Advertisement

ಕಾಸರಗೋಡು –ಕಯ್ಯಾರ ಕಿಂಞಣ್ಣ ರೈ ವಾಚನಾಲಯಕ್ಕೆ ಬೀಗ..!

07:53 PM Apr 04, 2019 | sudhir |

ಬದಿಯಡ್ಕ : ಕವಿ, ಕನ್ನಡ ಹೋರಾಟಗಾರ, ನಾಡೋಜ ಕಯ್ಯಾರ ಕಿಂಞಣ್ಣ ರೈಯವರ ಹೆಸರಲ್ಲಿ ಅವರು ವಾಸವಾಗಿದ್ದ ಊರಲ್ಲಿ ಸ್ಥಾಪಿತವಾಗಿದ್ದ ವಾಚನಾಲಯ ಇಂದು ಅನಾಥವಾಗಿದೆ. ಉಪಯೋಗಶೂನ್ಯವಾಗಿ ಮೂಲೆ ಗುಂಪಾಗಿದೆ. ಪ್ರಸಿದ್ಧ ಕವಿ, ಶ್ರೇಷ್ಠ ಅಧ್ಯಾಪಕನ ಹೆಸರಲ್ಲಿ ಸ್ಥಾಪಿತವಾದ ವಾಚನಾಲಯವು ಈಗ ಪೊದೆಯಿಂದ ಆವೃತವಾಗಿದ್ದು ಅಸ್ತಿತ್ವವೇ ಮರೆಯಾಗಿರುವುದು ಕಂಡುಬರುತ್ತದೆ. ಸಾರ್ವಜನಿಕರಿಗೆ ಸಹಾಯಕವಾಗುವಂತೆ ಆರಂಭಿಸಿದ ವಾಚನಾಲಯವು ಓದುಗರಿಗೆ ಪ್ರಯೋಜನವಿಲ್ಲದಂತಾಗಿರುವುದು ಕಯ್ನಾರರಿಗೆ ಮಾಡಿದ ಅವಮಾನ.

Advertisement

ಈ ಹಿಂದಿನ ಪಂಚಾಯತು ಆಡಳಿತದ ಅವಧಿಯಲ್ಲಿ ಬದಿಯಡ್ಕ ಕೃಷಿ ಭವನದ ಬಳಿ ಪಂಚಾಯತು ವತಿಯಿಂದ ವ್ಯವಸ್ಥಿತವಾದ ವಾಚನಾಲಯವನ್ನು ಸ್ಥಾಪಿಸಲಾಗಿತ್ತು. ಹತ್ತು ಹಲವು ಜನಪ್ರತಿನಿಧಿಗಳ, ಸಾಹಿತಿಗಳ, ಕನ್ನಡ ಹೋರಾಟಗಾರರ ಉಪಸ್ಥಿತಿಯಲ್ಲಿ ಈ ವಾಚನಾಲಯವು ಅಂದಿನ ಶಿಕ್ಷಣ ಸಚಿವ ಅಬ್ದು ರಬ್‌ ಅವರಿಂದ ಉದ್ಘಾಟನೆಗೊಂಡಾಗ ಕಯ್ನಾರರ ಮೇಲೆ ಇದ್ದ ಪ್ರೀತಿ ಗೌರವ ಈಗ ಮಾಯವಾಗಿರುವುದು ವಿಪರ್ಯಾಸ. ಅಂದು ವಾಚನಾಲಯಕ್ಕೆ ಓರ್ವ ನೌಕರನನ್ನು ಕೂಡಾ ನೇಮಕ ಮಾಡಲಾಗಿತ್ತು. ಆದರೆ ಆರೇ ತಿಂಗಳಲ್ಲಿ ಈ ನೌಕರನನ್ನು ಹಿಂದಕ್ಕೆ ಕರೆಯಲಾಗಿತ್ತು. ಆ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡಲಾಗಿದೆ.

ಇದೀಗ ಕಾಡು ಪೊದೆಯಿಂದ ಆವೃತವಾಗಿರುವ ವಾಚನಾಲಯವು ಶಾಶ್ವತವಾಗಿ ಮುಚ್ಚಲ್ಪಟ್ಟಿದ್ದು ವಾಚಕರಿಗೆ ಇದು ಇದ್ದೂ ಇಲ್ಲದಂತಾಗಿದೆ.
ವಿಶ್ವ ತುಳು ಸಮ್ಮೇಳನದಂತಹ ಮಹತ್ವದ ಚಟುವಟಿಕೆಗಳಿಗೆ ವೇದಿಕೆಯಾಗಿರುವ, ಕನ್ನಡಿಗರೇ ಹೆಚ್ಚಾಗಿ ವಾಸವಾಗಿರುವ ಕನ್ನಡ ಪ್ರದೇಶದಲ್ಲಿ ಕನ್ನಡದ ಕವಿಗೆ ಮಾಡಿದ ಅವಮಾನ ಇಡೀ ಕನ್ನಡಿಗರಿಗೆ ಆದ ಅವಮಾನವೇ ಸರಿ. ಕಯ್ನಾರರ ಊರಲ್ಲಿ ಅವರದೇ ಹೆಸರಲ್ಲಿ ನಿರ್ಮಿಸಿದ ವಾಚನಾಲಯದ ಪಕ್ಕದಿಂದ ಹಾದುಹೋಗುವ ಕಯ್ಯಾರ ಕಿಂಞಣ್ಣ ರೈ ರಸ್ತೆಯ ಅವಸ್ಥೆಯೂ ಇದಕಿಂತ ಹೊರತಲ್ಲ. ನಡೆದುಹೋಗುವುದೇ ಕಷ್ಟವಾಗಿರುವ ರಸ್ತೆಯಲ್ಲಿ ಸಂಚಾರವೂ ದುಸ್ತರವೆನಿಸಿದೆ. ಇದಕ್ಕೆ ಯಾರು ಹೊಣೆ? ಕಾಸರಗೋಡಿನ ಕನ್ನಡ ಸಂಘಟನೆಗಳೂ , ಹೋರಾಟಗಾರರೂ ಯಾಕೆ ಮೌನವಾಗಿದ್ದಾರೆ. ಮಾತ್ರವಲ್ಲದೆ ಕನ್ನಡ ಪ್ರದೇಶದ ಕನ್ನಡಿಗರ ಪಂಚಾಯತು ಕೂಡಾ ಇತ್ತ ಗಮನ ಹರಿಸದಿರಲು ಕಾರಣವೇನು?

