ಕೋಟಿಗಟ್ಟಲೆ ಬೆಲೆಬಾಳುವ ರೋಲ್ಸ ರಾಯ್ಸ್ ಕಾರು ಹೊಂದುವುದು ಈ ದಿನಗಳಲ್ಲಿ ಸೆಲೆಬ್ರಿಟಿಗಳಿಗೆ ಪ್ರತಿಷ್ಠೆಯ ವಿಚಾರ. ಅಚ್ಚರಿ ಯೆಂದರೆ ಇಂಥ ಐಷಾರಾಮಿ ಕಾರನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಬಿಜಾಪುರ ಜಿಲ್ಲೆಯ ಜೈನಾಪುರದ ಆಗರ್ಭ ಶ್ರೀಮಂತ ಕುಟುಂಬದ ಸೊಸೆ ಕಾಶಿಬಾಯಿ ಹೊಂದಿದ್ದರು. ಇಂಗ್ಲೆಂಡಿನಿಂದ ಆಮದು ಮಾಡಿಕೊಂಡಿದ್ದ ಈ ಕಾರನ್ನು ನೋಡುವುದೇ ಸುತ್ತಮುತ್ತ ಹಳ್ಳಿ ಮಂದಿಗೆ ಸಂಭ್ರಮದ ವಿಚಾರ ಆಗಿತ್ತು.
ಕಾಶಿಬಾಯಿ ಬಳಿ ರೋಲ್ಸ್ ರಾಯ್ಸ್ ಇರುವ ಸಂಗತಿ ಬಿಜಾಪುರದ ಡಿಸ್ಟ್ರಿಕ್ ಕಲೆಕ್ಟರ್‌ನ ಕಿವಿಗೆ ಬಿತ್ತು. ಅದೊಂದು ದಿನ ಕಲ್ಕತಾದ ಬ್ರಿಟಿಷ್ ಉನ್ನತಾಧಿಕಾರಿಯೊಬ್ಬ ಬಿಜಾಪುರಕ್ಕೆ ಬರುವನಿದ್ದ. ಅವರನ್ನು ಇಂಪ್ರಸ್ ಮಾಡುವ ಸಲುವಾಗಿ, ಬಿಜಾಪುರ ಡಿಸಿ ಕೆಲವು ದಿನಗಳ ಮಟ್ಟಿಗೆ ರೋಲ್ಸ್ ರಾಯ್ಸ್ ಕಾರನ್ನು ಕೊಡುವಂತೆ ಕಾಶಿಬಾಯಿಗೆ ಸೂಚಿಸಿದರು. ಆದರೆ ಈ “ದಿಟ್ಟೆ ಯಾವ ಕಾರಣಕ್ಕೂ ಬ್ರಿಟಿಷರಿಗೆ ಕಾರು ಕೊಡಲಾರೆ’ ಎಂದು ಖಡಾಖಂಡಿತವಾಗಿ ಹೇಳಿದಳು. ಡಿಸಿ ಬಾಡಿಗೆ ರೂಪದಲ್ಲಿ ಸಾಕಷ್ಟು ಹಣ ನೀಡು ವುದಾಗಿಯೂ ಆಮಿಷವೊಡ್ಡಿದ. ಊಹೂಂ, ಕಾಶಿಬಾಯಿ ಒಪ್ಪಲಿಲ್ಲ. ಡಿಸಿ ವಾಗ್ವಾದ ನಡೆಸಿದ. ಬೆದರಿಕೆ ಹಾಕಿದ. ಕಾಶಿಬಾಯಿ ಮಾತ್ರ ಜಗ್ಗಲಿಲ್ಲ.
“ನಮ್ಮ ದೇಶದಿಂದ ಇಂಪೋರ್ಟ್ ಮಾಡ್ಕೊಂಡ ಕಾರನ್ನು ನಮಗೆ ಕೊಡೋದಿಲ್ಲವೆಂದರೆ ಏನರ್ಥ? ಇನ್ನೆಂದೂ ನೀನು ಕಾರು ಓಡಿಸ್ಬಾರ್ದು, ಹಾಗೆ ಮಾಡ್ತೀನಿ’ ಎಂದವನೇ ಕಾರಿನ ನೋಂದಣಿ ಸಂಖ್ಯೆಯನ್ನೇ ಡಿಸಿ ರದ್ದುಮಾಡಿಬಿಟ್ಟ. ಆದರೂ ತಲೆ ಕೆಡಿಸಿಕೊಳ್ಳದ ಕಾಶಿಬಾಯಿ, ಡಿಸಿಗೆ ಹೀಗೆ ಉತ್ತರಿಸಿದಳು: “ನಿಮ್ಮ ಆದೇಶಕ್ಕೆ ನನ್ನ ತಕರಾರಿಲ್ಲ. ನೀವು ರಿಜಿಸ್ಟ್ರೇಶನ್ ನಂಬರ್ ರದ್ದು ಮಾಡಿದರೇನಂತೆ… ನಾನು ಇದರ ಮೇಲೆ ದನದ ಸೆಗಣಿ ಬಳಿದು ಬೆರಣಿ ತಟ್ಟುವೆ’ ಎಂದು ಲಕ್ಷುರಿ ಕಾರನ್ನು ಸ್ವಾತಂತ್ರ್ಯ ಸಿಗುವ ತನಕವೂ ಬೆರಣಿ ತಟ್ಟಲು ಬಳಸಿದಳು.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಮರುದಿನವೇ ಈ ಕಾರನ್ನು ಸಂಚಾರಕ್ಕೆ ಬಳಸಿಕೊಂಡರು.
-ಜಿ.ಎಸ್. ಕಮತರ, ವಿಜಯಪುರ