ಕಾಸರಗೋಡು: ವಿಷ ಸೇವಿಸಿ ಮಹಿಳೆ ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಘಟನೆಗೆ ಸಂಬಂಧಿಸಿ ಆಕೆಯ ಪತಿಯ ಸಹೋದರಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (1) ನಾಲ್ಕು ವರ್ಷ ಕಠಿನ ಸಜೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದಲ್ಲಿ ಒಂದು ವರ್ಷ ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದೆ.
ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪುಲ್ಲೂರು ಪೇರಳದ ಸುಧಾ 2017ರಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೈದಿದ್ದರು. ಅದಕ್ಕೆ ಸಂಬಂಧಿಸಿ ಆಕೆಯ ಪತಿಯ ಸಹೋದರಿ ಇ.ವಿ. ನಾರಾಯಣಿ (59) ವಿರುದ್ಧ ಅಂಬಲತ್ತರ ಪೊಲೀಸರು ಆತ್ಮಹತ್ಯೆ ಪ್ರೇರಣೆ ನೀಡಿದ ಆರೋಪದಂತೆ ಪ್ರಕರಣ ದಾಖಲಿಸಿದ್ದರು. ಇದೇ ಪ್ರಕರಣದಲ್ಲಿ ಪತಿಯ ವಿರುದ್ಧವೂ ಪೊಲೀಸರು ಕೇಸು ದಾಖಲಿಸಿದ್ದರು. ಆದರೆ ಆರೋಪ ಸಾಬೀತುಪಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿ ತೀರ್ಪು ನೀಡಿದೆ.