Advertisement

ಕಾಸರಗೋಡು ಕ್ರೈಂ ಸುದ್ದಿ: ಬಾರಡ್ಕದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಕಾರು, ರಿವಾಲ್ವರ್‌ ಪತ್ತೆ

10:39 PM Oct 01, 2020 | mahesh |

ಬದಿಯಡ್ಕ: ಇಲ್ಲಿನ ಬಾರಡ್ಕದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಕಾರು ಮತ್ತು ರಿವಾಲ್ವರ್‌ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ಸೆ. 30ರಂದು ರಾತ್ರಿ 11.30ಕ್ಕೆ ಬಾರಡ್ಕದಲ್ಲಿ ಕಾರೊಂದು ಉಪೇಕ್ಷಿತ ಸ್ಥಿತಿಯಲ್ಲಿ ಕಂಡುಬಂದಿದ್ದು, ಸ್ಥಳೀಯರು ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರಿನ ಮುಂಭಾಗ ರಸ್ತೆಯಲ್ಲಿ ಒಂದು ರಿವಾಲ್ವರ್‌ನ್ನು ಪತ್ತೆಹಚ್ಚಿದರು. ಕಾರಿನ ಗಾಜು ಪುಡಿಯಾದ ಸ್ಥಿತಿಯಲ್ಲಿತ್ತು. ಕಾರಿನ ನಂಬ್ರವನ್ನು ಪರಿಶೀಲಿಸಿದಾಗ ಕಾಸರಗೋಡು ಬಳಿಯ ನಿವಾಸಿಯೊಬ್ಬರದ್ದೆಂದು ತಿಳಿದು ಬಂದಿದ್ದು, ಆದರೆ ಈ ಬಗ್ಗೆ ಪೊಲೀಸರಿಗೆ ಸಂಶಯವುಂಟಾಗಿದೆ. ಕಾರಿಗೆ ನಕಲಿ ನಂಬ್ರ ಅಳವಡಿಸಿರುವ ಸಾಧ್ಯತೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಎರಡು ತಂಡಗಳ ಮಧ್ಯೆ ಘರ್ಷಣೆ ನಡೆದಿರಬೇಕೆಂದೂ ಈ ಬಗ್ಗೆ ಸ್ಥಳೀಯರಿಗೆ ತಿಳಿದ ಹಿನ್ನೆಲೆಯಲ್ಲಿ ಕಾರು, ರಿವಾಲ್ವರ್‌ ಬಿಟ್ಟು ಪರಾರಿಯಾಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಉಪೇಕ್ಷಿತ ಸ್ಥಿತಿಯಲ್ಲಿ ಲಭಿಸಿದ ರಿವಾಲ್ವರ್‌ನಿಂದ ಗುಂಡು ಹಾರಿಸಿರಬಹುದೇ, ಯಾರಿಗಾದರೂ ಗಾಯವಾಗಿರಬಹುದೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯುವಕನಿಗೆ ಹಲ್ಲೆ: ಸ್ಕೂಟರ್‌ ಅಪಹರಣ
ಕಾಸರಗೋಡು: ಹುರಿಹಗ್ಗ ಕಾರ್ಖಾನೆ ಮಾಲಕ ತಳಂಗರೆ ನಿವಾಸಿ ಮೊಹಮ್ಮದ್‌ ಅಸ್ಲಾಂ ತೊಟ್ಟಿಯಿಲ್‌(30) ಅವರಿಗೆ
ಕಾರಿನಲ್ಲಿ ಬಂದ ತಂಡವೊಂದು ಹಲ್ಲೆ ಮಾಡಿ ಸ್ಕೂಟರನ್ನು ಅಪಹರಿಸಿದೆ. ಅ. 1ರಂದು ಬೆಳಗ್ಗೆ ಮಾನ್ಯದಲ್ಲಿರುವ ಹುರಿಹಗ್ಗ ಕಾರ್ಖಾನೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಅಣಂಗೂರಿನಲ್ಲಿ ಹಲ್ಲೆ ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಯುವಕನಿಗೆ ಹಲ್ಲೆ : ಕೇಸು
ಕುಂಬಳೆ: ಕುಬಣೂರು ನಿವಾಸಿ ರಮೇಶ್‌ ಅವರ ಪುತ್ರ ರಾಕೇಶ್‌ (21) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕುಬಣೂರು ನಿವಾಸಿ ನುಮಾನ್‌ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement

ಹಲ್ಲೆ ಯತ್ನ: ಇಬ್ಬರ ಬಂಧನ
ಕಾಸರಗೋಡು: ಹಿಂದೂ ಐಕ್ಯ ವೇದಿಕೆ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತೃಕ್ಕರಿಪುರದ ಒಳವರ ಟಿ.ವಿ. ಶಿಬಿನ್‌ ಅವರಿಗೆ ಹಲ್ಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಯ್ಯೂರು ನಿವಾಸಿ ಅಖೀಲ್‌ (38), ಪಿಲಿಕ್ಕೋಡು ಮಾಂಕಡವತ್‌ ಕೊವ್ವಲ್‌ ನಿವಾಸಿ ವಿನೋದ್‌ (37) ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಬೈಕನ್ನು ವಶಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next