Advertisement

ಮತ್ತೂಮ್ಮೆ ಉಗ್ರರ ಹತಾಶೆಯ ಪ್ರಯತ್ನ

11:16 AM Jun 03, 2022 | Team Udayavani |

ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಕೇಂದ್ರ ಸರಕಾರ ಪ್ರಯತ್ನ ಮಾಡುತ್ತಿದೆ. ಅದಕ್ಕೆ ಸವಾಲು ಎಸೆಯಲು ಕಿಡಿಗೇಡಿ ಉಗ್ರ ಸಂಘಟನೆಗಳು ಮುಂದಾಗಿವೆ. ಅದಕ್ಕೆ ಪುರಾವೆ ಎಂಬಂತೆ ಕಾಶ್ಮೀರಿ ಪಂಡಿತರನ್ನು, ಸರಕಾರಿ ಉದ್ಯೋಗಿಗಳನ್ನು ಕೊಲ್ಲುತ್ತಿದ್ದಾರೆ. ಮಾಸಾಂತ್ಯದಿಂದ 45 ದಿನಗಳ ವರೆಗೆ ನಡೆಯುವ ಅಮರನಾಥ ಯಾತ್ರೆ, ಶೀಘ್ರದಲ್ಲಿಯೇ ನಡೆಯಲಿರುವ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಸೇರಿದಂತೆ ಯಥಾಸ್ಥಿತಿ ಕಾಪಾಡುವ ಪ್ರಯತ್ನಗಳಿಗೆ ತಣ್ಣೀರು ಹಾಕಬೇಕೆನ್ನುವುದೇ ಅವರ ಯತ್ನವಾಗಿದೆ.

Advertisement

ಮತ್ತೆ ತಲೆ ಎತ್ತಿದ ಉಗ್ರರು
2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನವನ್ನು ರದ್ದುಗೊಳಿಸಿದ ಬಳಿಕ ಅಲ್ಲಿ ಪ್ರತಿರೋಧಗಳು ಕಂಡುಬಂದಿದ್ದವು. ಗಮನಿಸಬೇಕಾದ ಅಂಶವೆಂದರೆ, ಅಲ್ಲಿ ವಿಶೇಷ ಸ್ಥಾನಮಾನ ಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದವರೆಲ್ಲ ಸ್ಥಳೀಯರೇ ಆಗಿರಲಿಲ್ಲ. ಅವರನ್ನೆಲ್ಲ ಮಟ್ಟ ಹಾಕಿದ ಬಳಿಕ ಒಂದು ಹಂತಕ್ಕೆ ಶಾಂತಿ ನೆಲೆಸಿತ್ತು. ಮಾಸಾಂತ್ಯಕ್ಕೆ ಅಮರ ನಾಥ ಯಾತ್ರೆ ಶುರುವಾಗಲಿದೆ. ಭಾರತ ಸರಕಾರ ಮತ್ತು ಕಾಶ್ಮೀರದಲ್ಲಿ ಜನರನ್ನು ನೆಮ್ಮದಿಯಿಂದ ಇರಲು ಬಿಡಲಾರೆವು ಎಂಬ ಕುತ್ಸಿತ ಧೋರಣೆಗಳಿಂದಲೇ ವಿವಿಧ ಉಗ್ರ ಸಂಘಟನೆಗಳು ಅಮಾಯಕರನ್ನು ಕೊಲ್ಲುತ್ತಿವೆ.

ಸರಕಾರದ ಕ್ರಮ ಏನು?
ಕಳೆದ ತಿಂಗಳಲ್ಲಿಯೇ ಸಾಮಾನ್ಯ ಜನರನ್ನು ಗುರಿಯಾಗಿಸಿ ಉಗ್ರರು ಕೊಲ್ಲುತ್ತಿದ್ದಾರೆ ನಿಜ. ಕೇಂದ್ರ ಸರಕಾರವೂ ಅವರ ವಿರುದ್ಧ ನಿರ್ದಾಕ್ಷಿಣ್ಯದ ಕ್ರಮಗಳನ್ನು ಕೈಗೊಂಡಿದೆ. ಮೇ 17ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಖುದ್ದಾಗಿ ಕೇಂದ್ರಾಡಳಿತ ಪ್ರದೇಶಕ್ಕೆ ತೆರಳಿ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆಯನ್ನೂ ನಡೆಸಿದ್ದರು. ಕಟ್ರಾದಲ್ಲಿ ಉಗ್ರರು ಗ್ರೆನೇಡ್‌ ಎಸೆದು ವೈನ್‌ಶಾಪ್‌ ಉದ್ಯೋಗಿ ರಂಜಿತ್‌ ಸಿಂಗ್‌ ಗಾಯಗೊಂಡು ಅನಂತರ ಅಸುನೀಗಿದ್ದರು. ಶಿಕ್ಷಕಿ ರಜನಿ ಬಾಲಾ ಹತ್ಯೆ ಬಳಿಕ ಜೂ.3ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತೆ ಬಗ್ಗೆ ಸಭೆ ನಡೆಸಿ ಪರಿಶೀಲನೆ ನಡೆಸಲಿದ್ದಾರೆ.

