Advertisement

ಬಿಸಿಲನಾಡಲ್ಲಿ ಕಾಶ್ಮೀರಿ ಸೇಬು ಬೆಳೆದ ರೈತ

02:22 PM May 21, 2022 | Team Udayavani |

ಬೀದರ: ಅದು ಸಮಶೀತೋಷ್ಣ ಪ್ರದೇಶ, ಮೈನಸ್‌ ಡಿಗ್ರಿ ತಾಪಮಾನದ ಕಾಶ್ಮೀರ ಕಣಿವೆಯಲ್ಲಿ ಬೆಳೆಯುವ ರುಚಿಕರ ಹಣ್ಣು ಸೇಬು (ಆ್ಯಪಲ್‌). ಆದರೆ, ಈಗ ಆ ಕಾಶ್ಮೀರಿ ಸೇಬನ್ನು ಬಿಸಿಲನಾಡು ಬೀದರನ ನೆಲದಲ್ಲಿ ಕೃಷಿಕರೊಬ್ಬರು ಬೆಳೆಯುವ ಮೂಲಕ ಬೆರಗು ಮೂಡಿಸಿದ್ದಾರೆ.

Advertisement

ಹೌದು, ಕಾಶ್ಮೀರದ ಹಿಮ ಭರಿತ, ಚಳಿಯ ವಾತಾವರಣದಲ್ಲಿ ಬೆಳೆಯುವ ಸೇಬು ಹಣ್ಣನ್ನು ಬರದ ನಾಡಿನ ಕೆಂಪು ಭೂಮಿಯಲ್ಲಿ ಬೆಳೆದು ಸೈ ಎನಿಸಿಕೊಂಡವರು ಹುಮನಾಬಾದ ತಾಲೂಕಿನ ಘಾಟಬೊರಾಳ ಗ್ರಾಮದ ಪ್ರಗತಿಪರ ರೈತ ಅಪ್ಪಾರಾವ್‌ ಭೊಸ್ಲೆ. ಬೀದರ ನಲವತ್ತು ಡಿಗ್ರಿ ಆಸುಪಾಸು ತಾಪಮಾನ ದಾಖಲಾಗುವ, ಸದಾ ಪ್ರಕೃತಿ ವಿಕೋಪದ ಹೊಡೆತಕ್ಕೆ ಸಿಲುಕುವ ಜಿಲ್ಲೆ. ತೋಟಗಾರಿಕೆಯಲ್ಲಿ ರುಚಿಕರವಾದ ದ್ರಾಕ್ಷಿ ಬೆಳೆಗೆ ಪ್ರಸಿದ್ಧವಾದ ಧರಿನಾಡಿನಲ್ಲಿ ಅಪ್ಪಾರಾವ್‌ ಕಾಶ್ಮೀರಿ ಸೇಬು ಬೆಳೆದು ಹೊಸ ಪ್ರಯೋಗದಲ್ಲಿ ಯಶಸ್ಸು ಕಂಡಿದ್ದಾರೆ.

ಸಮಶೀತೋಷ್ಣ ಪ್ರದೇಶದಲ್ಲಿ ಮಾತ್ರ ಬೆಳೆಯುವ ಸೇಬು ಹಣ್ಣಿನ ಬೆಳವಣಿಗೆಗೆ 4ರಿಂದ 21 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ, ಸುಮಾರು 100-125 ಸೆಮೀನಷ್ಟು ಮಳೆ ಅತಿ ಸೂಕ್ತ. ಮೋಡ ಮುಸುಕಿದ, ಕಡಿಮೆ ಉಷ್ಣಾಂಶದ, ಆದ್ರ ವಲಯ ಈ ಹಣ್ಣಿನ ಬೆಳವಣಿಗೆಗೆ ಪೂರಕ. ಕಾಶ್ಮೀರ ಸೇರಿ ಉತ್ತರ ಭಾರತದ ಕೆಲವು ಕಣಿವೆ ರಾಜ್ಯಗಳಲ್ಲಿ ಸೇಬನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇದೇ ಮೊದಲ ಬಾರಿಗೆ ಘಾಟಬೊರಾಳದ ರೈತ ಭೋಸ್ಲೆ ತಮ್ಮ ಒಂದು ಎಕರೆ ಜಮೀನಿನಲ್ಲಿ ಸೇಬು ಬೆಳೆಯುವ ಪ್ರಯೋಗದ ಮೂಲಕ ಹೊಸ ಆಶಾಭಾವ ಮೂಡಿಸಿದ್ದಾರೆ.

