Advertisement
ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಗೋಡೆಗಳಲ್ಲಿ ಕನ್ನಡ ವಿರೋಧಿ ಬರಹಗಳನ್ನು ಬರೆದು ಕನ್ನಡಿಗರನ್ನು, ವಿದ್ಯಾರ್ಥಿಗಳನ್ನು, ಸಾಹಿತಿಗಳನ್ನು ಅವಮಾನಿಸಿದ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಕಾಸರಗೋಡಿನ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಸೇನೆ, ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಕಾಸರಗೋಡು, ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸ್ನೇಹರಂಗ ಸಂಯುಕ್ತವಾಗಿ ಜಿಲ್ಲಾಧಿಕಾರಿ ಕಚೇರಿಗೆ ನಡೆಸಿದ ಜಾಥಾವನ್ನುದ್ದೇಶಿಸಿ ಅವರು ಮಾತನಾಡಿದರು.ಈಗಾಗಲೇ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡ ವಿರೋಧಿ ಚಟುವಟಿಕೆಗಳಲ್ಲಿ ನಿರತರಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಕಾನೂನು ಕ್ರಮ ತೆಗೆದುಕೊಳ್ಳದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಅವರು ಹೇಳಿದರು.
Related Articles
Advertisement
ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಹೋರಾಟಗಾರ, ನ್ಯಾಯವಾದಿ ಅಡೂರು ಉಮೇಶ್ ನಾೖಕ್ ಅವರು ಮಾತನಾಡಿ ಅನ್ಯಾಯವಾಗಿ ಕೇರಳಕ್ಕೆ ಸೇರಿಹೋದ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಲು ಮಹಾಜನ ವರದಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು. ಕರ್ನಾಟಕ ನವ ನಿರ್ಮಾಣ ಸೇನೆಯ ಕೇರಳ ರಾಜ್ಯ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದರು. ಸ್ನೇಹರಂಗದ ಅಧ್ಯಕ್ಷ ಬಾಲಕೃಷ್ಣ ಅವರು ಮಾತನಾಡಿದರು. ಗುರುಪ್ರಸಾದ ಕೋಟೆಕಣಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಅಮೈ ಅವರು ಸ್ವಾಗತಿಸಿದರು.
ವಿದ್ಯಾನಗರದ ಕಾಸರಗೋಡು ಸರಕಾರಿ ಕಾಲೇಜು ಪರಿಸರದಿಂದ ಆರಂಭಗೊಂಡ ಜಿಲ್ಲಾಧಿಕಾರಿ ಕಚೇರಿ ಜಾಥಾವನ್ನು ಹಿರಿಯ ಕನ್ನಡ ಹೋರಾಟಗಾರ ನ್ಯಾಯವಾದಿ ಅಡೂರು ಉಮೇಶ್ ನಾೖಕ್ ಅವರು ಕನ್ನಡ ಧ್ವಜವನ್ನು ಕರ್ನಾಟಕ ನವನಿರ್ಮಾಣ ಸೇನೆಯ ಕರ್ನಾಟಕ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಅವರಿಗೆ ಹಸ್ತಾಂತರಿಸಿ ಉದ್ಘಾಟಿಸಿದರು. ವಿದ್ಯಾರ್ಥಿಗಳು ಸಹಿತ ನೂರಾರು ಮಂದಿ ಭಾಗವಹಿಸಿದ ಜಾಥಾವನ್ನು ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ಪೊಲೀಸರು ತಡೆದರು.
ಮೆರವಣಿಗೆಗೆ ನ್ಯಾಯವಾದಿ ಅಡೂರು ಉಮೇಶ್ ನಾೖಕ್, ಕಾಸರಗೋಡು ನಗರಸಭಾ ಸದಸ್ಯರಾದ ಸವಿತಾ ಟೀಚರ್, ಶಂಕರ್, ಶಿವರಾಮ ಕಾಸರಗೋಡು, ಗುರುಪ್ರಸಾದ್ ಕೋಟೆಕಣಿ, ಸತ್ಯನಾರಾಯಣ ಅಮೈ, ಶ್ರೀಕಾಂತ್ ಕಾಸರಗೋಡು, ದಯಾನಂದ ಬೆಳ್ಳೂರಡ್ಕ, ಯೋಗೀಶ್ ಕೋಟೆಕಣಿ ಮೊದಲಾದವರು ನೇತೃತ್ವ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕನ್ನಡ ಪರ ಘೋಷಣೆಗಳನ್ನು ಕೂಗುತ್ತಾ ಕೇರಳ ಸರಕಾರಕ್ಕೆ ಧಿಕ್ಕಾರ ಹಾಕುತ್ತಾ ಕನ್ನಡಿಗರ ಹಕ್ಕು ಸವಲತ್ತುಗಳನ್ನು ಕಾಪಾಡುವಂತೆ ಸರಕಾರವನ್ನು ಒತ್ತಾಯಿಸಲಾಯಿತು. ಸಭೆಯ ಬಳಿಕ ಭೀಮಾಶಂಕರ ಪಾಟೀಲ ಅವರ ನೇತೃತ್ವದಲ್ಲಿ ಕನ್ನಡಿಗರ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು. ಕಾಸರಗೋಡಿನ ಕನ್ನಡಿಗರು ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಯಿತು. ಸರಕಾರಿ ಕಾಲೇಜಿನಲ್ಲಿ ಕನ್ನಡ ವಿದ್ಯಾರ್ಥಿಗಳಿಗೆಸಗಿದ ಅವಮಾನದ ಹಿಂದಿನ ಶಕ್ತಿಯನ್ನು ಪತ್ತೆಹಚ್ಚಿ ಕ್ರಮ ತೆಗೆದುಕೊಳ್ಳುವಂತೆ ವಿನಂತಿಸಲಾಯಿತು. ಕನ್ನಡಿಗರ ಅಹವಾಲು ಆಲಿಸಿದ ಜಿಲ್ಲಾಧಿಕಾರಿಗಳು ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.