ಕಾಶ್ಮೀರಿ ಪಂಡಿತ ಸಮುದಾಯದವರ ಆತಂಕ
ಮೇ 12ರಂದು ಬುದ್ಗಾಂವ್‌ ಜಿಲ್ಲೆಯ ಛದೂರಾ ಎಂಬಲ್ಲಿ ಕಂದಾಯ ಇಲಾಖೆಯ ಅಧಿಕಾರಿ, ಕಾಶ್ಮೀರಿ ಪಂಡಿತ ಸಮುದಾಯದ ರಾಹುಲ್‌ ಭಟ್‌ ಅವರನ್ನು ಉಗ್ರರು ಕೊಂದ ಬಳಿಕ ಮತ್ತು ಮೇ 31ರಂದು ಶಿಕ್ಷಕಿ ರಜನಿ ಬಾಲಾ ಅವರನ್ನು ಹತ್ಯೆ ಮಾಡಿದ ಬಳಿಕ ಕಾಶ್ಮೀರ ಪಂಡಿತ ಸಮುದಾಯದವರಿಗೆ ಭೀತಿ ಆವರಿಸಿದೆ. ಕೇಂದ್ರ ಸರಕಾರದ ಸಮುದಾ ಯದವರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದು ಕೊಂಡು ಹೋಗಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಜತೆಗೆ ಸಾಮೂಹಿಕವಾಗಿ ಉಗ್ರರು ದಾಳಿ ನಡೆಸು ತ್ತಿರುವ ಜಿಲ್ಲೆಗಳಿಂದ ಬೇರೆ ಸ್ಥಳಗಳಿಗೆ ಹೋಗುವ ಮಾತುಗಳನ್ನಾಡುತ್ತಿದ್ದಾರೆ.

ಸಭೆಯನ್ನೂ ಪೂರ್ತಿಗೊಳಿಸಿದೆ ಚುನಾವಣ ಆಯೋಗ
ಈ ಆತಂಕದ ನಡುವೆಯೇ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಪ್ರಯತ್ನಗಳೂ ಮುಂದುವರಿದಿವೆ. ಕ್ಷೇತ್ರಗಳ ಪುನರ್‌ ವಿಂಗಡಣ ಸಮಿತಿ ಭಾರತದ ಚುನಾವಣ ಆಯೋಗಕ್ಕೆ ಈಗಾಗಲೇ ವರದಿ ಸಲ್ಲಿಸಿದೆ. ಅದರ ಬಳಿಕ ಶ್ರೀನಗರಕ್ಕೆ ಕಳೆದ ವಾರ ಮುಖ್ಯ ಚುನಾವಣ ಆಯುಕ್ತ ರಾಜೀವ್‌ ಕುಮಾರ್‌ ನೇತೃತ್ವದಲ್ಲಿ ಜಮ್ಮು ಮತ್ತು ಕಾಶ್ಮೀರ ಚುನಾವಣ ಆಯೋಗದ ಜತೆಗೆ ಹಾಲಿ ಪರಿಸ್ಥಿತಿಯ ಪರಾಮರ್ಶೆಯನ್ನೂ ನಡೆಸಿದ್ದಾರೆ. ಅಕ್ಟೋಬರ್‌ ಒಳಗಾಗಿ ಅಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಬೇಕಾದ ಸಿದ್ಧತೆಯನ್ನು  ಪೂರ್ಣಗೊಳಿಸುವ ಬಗ್ಗೆ ಆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಡಿಸೆಂಬರ್‌ ಒಳಗೆ ಪೂರ್ಣ ಸಿದ್ಧತೆ ನಡೆದಿರಬೇಕು ಎಂದು ತೀರ್ಮಾನಿಸಲಾಗಿದೆ.

