Advertisement

ಕಾಶ್ಮೀರದಲ್ಲಿ ಉಗ್ರರ ಆಟಾಟೋಪಕ್ಕೆ ಅಂತ್ಯ ಸಿಗಲಿ

11:34 PM Oct 07, 2021 | Team Udayavani |

ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರ ಆಟಾಟೋಪ  ಹೆಚ್ಚುತ್ತಿದ್ದು, ಆತಂಕ ಸೃಷ್ಟಿಯಾಗಿದೆ. ಕಲ್ಲು ಹೊಡೆಯುವವರ  ಸಂಖ್ಯೆ ಇಳಿಮುಖವಾಗಿದ್ದು, ಜಮ್ಮು ಕಾಶ್ಮೀರ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಅಂದುಕೊಳ್ಳುತ್ತಿರುವಾಗಲೇ ನಾಗರಿಕರ ಮೇಲಿನ ದಾಳಿ ಆತಂಕಕ್ಕೆ ಈಡು ಮಾಡಿದೆ. ಅದರಲ್ಲೂ ಶಿಕ್ಷಕರು, ಕಾಶ್ಮೀರಿ ಪಂಡಿತರೇ ಉಗ್ರರ ಟಾರ್ಗೆಟ್‌ ಆಗುತ್ತಿರುವುದು ಈ ಭಯಕ್ಕೆ ಕಾರಣವಾಗಿದೆ.

Advertisement

ಕಳೆದ ಒಂದು ವಾರದಲ್ಲಿ ಒಟ್ಟು ಏಳು ಮಂದಿ ಉಗ್ರರ ಗುಂಡಿಗೆ ಬಲಿಯಾಗಿ­ದ್ದಾರೆ. ಈ ವರ್ಷ ಆರಂಭವಾದಾಗಿನಿಂದ ಇಲ್ಲಿ ವರೆಗೆ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ 17 ಮಂದಿ ಬಹುಸಂಖ್ಯಾಕರಾಗಿದ್ದರೆ ಎಂಟು ಮಂದಿ ಅಲ್ಪಸಂಖ್ಯಾಕ ವರ್ಗಕ್ಕೆ ಸೇರಿದವರಾಗಿದ್ದಾರೆ. ಶ್ರೀನಗರವೊಂದರಲ್ಲೇ 10 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಪುಲ್ವಾಮಾ ಘಟನೆ ಮತ್ತು ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂದೆಗೆದ ಮೇಲೆ, ಕಾಶ್ಮೀರ ಮತ್ತು ಲಡಾಖ್‌ ಕೇಂದ್ರಾಡಳಿತ ಪ್ರದೇಶಗಳು ಸಾಮಾನ್ಯ ಸ್ಥಿತಿಗೆ ಮರಳುವ ಲಕ್ಷಣ ತೋರಿದ್ದವು. ಈ ಹಿಂದೆ ಕಾಣುತ್ತಿದ್ದ ಕಲ್ಲುತೂರಾಟದಂಥ ಘಟನೆಗಳು ತೀರಾ ಎನ್ನುವಷ್ಟರ ಮಟ್ಟಿಗೆ ಕಡಿಮೆಯಾಗಿವೆ. ಪ್ರವಾಸೋದ್ಯಮವೂ ಚಿಗುರಿಕೊಳ್ಳುತ್ತಿದೆ. ಆದರೆ ಪಾಕಿಸ್ಥಾನ‌ ಪ್ರೇರಿತ ಉಗ್ರರು ಈ ಸಾಮಾನ್ಯ ಸ್ಥಿತಿಯನ್ನು ಸಹಿಸುತ್ತಿಲ್ಲ. ಜಮ್ಮು ಕಾಶ್ಮೀರವೂ ದೇಶದ ಇನ್ನೊಂದು ರಾಜ್ಯದಂತೆ ಸಾಮಾನ್ಯ ಸ್ಥಿತಿಗೆ ಮರಳಿದರೆ ಪಾಕಿಸ್ಥಾನ ಸರಕಾರಕ್ಕೆ ಹೊಟ್ಟೆ ಕಿಚ್ಚು ಹೆಚ್ಚು. ಹೀಗಾಗಿಯೇ ಉಗ್ರರನ್ನು ಛೂ ಬಿಟ್ಟು ಇಂಥ ಕೆಲಸ ಮಾಡಿಸುತ್ತಿದೆ.