ಕಾಶ್ಮೀರ ಪ್ರವಾಸದ ವೇಳೆ ಅಲ್ಲಿನ ಸ್ವಾದಿಷ್ಟ ಆ್ಯಪಲ್‌ಗೆ ಆಕರ್ಷಿತರಾಗಿದ್ದ ಅಪ್ಪಾರಾವ್‌, ನಮ್ಮ ಬಿಸಿಲು ನೆಲದಲ್ಲಿ ಏಕೆ ಈ ಹಣ್ಣನ್ನು ಬೆಳೆಯಬಾರದೆಂದು ಯೋಚಿಸಿ, ಬೆಳೆಗಾರರಿಂದ ಅಗತ್ಯ ಮಾಹಿತಿ ಪಡೆದಿದ್ದರು. ತಮ್ಮ 7 ಎಕರೆ ಪೈಕಿ 3 ಎಕರೆಯಲ್ಲಿ ಚಿಕ್ಕು, ಮೋಸಂಬಿ, ಸಂತರಾ, ಅಂಜುರ್‌, ಮಾವಿನ ಹಣ್ಣು ಹೀಗೆ ವಿವಿಧ ತೋಟಗಾರಿಕೆ ಬೆಳೆದಿರುವ ಭೋಸ್ಲೆ ಸೇಬು ಕೃಷಿಯನ್ನೂ ಆರಂಭಿಸಿದ್ದಾರೆ. ಆ ಮೂಲಕ ಈ ಭಾಗದಲ್ಲೂ ಯಾವುದೇ ಹಿಂಜರಿಕೆ ಇಲ್ಲದೇ ಸೇಬು ಹಣ್ಣು ಬೆಳೆಯಬಹುದು ಎಂಬುದನ್ನು ರೈತ ಸಮುದಾಯಕ್ಕೆ ತೋರಿಸಿಕೊಟ್ಟಿದ್ದಾರೆ.

ಸಾಗಣೆ ವೆಚ್ಚ ಸೇರಿ 300 ರೂ.ಗಳಂತೆ 15 ತಿಂಗಳಿನ 210 ಕಾಶ್ಮೀರಿ ಸೇಬು (ಎಚ್‌ಆರ್‌ ಎಂಎನ್‌-99 ತಳಿ) ಗಿಡಗಳನ್ನು ಖರೀದಿಸಿ, ತಮ್ಮ ಒಂದು ಎಕರೆ ಪ್ರದೇಶದಲ್ಲಿ 14*14 ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ. ತೆರದ ಬಾವಿ ನೀರನ್ನು ಹನಿ ನೀರಾವರಿ ಪದ್ಧತಿ ಮೂಲಕ ಸೇಬು ಗಿಡಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ರಾಸಾಯನಿಕ ಗೊಬ್ಬರ, ಔಷಧ ಬಳಸದೇ ತಿಪ್ಪೆ ಗೊಬ್ಬರ, ಜೀವಾಮೃತವನ್ನು ಉಪಯೋಗಿಸಿದ್ದಾರೆ. ಸೊಂಪಾಗಿ ಬೆಳೆದಿರುವ ಈ ಗಿಡಗಳಿಂದ 20-22 ವರ್ಷದವರೆಗೆ ಫಸಲು ಪಡೆಯಬಹುದಾಗಿದ್ದು, ಈವರೆಗೆ 5ರಿಂದ 6 ಲಕ್ಷ ರೂ. ಖರ್ಚು ಮಾಡಿದ್ದಾರೆ.

