Advertisement

ಕಾಸರಗೋಡು: ಹೊಸ ಪ್ರಕರಣವಿಲ್ಲ

09:28 AM Apr 23, 2020 | mahesh |

ಕಾಸರಗೋಡು: ಕೇರಳದಲ್ಲಿ ಬುಧವಾರ 11 ಮಂದಿಯಲ್ಲಿ ಕೋವಿಡ್ ಸೋಂಕು ದೃಢವಾಗಿದೆ. ಆದರೆ ಕಾಸರಗೋಡು ಜಿಲ್ಲೆಯಲ್ಲಿ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ. ಇದೇ ವೇಳೆ ಪಾಲ್ಗಟ್‌ನ ಒಬ್ಬರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಬುಧವಾರ ದೃಢಗೊಂಡಿರುವ 11 ಮಂದಿಯ ಪೈಕಿ ಕಣ್ಣೂರು ಜಿಲ್ಲೆಯಲ್ಲಿ 7 ಮಂದಿ, ಕೋಯಿಕ್ಕೋಡ್‌-2, ಮಲಪ್ಪುರಂ ಮತ್ತು ಕೋಟ್ಟಯಂ ಜಿಲ್ಲೆಯಲ್ಲಿ ತಲಾ ಒಬ್ಬರನ್ನು ಕೋವಿಡ್ ವೈರಸ್‌ ಸೋಂಕು ಬಾಧಿಸಿದೆ. ಕೊರೊನಾ ಬಾಧಿತರಲ್ಲಿ ಐವರು ವಿದೇಶದಿಂದ ಬಂದವರು. ಮೂವರಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. ಕೋಯಿಕ್ಕೋಡ್‌ನ‌ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ದೃಢವಾಗಿದೆ. ಮೆಡಿಕಲ್‌ ಕಾಲೇಜಿನ ಇಬ್ಬರು ಹೌಸ್‌ ಸರ್ಜನ್‌ಗಳು ಕೇರಳದ ಹೊರಗಿನಿಂದ ರೈಲಿನಲ್ಲಿ ಬಂದವರು.

Advertisement

95 ಮಂದಿ ದಾಖಲು
ಕೇರಳದಲ್ಲಿ ಈ ವರೆಗೆ 437 ಮಂದಿಗೆ ಕೋವಿಡ್ ಸೋಂಕು ದೃಢೀಕರಿಸಲಾಗಿದೆ. ಇದೀಗ ವಿವಿಧ ಆಸ್ಪತ್ರೆಗಳಲ್ಲಿ 127 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 29,150 ಮಂದಿ ನಿಗಾದಲ್ಲಿದ್ದಾರೆ. ಬುಧವಾರ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 95 ಮಂದಿ ದಾಖಲಾಗಿದ್ದಾರೆ.

4 ಗ್ರಾ.ಪಂ.ಗಳಿಗೆ ವಿನಾಯಿತಿ
ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್‌ ಹಾಟ್‌ಸ್ಪಾಟ್‌ ಯಾದಿಯಿಂದ ನಾಲ್ಕು ಪಂಚಾಯತ್‌ಗಳನ್ನು ಕೈಬಿಡಲಾಗಿದೆ. ರೋಗ ಬಾಧಿತರಿಲ್ಲದ ಮಂಜೇಶ್ವರ, ಕೋಡೋಂ-ಬೇಳೂರು ಪಂಚಾಯತ್‌ಗಳೂ ರೋಗ ಬಾಧಿತರಿದ್ದ ಪಳ್ಳಿಕೆರೆ ಮತ್ತು ಕುಂಬಳೆ ಗ್ರಾ.ಪಂ.ಗಳನ್ನು ಈ ಯಾದಿಯಿಂದ ಕೈಬಿಡಲಾಗಿದೆ. ಇದೇ ವೇಳೆ ಮುಳಿಯಾರು ಪಂಚಾಯತನ್ನು ಹೊಸದಾಗಿ ಹಾಟ್‌ಸ್ಪಾಟ್‌ ಯಾದಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಹಾಟ್‌ಸ್ಪಾಟ್‌ಗಳು 11ಕ್ಕಿಳಿದಿವೆ.

148 ಪ್ರಕರಣ ದಾಖಲು
ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 148 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 88 ಮಂದಿಯನ್ನು ಬಂಧಿಸಲಾಗಿದ್ದು, 29 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 1,446 ಕೇಸುಗಳನ್ನು ದಾಖಲಿಸಲಾಗಿದೆ. 1,864 ಮಂದಿಯನ್ನು ಬಂಧಿಸಿ, 628 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಾಹನ ಶುದ್ಧೀಕರಣ ಕೇಂದ್ರ
ಕರ್ನಾಟಕದಿಂದ ಕೇರಳಕ್ಕೆ ಪ್ರವೇಶಿಸುವ ದ್ವಾರವಾಗಿರುವ ಮಂಜೇಶ್ವರದಲ್ಲಿ ವಾಹನಗಳನ್ನು ರೋಗಾಣು ಮುಕ್ತವಾಗಿಸುವ ಕೇಂದ್ರ (ವೆಹಿಕಲ್‌ ಡಿಸಿನ್‌ಫೆಕ್ಷನ್‌ ಟನಲ್‌) ಎ. 23ರಂದು ಆರಂಭಗೊಳ್ಳಲಿದೆ.

Advertisement

ಪೋಷಣ್‌ ವಾಣಿ ಆರಂಭ
ಮಹಿಳಾ ಶಿಶು ಅಭಿವೃದ್ಧಿ ಇಲಾಖೆ ಮನೆಯಲ್ಲಿರುವ ಶಿಶುಗಳಿಗೆ, ಹಾಲುಣಿಸುವ ತಾಯಂದಿರಿಗೆ, ಗರ್ಭಿಣಿಯರಿಗೆ, ಯುವತಿಯರಿಗಾಗಿ ಪೋಷಣ್‌ ವಾಣಿ ವಾಟ್ಸ್‌ಆ್ಯಪ್‌ ವಾಹಿನಿ ಪ್ರಸಾರ ಆರಂಭಿಸಿದೆ. ಮಕ್ಕಳಿಗೆ ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳಲ್ಲಿ ಈ ಪ್ರಸಾರ ಇರುವುದು.

ಜಿಲ್ಲೆಗೆ 3 ವೆಂಟಿಲೇಟರ್‌
ಜಿಲ್ಲೆಯ ತುರ್ತು ಪರಿಸ್ಥಿತಿ ಪರಿಶೀಲಿಸಿ ತಲಾ 7 ಲಕ್ಷ ರೂ. ಮೌಲ್ಯದ 3 ವೆಂಟಿಲೇಟರ್‌ಗಳು ಲಭ್ಯವಾಗಿವೆ. ಕಾಸರಗೋಡು ಜನರಲ್‌ ಆಸ್ಪತ್ರೆ, ಕಾಂಞಂಗಾಡ್‌ ಜಿಲ್ಲಾಸ್ಪತ್ರೆ, ಪನತ್ತಡಿ ತಾಲೂಕು ಆಸ್ಪತ್ರೆಗೆ ತಲಾ ಒಂದು ನೀಡಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ. ರಾಮದಾಸ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next