ಇತ್ತೀಚೆಗೆ ನಡೆದಿರುವಂಥ ನಾಗರಿಕರ ಹತ್ಯೆ ಬಗ್ಗೆ ಇದುವರೆಗೆ ಯಾವುದೇ ಉಗ್ರ ಸಂಘಟನೆ ಹೊಣೆ ಹೊತ್ತಿಲ್ಲ. ಆದರೂ  ದಿ ರೆಸಿಸ್ಟೆನ್ಸ್‌ ಫ್ರಂಟ್‌(ಟಿಆರ್‌ಎಫ್) ಎಂಬ ಉಗ್ರ ಸಂಘಟನೆ

ನಾವೇ ನಾಗರಿಕರ ಮೇಲೆ ದಾಳಿ ಮಾಡಿರುವುದು ಎಂದು ಹೇಳಿಕೊಂಡಿದೆ. ಆದರೆ ಇದರ ಸತ್ಯಾಸತ್ಯತೆ ಇನ್ನೂ ಖಚಿತವಾಗಿಲ್ಲ. ಈ ಉಗ್ರ ಸಂಘಟನೆ ಯಾರು ಕಾಶ್ಮೀರಕ್ಕೆ ವಿರುದ್ಧವಾಗಿರುತ್ತಾರೋ ಅವರನ್ನು ನಾವು ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕುತ್ತಿದೆ. ಹಾಗೆಯೇ ಇತ್ತೀಚೆಗಷ್ಟೇ ಉಗ್ರರ ಗುಂಡಿಗೆ ಬಲಿಯಾದ ಕೆಮಿಸ್ಟ್‌ ಬಿಂದ್ರೂ ಮತ್ತು ಗುರುವಾರವಷ್ಟೇ ಸಾವಿಗೀಡಾದ ಮುಖ್ಯೋಪಾಧ್ಯಾಯರ ಹತ್ಯೆಗೆ ತಾವೇ ಕಾರಣ ಎಂದು ಹೇಳಿದೆ. ಅದರಲ್ಲೂ ಗುರುವಾರ ಹತ್ಯೆಗೀಡಾದ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಆರ್‌ಎಸ್‌ಎಸ್‌ ಸಿದ್ಧಾಂತ ಹೇಳುತ್ತಿದ್ದರು. ಹೀಗಾಗಿ ನಾವು ಹತ್ಯೆ ಮಾಡಿದ್ದೇವೆ ಎಂದಿದೆ.

ಏನೇ ಆಗಲಿ ಜಮ್ಮು ಕಾಶ್ಮೀರದಲ್ಲಿ ಯಾವುದೇ ಕಾರಣಕ್ಕೂ ಮುಗ್ಧ ನಾಗರಿಕರು ಬಲಿಯಾಗಬಾರದು. ರಾಜ್ಯವನ್ನು ಸಾಮಾನ್ಯ ಸ್ಥಿತಿಗೆ ತರಬೇಕು, ಉಗ್ರರ ಆಟಾಟೋಪ ಹತ್ತಿಕ್ಕಬೇಕು ಎಂಬ ಉದ್ದೇಶದಿಂದಲೇ 370ನೇ ವಿಧಿ ರದ್ದುಗೊಳಿಸಿ, ವಿಶೇಷ ಸ್ಥಾನಮಾನ

Advertisement

ಹಿಂದೆಗೆಯಲಾಗಿದೆ. ಇತ್ತೀಚಿನ ದಿನಗಳಲ್ಲಿ ಉಗ್ರರ ದೊಡ್ಡ ಮಟ್ಟದ ರಂಪಾಟಗಳು ಹೆಚ್ಚಾಗಿ ನಡೆಯುತ್ತಿಲ್ಲ. ಆದರೂ ನಾಗರಿಕರ ಹತ್ಯೆ ಮಾಡುವ ಮೂಲಕ ಉಗ್ರರು ಬೇರೊಂದು ರೀತಿಯಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಹೀಗಾಗಿ ಭದ್ರತಾ ಪಡೆಗಳು ಮತ್ತು ಪೊಲೀಸರು ಉಗ್ರರ ಮೇಲುಗೈ ಆಗಲು ಯಾವುದೇ ಕಾರಣಕ್ಕೂ ಬಿಡಬಾರದು.

Advertisement

Udayavani is now on Telegram. Click here to join our channel and stay updated with the latest news.

Next