Advertisement

ಉಗ್ರರಿಗೆ ಬಲಿಯಾದದ್ದು 16 ಮಂದಿ
ಕಾಶ್ಮೀರದಲ್ಲಿ ನೆಮ್ಮದಿ ಇರುವುದು ಉಗ್ರರಿಗೆ ಮತ್ತು ಅವರಿಗೆ ಬೆಂಬಲ ನೀಡುವ ವ್ಯಕ್ತಿಗಳು, ಸಂಘಟನೆಗಳಿಗೆ ಬೇಕಾಗಿಯೇ ಇಲ್ಲ. ಅದಕ್ಕಾಗಿಯೇ ಪ್ರಸಕ್ತ ವರ್ಷ ಶುರುವಾಗುತ್ತಿರುವಂ ತೆಯೇ ಉಗ್ರರಿಗೆ 16 ಮಂದಿ ಬಲಿಯಾಗಿದ್ದಾರೆ. ಅವರಲ್ಲಿ ಪೊಲೀಸ್‌ ಅಧಿಕಾರಿಗಳು, ಶಿಕ್ಷಕರು, ಪಂಚಾಯತ್‌ ಅಧ್ಯಕ್ಷರು ಸೇರಿದ್ದಾರೆ. ಏಕೆಂದರೆ, ಚುನಾಯಿತ ಮತ್ತು ಸದೃಢ ನಿಲುವು ಹೊಂದಿದ ಸರಕಾರ ಅಧಿಕಾರಕ್ಕೆ ಬಂದರೆ ವಿಘ್ನ ಸಂತೋಷಿಗಳ ಅಟಾಟೋಪಕ್ಕೆ ತೆರೆ ಬಿದ್ದಂತೆಯೇ ಸರಿ. ಅದಕ್ಕಾಗಿಯೇ ಕಾಶ್ಮೀರಿ ಪಂಡಿತ ಸಮುದಾಯದವರು, ಸರಕಾರಿ ಉದ್ಯೋಗಿಗಳನ್ನು ಗುರಿಯಾಗಿ ಇರಿಸಿಕೊಂಡು ಕೊಲ್ಲಲಾಗುತ್ತಿದೆ.

ಕಳೆದ ತಿಂಗಳು ಏನಾಯಿತು?
03 ಹುತಾತ್ಮರಾದ ಪೊಲೀಸರು
06 ಉಗ್ರರ ಗುಂಡಿಗೆ ಬಲಿಯಾದ ನಾಗರಿಕರು
01 ಉಗ್ರರಿಂದ ಹತ್ಯೆಗೀಡಾದ ಸೇನೆಯ ಪೋರ್ಟರ್‌
15 ಎನ್‌ಕೌಂಟರ್‌, 27 ಸತ್ತುಹೋದ ಉಗ್ರರು
ಮೇ 7: ಪೊಲೀಸ್‌ ಕಾನ್‌ಸ್ಟೆಬಲ್‌ ಗುಲಾಂ ಹಸನ್‌ ದರ್‌
ಮೇ 12: ಕಂದಾಯ ಅಧಿಕಾರಿ ರಾಹುಲ್‌ ಭಟ್‌
ಮೇ 13: ವಿಶೇಷ ಪೊಲೀಸ್‌ ಅಧಿಕಾರಿ ರಿಯಾಜ್‌ ಅಹ್ಮದ್‌ ಥೋಕರ್‌
ಮೇ 17: ವೈನ್‌ಶಾಪ್‌ನಲ್ಲಿ ಕೆಲಸ ಮಾಡುವ ರಂಜಿತ್‌ ಸಿಂಗ್‌
ಮೇ 25: ಪೊಲೀಸ್‌ ಕಾನ್‌ಸ್ಟೆàಬಲ್‌ ಸೈಫ‌ುಲ್ಲಾ ಕ್ವಾದ್ರಿ
ಮೇ 25: ಕಾಶ್ಮೀರಿ ಕಲಾವಿದೆ ಅಮ್ರಿàನಾ ಭಟ್‌
ಮೇ 31: ಶಿಕ್ಷಕಿ ರಜನಿ ಬಾಲಾ

ಕೆಣಕಿದ ಉಗ್ರರ ಹತ್ಯೆ
ಪ್ರಸಕ್ತ ವರ್ಷದ ಆರಂಭದಿಂದಲೂ ಉಗ್ರರ ವಿರುದ್ಧ ಶೂನ್ಯ ಸಹನೆ ಧೋರಣೆ ತಳೆಯಲಾಗಿದೆ. ಮೇ 26ರ ವರೆಗಿನ ಮಾಹಿತಿ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ 50 ಎನ್‌ಕೌಂಟರ್‌ಗಳು ನಡೆದಿವೆ ಮತ್ತು 78 ಮಂದಿ ಉಗ್ರರು ಜೀವ ಕಳೆದುಕೊಂಡಿದ್ದಾರೆ. ಈ ಪೈಕಿ 26 ಮಂದಿ ವಿದೇಶಿ ಉಗ್ರರು. ಅಸುನೀಗಿದ ವಿದೇಶಿ ಉಗ್ರರ ಪೈಕಿ, 12 ಮಂದಿ ಲಷ್ಕರ್‌-ಎ-ತಯ್ಯಬಾ, 14 ಮಂದಿ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next