ಅಂದು ಕನ್ನಡಾಭಿಮಾನಿಗಳು ಹಲವಾರು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದರು. ಮಾತ್ರವಲ್ಲದೆ ಓದುಗರು ದಿನನಿತ್ಯ ಆಗಮಿಸಿ ದಿನಪತ್ರಿಕೆ, ವಾರಪತ್ರಿಕೆಗಳೊಂದಿಗೆ ಲಭ್ಯವಿರುವ ಪುಸ್ತಕಗಳನ್ನೂ ಓದಿ ತಮ್ಮ ಅರಿವಿನ ದಾಹವನ್ನು ನೀಗಿಸುತ್ತಿದ್ದರು. ಆದರೆ ಕ್ರಮೇಣ ಸಮಯಕ್ಕೆ ಸರಿಯಾಗಿ ತೆರೆಯದ ವಾಚನಾಲಯ ಸಾರ್ವಜನಿಕರ ಪಾಲಿಗೆ ಮರೀಚಿಕೆಯಾಯಿತು.

Advertisement

ಇಂದು ಕಯ್ಯಾರರ ಸ್ಮರಣೆಯ ತಾಣವಾದ ಈ ವಾಚನಾಲಯದ ತುಕ್ಕು ಹಿಡಿದ ಬೀಗ ಜನರನ್ನು ನೋಡಿ ಅಣಕಿಸುವಂತೆ ಭಾಸವಾಗುತ್ತದೆ. ಮಾತ್ರವಲ್ಲದೆ ಒಡೆದ ಕಿಟಿಕಿಯ ಗಾಜಿನ ಮೂಲಕ ಒಳಗೆಲ್ಲ ಧೂಳು ಆವರಿಸಿದೆ. ಪ್ರತಿದಿನ ದಿನಪತ್ರಿಕೆಯನ್ನು ತಂದು ಹಾಕಲಾಗುತ್ತದೆಯಾದರೂ ಅದರ ಕಟ್ಟುಬಿಚ್ಚುವವರೂ ಕೂಡ ಅಲ್ಲಿಲ್ಲ. ಹಾಗಾಗಿ ಪತ್ರಿಕೆಗಳ ಕಟ್ಟುಗಳ ರಾಶಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬರುತ್ತದೆ.

ಕಯ್ಯಾರರ ಹೆಸರಿಗೆ ಆಗುವ ಅನ್ಯಾಯದ ಕುರಿತು ಯಾರೂ ದನಿ ಎತ್ತುವುದಿಲ್ಲ. ಭಾಷಾ ಸಂರಕ್ಷಣೆ, ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಎದುರು ಹೋರಾಡುವ (ಕಾಸರಗೋಡಿನ )ಕನ್ನಡಿಗರು ಕನ್ನಡದ ನಾಡೋಜ ಕವಿಗೆ ಆಗುತ್ತಿರುವ ಅವಮಾನವನ್ನು ಕಾಣುವುದಿಲ್ಲ. ನಮ್ಮ ಕಣ್ಣಿಗೆ ಅಂಟಿದ ಪರದೆಯ ಸರಿಸಿ ಒಳಗಣ್ಣು ತೆರೆದು ನೋಡದಿದ್ದರೆ ಕಾಲ ಮಿಂಚಿಹೋದಮೇಲೆ ದುಃಖೀಸಿ ಫಲವಿಲ್ಲ. ಕಯ್ಯಾರರೆ ಹೇಳಿದಂತೆ
ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ… ಇನ್ನಾದರೂ ಕನ್ನಡದ ಕಣ್ಮಣಿಗಳ ಹೆಸರ ಉಳಿಸ ಬನ್ನಿ…
ಈ ವಾಚನಾಲಯವನ್ನು ದಿನಪೂರ್ತಿ ತೆರೆದಿಟ್ಟು ಜನರಿಗೆ ಫಲಪ್ರದವಾಗುವಂತೆ ಮಾಡಬೇಕು, ಓರ್ವ ಪೂರ್ಣಕಾಲಿಕ ನೌಕರನನ್ನು ನೇಮಕ ಮಾಡಬೇಕೆಂಬ ಸಾರ್ವಜನಿಕರ ಆಗ್ರಹ ಇನ್ನಾದರೂ ಪೂರ್ಣಗೊಳ್ಳುವುದೇ ? ಕಾದು ನೋಡೋಣ.

  • ಅಖೀಲೇಶ್‌ ನಗುಮುಗಂ
Advertisement

Udayavani is now on Telegram. Click here to join our channel and stay updated with the latest news.

Next