Advertisement

ತುಳು ಭಾಷೆಗೆ ಸಾಂವಿಧಾನಿಕ ಸ್ಥಾನಮಾನಕ್ಕೆ ಲೋಕಸಭೆಯಲ್ಲಿ ಆಗ್ರಹಿಸಿದ ಕೇರಳ ಸಂಸದ!

09:42 AM Dec 04, 2019 | Team Udayavani |

ಮಂಗಳೂರು: ಇದು ವಿಚಿತ್ರವಾದರೂ ನಿಜ! ದಕ್ಷಿಣ ಕನ್ನಡ, ಕಾಸರಗೋಡು ಮತ್ತು ಉಡುಪಿ ಜಿಲ್ಲೆಯ ಬಹುತೇಕ ಜನರ ಆಡುಭಾಷೆಯಾಗಿರುವ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಆಗ್ರಹ ಹಲವಾರು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಈ ಸಂಬಂಧವಾಗಿ ಕಳೆದ ವರ್ಷ ಬೃಹತ್ ಟ್ವಿಟ್ಟರ್ ಅಭಿಯಾನವೂ ನಡೆದು ಹೋಗಿತ್ತು.

Advertisement

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ಸಂಸದರೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಪ್ರತಿನಿಧಿಸುತ್ತಿದ್ದರೂ ಕಳೆದ ಅವಧಿಯಲ್ಲಿ ತುಳು ಭಾಷೆಗೆ ಸಾಂವಿಧಾನಿಕ ಸ್ಥಾನಮಾನವನ್ನು ಕೊಡಿಸುವ ನಿಟ್ಟಿನಲ್ಲಿ ಅವರ್ಯಾರು ಪ್ರಯತ್ನಪಟ್ಟಿಲ್ಲ ಎಂಬ ಆರೋಪವೂ ಅವರ ಮೇಲಿದೆ. ಇಷ್ಟು ಮಾತ್ರವಲ್ಲದೇ ತುಳುವರೇ ಆಗಿರುವ ಸಂಸದ ಡಿ ವಿ ಸದಾನಂದ ಗೌಡ ಮತ್ತು ವೀರಪ್ಪ ಮೊಯಿಲಿ ಅವರು ಕೆಂದ್ರ ರಾಜಕೀಯ ರಂಗದಲ್ಲಿ ಪ್ರಭಾವಿ ವ್ಯಕ್ತಿಗಳಾಗಿದ್ದರೂ ಅವರಿಂದಲೂ ತುಳು ಭಾಷೆಗೆ ಸಾಂವಿಧಾನಿಕ ಸ್ಥಾನಮಾನ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಸಿಟ್ಟು ತುಳುವರದ್ದಾಗಿದೆ.

ಆದರೆ ಇದಕ್ಕೆ ಅಪವಾದವೆಂಬಂತೆ ಗಡಿನಾಡು ಕಾಸರಗೋಡು ಕ್ಷೇತ್ರದ ಕಾಂಗ್ರೆಸ್ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರು ತುಳು ಭಾಷೆಗೆ ಸಾಂವಿಧಾನಿಕ ಸ್ಥಾನಮಾನವನ್ನು ನೀಡಬೇಕು ಎಂದು ಆಗ್ರಹಿಸಿ ಲೋಕಸಭೆಯಲ್ಲಿ ಮಾತನಾಡಿದ್ದಾರೆ. ಸೋಮವಾರದಂದು ಲೋಕಸಭೆಯ ಶೂನ್ಯವೇಳೆಯಲ್ಲಿ ಮಾತನಾಡುವ ಅವಕಾಶ ಪಡೆದ ರಾಜ್ ಮೋಹನ್ ಅವರು ಸುಮಾರು ಮೂರು ಪುಟಗಳ ತಮ್ಮ ಮನವಿಯಲ್ಲಿ ತುಳು ಭಾಷೆ ಮತ್ತು ತುಳುವರ ಕುರಿತಾಗಿ ಸದನದ ಗಮನ ಸೆಳೆಯುವ ಪ್ರಯತ್ನವನ್ನು ಮಾಡಿದ್ದಾರೆ.

ಕರ್ನಾಟಕ ರಾಜ್ಯದ ಎರಡು ಕರಾವಳಿ ಜಿಲ್ಲೆಗಳಾಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಮಾತ್ರವಲ್ಲದೇ ಕೇರಳ ರಾಜ್ಯಕ್ಕೆ ಸೇರಿರುವ ಕಾಸರಗೋಡು ಜಿಲ್ಲೆಯ ಬಹಭಾಗಗಳಲ್ಲಿ ಜನರು ತುಳು ಭಾಷೆಯನ್ನು ಮಾತನಾಡುತ್ತಿದ್ದಾರೆ.

2011ರ ಜನಗಣತಿಯ ಪ್ರಕಾರ 18,46,427 ಜನರು ತುಳು ಭಾಷೆಯನ್ನು ಮಾತನಾಡುವವರಾಗಿದ್ದಾರೆ. ಮತ್ತು ಈಗಾಗಲೇ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿರುವ ಮಣಿಪುರಿ ಮತ್ತು ಸಂಸ್ಕೃತ ಭಾಷೆಗಳಿಗೆ ಹೋಲಿಸಿದರೆ ತುಳು ಭಾಷಿಕರ ಸಂಖ್ಯೆ ಅಧಿಕವಾಗಿದೆ ಎಂದು ನಿಖರ ಅಂಕಿ ಅಂಶ ಸಹಿತ ರಾಜ್ ಮೋಹನ್ ಅವರು ಸದನದಲ್ಲಿ ಸರಕಾರದ ಗಮನ ಸೆಳೆಯುವ ಪ್ರಯತ್ನವನ್ನು ಮಾಡಿದ್ದಾರೆ.

Advertisement

ತುಳು ಭಾಷೆ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಂಡರೆ ಏನಾಗುತ್ತದೆ?

– ಸಾಹಿತ್ಯ ಅಕಾಡೆಮಿಯಿಂದ ಅಂಗೀಕಾರ ಲಭಿಸುತ್ತದೆ.

– ತುಳು ಸಾಹಿತ್ಯ ಕೃತಿಗಳನ್ನು ಇತರೇ ಭಾಷೆಗಳಿಗೆ ಅನುವಾದ ಮಾಡಲು ಸೂಕ್ತ ಅನುದಾನ ಲಭ್ಯವಾಗಲಿದೆ.

– ಸಂಸದರಿಗೆ ಮತ್ತು ಶಾಸಕರಿಗೆ ಸಂಸತ್ತಿನಲ್ಲಿ ಹಾಗೂ ವಿಧಾನ ಸಭೆಯಲ್ಲಿ ತುಳು ಭಾಷೆಯಲ್ಲೇ ಪ್ರಶ್ನೆಗಳನ್ನು ಕೇಳಲು ಅವಕಾಶ ಲಭಿಸುತ್ತದೆ.

– ನಾಗರಿಕ ಸೇವಾ ಪರೀಕ್ಷೆಗಳನ್ನು ಮತ್ತು ಅಖಿಲ ಭಾರತ ಮಟ್ಟದ ಪರೀಕ್ಷೆಗಳನ್ನು ತುಳುವಿನಲ್ಲೇ ಬರೆಯಲು ಸಾಧ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next