Advertisement

ಪ್ರಗತಿಪರ ಚಿಂತಕರಿಂದ ರಾಜ್ಯದ ಸ್ವರೂಪ ಬದಲು: ಸಚಿವ ಬಾಲನ್‌

12:04 PM Dec 24, 2018 | |

ಕಾಸರಗೋಡು:  ಪ್ರಗತಿಪರ ಚಿಂತಕರು ನಾಯಕತ್ವ ವಹಿಸಿಕೊಂಡಾಗ ರಾಜ್ಯದ ಸ್ವರೂಪ ಬದಲಾಯಿತು ಎಂದು ರಾಜ್ಯ ಪರಿಶಿಷ್ಟ ಜಾತಿ – ಪಂಗಡ ಅಭಿವೃದ್ಧಿ ಖಾತೆ ಸಚಿವ ಎ.ಕೆ.ಬಾಲನ್‌ ಅಭಿಪ್ರಾಯಪಟ್ಟರು. ಪರಿಶಿಷ್ಟ ಜಾತಿ – ಪಂಗಡ ಅಭಿವೃದ್ಧಿ ಇಲಾಖೆ ಮತ್ತು ಕಿತಾರ್ಡ್ಸ್‌ ಇಲಾಖೆಗಳ ಜಂಟಿ ವತಿಯಿಂದ ಕಾಲಿಕಡವು ಪಿಲಿಕೋಡ್‌ ಗ್ರಾಮ ಪಂಚಾಯತ್‌ ಮೈದಾನದಲ್ಲಿ ಆರಂಭಗೊಂಡ 9 ದಿನಗಳ ಸಾಂಸ್ಕೃತಿಕ ಉತ್ಸವ ‘ಗದ್ದಿಕ – 2018’ ಉದ್ಘಾಟಿಸಿ ಅವರು ಮಾತನಾಡಿದರು.

Advertisement

1957ರ ಇ.ಎಂ.ಎಸ್‌. ನೇತೃತ್ವದ ರಾಜ್ಯ ಸರಕಾರ ಸಮಾಜದಲ್ಲಿ ಅಂಟಿಕೊಂಡಿದ್ದ ಪಿಡುಗುಗಳನ್ನು ತೊಲಗಿಸುವಲ್ಲಿ ದೊಡ್ಡ ಕೊಡುಗೆ ನೀಡಿತು. ಇದನ್ನು ಸಹಿಸದೇ ಇರುವ ಕೆಲವರು ಹುನ್ನಾರ ನಡೆಸುತ್ತಲೇ ಬಂದರು. ಈ ಬಾರಿಯ ಸರಕಾರದ ಯತ್ನಗಳಿಂದ ಇಂತಹ ಹುನ್ನಾರಗಳು ನಡೆಯದೇ ಹೋದುವು ಎಂದರು.

ದಮನಿಸುವ ಯತ್ನ ನಡೆದಿತ್ತು
ಚಾರಿತ್ರಿಕ ಕಾರಣಗಳು ಪರಿಶಿಷ್ಟ ಜಾತಿ-ಪಂಗಡದ ಮಂದಿಯನ್ನು ಸಮಾಜದ ಪ್ರಧಾನ ವಾಹಿನಿಯಿಂದ ದೂರ ಇರಿಸಿತು. ಪ್ರಪಂಚದಲ್ಲಿ ಎಲ್ಲೂ ಇಲ್ಲದ ಜಾತಿ ವ್ಯವಸ್ಥೆ ಇದಕ್ಕೆ ಪ್ರಧಾನ ಕಾರಣವಾಯಿತು. ಸ್ವಂತ ಜಾಗ ಇಲ್ಲದ ಕಾರಣ ಈ ಜನಾಂಗ ಸಮಾಜದಲ್ಲಿ ಮಾನ್ಯತೆ ಕಳೆದುಕೊಂಡಿತು. ಈ ಮೂಲಕ ಆದಾಯವನ್ನೂ ಕಳೆದುಕೊಳ್ಳಬೇಕಾದ ಅವಸ್ಥೆಗಳು ಸೃಷ್ಟಿಯಾದುವು. ಅವರಿಗೆ ಶಿಕ್ಷಣ, ನೌಕರಿ ಎಲ್ಲವೂ ನಿಷೇಧಿಸಲ್ಪಟ್ಟುವು. ಅಂಧವಿಶ್ವಾಸ, ಅನಾಚಾರಗಳ ಮೂಲಕ ಅವರನ್ನು ದಮನಿಸಲಾಗಿತ್ತು ಎಂದವರು ದೂರಿದರು.

ಆರೋಗ್ಯ ವಲಯದಲ್ಲಿ ಶೀಘ್ರ ಪರಿಹಾರ
ಈ ಬಾರಿಯ ಎಡರಂಗ ಸರಕಾರ ಹಿಂದುಳಿದ ಜನಾಂಗದವರ ಸಮಗ್ರ ಅಭಿವೃದ್ಧಿಗೆ ಕಟಿಬದ್ಧವಾಗಿದೆ. ಅವರು ಬೆಳೆದ ಉತ್ಪನ್ನಗಳನ್ನು ಅವರೇ ಮಾರಾಟ ಮಾಡುವಂಥಾ ವ್ಯವಸ್ಥೆಯನ್ನು ಕೃಷಿ ಇಲಾಖೆ ಒದಗಿಸಿದೆ. ಪೊಲೀಸ್‌, ಅಬಕಾರಿ ದಳಗಳಲ್ಲಿ ನೇಮಕಾತಿ ಇತ್ಯಾದಿ ಕ್ರಮಗಳಿಂದ ನಿರುದ್ಯೋಗ ಪರಿಹಾರ, ಸಾವಿರಾರು ಮಂದಿಯನ್ನು ನೌಕರಿಗಾಗಿ ವಿದೇಶಕ್ಕೆ ಕಳುಹಿಸಲಾಗಿದೆ. ಆಹಾರದ ಕೊರತೆಯಿಂದ ಉಪವಾಸ ಮರಣ ಪ್ರಕರಣಗಳು ಕಡಿಮೆಯಾಗಿವೆ. ಶಿಕ್ಷಣ ವಲಯದಲ್ಲೂ ಅವರಿಗೆ ಉನ್ನತ ವಿದ್ಯಾಭ್ಯಾಸ ಒದಗಿಸಲಾಗಿದೆ. ಆರೋಗ್ಯ ವಲಯದಲ್ಲಿ ಸಮಸ್ಯೆಗಳಿದ್ದರೂ ಶೀಘ್ರದಲ್ಲಿ ಪರಿಹಾರವಾಗಲಿವೆ ಎಂದರು.

