಗ್ಗೆ ದುರ್ಗಾನಗರದಲ್ಲಿ ರಾಹುಲ್ ಅಂತ್ಯಕ್ರಿಯೆ ನೆರವೇರಿದೆ.
ಸಾಮೂಹಿಕ ರಾಜೀನಾಮೆ ಪತ್ರ ರವಾನೆ
ರಾಹುಲ್ ಹತ್ಯೆ ಖಂಡಿಸಿ ಕಾಶ್ಮೀರಿ ಪಂಡಿತರ ನೌಕರರ ಸಂಘದ ಎಲ್ಲ ಸದಸ್ಯರೂ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ನಮಗೆ ಭದ್ರತೆ ನೀಡಲು ವಿಫಲರಾಗಿದ್ದೀರಿ. ರಾಜೀನಾಮೆ ನೀಡದೆ ಬೇರೆ ದಾರಿಯಿಲ್ಲ ಎಂದು ಮೋದಿ ಹಾಗೂ ಮನೋಜ್ ಸಿನ್ಹಾರನ್ನು ಉದ್ದೇಶಿಸಿ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
ಕಾನ್‌ಸ್ಟೆಬಲ್ ಹತ್ಯೆ
ಕಾಶ್ಮೀರಿ ಪಂಡಿತನ ಹತ್ಯೆ ಬೆನ್ನಲ್ಲೇ ಪುಲ್ವಾಮಾ ಜಿಲ್ಲೆಯ ಗುಡೂರಾ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಕಾನ್‌ಸ್ಟೆಬಲ್ ರಿಯಾಜ್ ಅಹ್ಮದ್ ಥೋಕರ್ ಅವರನ್ನು ಉಗ್ರರು ಹತ್ಯೆಗೈದಿದ್ದಾರೆ. ಈ ನಡುವೆ, ಉಗ್ರರೊಂದಿಗೆ ನಂಟು ಆರೋಪದಲ್ಲಿ ಪ್ರೊಫೆಸರ್, ಪೊಲೀಸ್ ಸಿಬಂದಿ ಸಹಿತ ಮೂವರು ಸರಕಾರಿ ನೌಕರರನ್ನು ಜಮ್ಮು-ಕಾಶ್ಮೀರ ಆಡಳಿತ ಕೆಲಸದಿಂದ ವಜಾ ಮಾಡಿದೆ.
ಹಂತಕರ ಹತ್ಯೆ
ಬಂಡಿಪೋರಾದ ಬ್ರಾರ್ ಅರಗಮ್‌ನಲ್ಲಿ ಶುಕ್ರವಾರ ಸಂಜೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಲಷ್ಕರ್ ಉಗ್ರರನ್ನು ಕೊಲ್ಲಲಾಗಿದೆ. ಈ ಪೈಕಿ ಇಬ್ಬರು ರಾಹುಲ್ ಹತ್ಯೆಯಲ್ಲಿ ಭಾಗಿಯಾದವರೆಂದು ಪೊಲೀ ಸರು ತಿಳಿಸಿದ್ದು, ಭಟ್ ಹತ್ಯೆಗೆ 24 ಗಂಟೆಗಳಲ್ಲೇ ಪ್ರತೀಕಾರ ತೀರಿಸಿದಂತಾಗಿದೆ.