Advertisement

ಈ ಗಿಡಗಳು ಕಣಿವೆ ನಾಡಿನಲ್ಲಿ ಒಮ್ಮೆ ಫಸಲು ನೀಡಿದರೆ, ಇಲ್ಲಿನ ಪ್ರದೇಶದಲ್ಲಿ 6 ತಿಂಗಳ ಅಂತರದಲ್ಲಿ ಎರಡು ಬಾರಿ ಫ‌ಲ ನೀಡುತ್ತವೆ. ಇದಕ್ಕೆ ರೋಗ ಬಾಧೆಯೂ ತೀರಾ ಕಡಿಮೆ. ಒಂದು ಗಿಡಕ್ಕೆ 20-25 ಸೇಬು ನೀಡಲಿದ್ದು, ಉತ್ತಮ ಆದಾಯ ಬರಬಹುದೆಂಬ ನಿರೀಕ್ಷೆ ಇದೆ. ವಿಶೇಷ ಸೇಬು ಕೃಷಿಯನ್ನು ನೋಡಲು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಮಾತ್ರವಲ್ಲ ನೆರೆಯ ಮಹಾರಾಷ್ಟ್ರದ ಆಸಕ್ತ ರೈತರು ಭೇಟಿ ಕೊಟ್ಟು, ಮಾಹಿತಿ ಪಡೆಯುತ್ತಿದ್ದಾರೆ ಎನ್ನುತ್ತಾರೆ ಅಪ್ಪಾರಾವ್‌.

ಸಮಶೀತೋಷ್ಣ ಪ್ರದೇಶದಲ್ಲಿ ಮಾತ್ರ ಸೇಬು ಬೆಳೆಯುತ್ತಾರೆ ಎನ್ನಲಾಗುತ್ತಿತ್ತು. ಆದರೆ, ಬರದ ನಾಡು ಬೀದರ ನೆಲದಲ್ಲಿಯೂ ಕಾಶ್ಮೀರಿ ಸೇಬನ್ನು ಬೆಳೆಯುವ ಛಲ ತೊಟ್ಟು, ಈಗ ಸಾಧಿಸಿ ತೋರಿಸಿದ್ದೇನೆ. ಅಷ್ಟೇ ಅಲ್ಲ ನಮ್ಮ ವಾತಾವರಣದಲ್ಲಿ ವರ್ಷಕ್ಕೆ ಎರಡು ಬಾರಿ ಫಸಲು ಪಡೆಯುವ ವಿಶ್ವಾಸ ಇದೆ. ಸೇಬು ಕೃಷಿಯನ್ನು ವೀಕ್ಷಿಸಲು ಈ ಭಾಗದ ಜಿಲ್ಲೆಯವರು ಮಾತ್ರವಲ್ಲ, ಮಹಾರಾಷ್ಟ್ರದ ರೈತರು ಸಹ ಆಗಮಿಸಿ ಮಾಹಿತಿ ಪಡೆಯುತ್ತಿರುವುದು ಖುಷಿ ತಂದಿದೆ. -ಅಪ್ಪಾರಾವ್‌ ಭೋಸ್ಲೆ, ಸೇಬು ಕೃಷಿಕರು, ಘಾಟಬೊರಾಳ

ಬಿಸಿಲನಾಡು ಬೀದರನಲ್ಲೂ ಕಾಶ್ಮೀರಿ ಸೇಬನ್ನು ಬೆಳೆಯಬಹುದು ಎಂಬುದನ್ನು ಕೃಷಿಕ ಅಪ್ಪಾರಾವ್‌ ಭೋಸ್ಲೆ ಸಾಧಿಸಿ ತೋರಿಸಿದ್ದಾರೆ. ಕೃಷಿಯಲ್ಲಿ ಹೊಸ ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳುವ ಪ್ರಗತಿಪರ ರೈತ ಆ್ಯಪಲ್‌ ಕೃಷಿಯನ್ನು ಯಶಸ್ವಿಯಾಗಿ ಮಾಡಿ ಯುವ ರೈತರಿಗೆ ಪ್ರೇರಣೆಯಾಗಿದ್ದಾರೆ. -ಡಾ| ಸುನೀಲಕುಮಾರ ಎನ್.ಎಂ, ಮುಖ್ಯಸ್ಥರು, ಕೆವಿಕೆ, ಬೀದರ

-ಶಶಿಕಾಂತ ಬಂಬುಳಗ

Advertisement

Udayavani is now on Telegram. Click here to join our channel and stay updated with the latest news.

Next