ಮಾಜಿ ಶಾಸಕ ಕುಂಞಿರಾಮನ್‌, ಕಿತಾರ್ಡ್ಸ್‌ ನಿರ್ದೇಶಕ ಡಾ| ಪುಗಳೇಂದಿ, ಪಿಲಿಕೋಡ್‌ ಗ್ರಾಮ ಪಂಚಾಯತ್‌ ಅಧ್ಯಕ್ಷ ಟಿ.ವಿ. ಶ್ರೀಧರನ್‌ ಮಾಸ್ಟರ್‌, ಜಿಲ್ಲಾ ಪಂಚಾಯತ್‌ ಸದಸ್ಯೆ ಪಿ.ವಿ. ಜಾನಕಿ, ಕುಂಬಳೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್‌., ಪರಿಶಿಷ್ಟ ಪಂಗಡ ರಾಜ್ಯ ಮಟ್ಟದ ಸಲಹಾ ಸಮಿತಿ ಸದಸ್ಯ ಕ್ಲೋವ್‌ ಕೃಷ್ಣನ್‌, ಕೋಡೋಂ-ಬೇಳೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಸಿ. ಕುಂಞಿಕಣ್ಣನ್‌ ಉಪಸ್ಥಿತರಿದ್ದರು.

Advertisement

ಶಾಸಕ ಒ. ರಾಜಗೋಪಾಲನ್‌ ಸ್ವಾಗತಿಸಿದರು. ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ವರದಿ ವಾಚಿಸಿದರು. ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ನಿರ್ದೇಶಕ ಪಿ.ಎಂ. ಆಲಿ ಆಸ್ಕರ್‌ ಪಾಷಾ ವಂದಿಸಿದರು.

4 ಜಿಲ್ಲೆಗಳಲ್ಲಿ ಯಶಸ್ವಿ 
ಈ ಎಲ್ಲ ಶ್ರಮಗಳ ಪ್ರತೀಕವಾಗಿ ಗದ್ದಿಕ ಸಾಂಸ್ಕೃತಿಕ ಉತ್ಸವ ರಾಜ್ಯದಲ್ಲಿ ನಡೆಯುತ್ತಿದೆ. ಈಗಾಗಲೇ 4 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಈ ಸಮಾರಂಭ ನಡೆಸಿ 5ನೇ ಉತ್ಸವ ಕಾಸರಗೋಡಿನಲ್ಲಿ ನಡೆಯುತ್ತಿದೆ. ಮುಂದಿನ ಮೇಳ ತಿರುವನಂತಪುರದ ಆಟಿಂಗರದಲ್ಲಿ ನಡೆಯಲಿದೆ ಎಂದು ಸಚಿವ ಎ.ಕೆ. ಬಾಲನ್‌ ವಿವರಿಸಿದರು.

‘ಅನುಭವ ಜನ್ಯವಾಗಿಸುವ ಪ್ರಯತ್ನ ನಡೆಸಿ’
ಅಧ್ಯಕ್ಷತೆ ವಹಿಸಿದ್ದ ಕಂದಾಯ ಸಚಿವ ಇ.ಚಂದ್ರಶೇಖರನ್‌ ಮಾತನಾಡಿ ಪರಿಶಿಷ್ಟ ಜಾತಿ-ಪಂಗಡದವರ ಅಭಿವೃದ್ಧಿಗೆ ನಡೆಸುವ ಯತ್ನಗಳು ಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಗೌರವಿಸಿದಂತೆ ಎಂದು ಹೇಳಿದರು. ಇವರು ನೀಡಿದ ಬಳುವಳಿಗಳಲ್ಲಿ ಪರಂಪರಾಗತ ಚಿಕಿತ್ಸೆಗಳು ಅತ್ಯಮೂಲ್ಯವಾದುವು. ಕಾಡಿನಲ್ಲಿ ಅಲೆದು ಅವರು ತರುವ ನಾರು-ಬೇರುಗಳಿಂದ ತಯಾರಿಸಿದ ಔಷಧಗಳು ಬೇಡಿಕೆ ಹೊಂದಿದ್ದರೂ, ಮೂಲ ಕಾರಣರಿಗೆ ಸೂಕ್ತ ಬೆಲೆ ಲಭಿಸದೇ ಹೋಗಿರುವುದು ದುರಂತ. ಅವರ ಶ್ರಮವನ್ನು ನಾಡಿನ ಜನತೆಗೆ ಅನುಭವಜನ್ಯವಾಗಿಸುವ ಪ್ರಯತ್ನ ನಡೆಯಬೇಕಾಗಿದೆ. ಇದಕ್ಕೆ ಗದ್ದಿಕ ಉತ್ಸವ ಪೂರಕ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next