ಕಾಸರಗೋಡು: ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಕುಂಡಂಗುಳಿ ನೀರ್ಕಯದ ಟೂರಿಸ್ಟ್ ಬಸ್ ಚಾಲಕ ಚಂದ್ರನ್ ಅವರ ಪತ್ನಿ ನಾರಾಯಣಿ (45) ಮತ್ತು ಪುತ್ರಿ ಕುಂಡಂಗುಳಿ ಸರಕಾರಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಶ್ರೀನಂದ (12) ಸಾವಿನ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಶ್ರೀನಂದಳನ್ನು ಮೊದಲು ಹಗ್ಗದಿಂದ ಕುತ್ತಿಗೆ ಬಿಗಿಯಲಾಗಿತ್ತು. ಬಳಿಕ ಆಕೆಯ ಸಾವನ್ನು ಖಚಿತಪಡಿಸಲು ಮುಖದ ಮೇಲೆ ದಿಂಬು ಅಥವಾ ಇತರ ಯಾವುದೋ ವಸ್ತುವನ್ನು ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆಗೈಯ್ಯಲಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆಯೆಂದು ಪೊಲೀಸರು ಹೇಳಿದ್ದಾರೆ. ಶ್ರೀನಂದಳ ಮೃತದೇಹವನ್ನು ಪೊಲೀಸರು ಮಹಜರು ನಡೆಸಿದಾಗ ಆಕೆಯ ಕುತ್ತಿಗೆ ಭಾಗದಲ್ಲಿ ಹಗ್ಗ ಬಿಗಿದ ಕುರುಹು ಪತ್ತೆಯಾಗಿತ್ತು. ಅದರಿಂದಾಗಿ ತಾಯಿ ಮತ್ತು ಪುತ್ರಿಯ ಮೃತದೇಹಗಳನ್ನು ಪೊಲೀಸರು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಶ್ರೀನಂದಳ ಸಾವು ಕೊಲೆ ಎಂಬುದಾಗಿ ಪ್ರಾಥಮಿಕ ವರದಿ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಯಿ ನಾರಾಯಣಿಯೇ ಶ್ರೀನಂದಳನ್ನು ಕೊಲೆಗೈದಿದ್ದಾಳೆಂದೂ, ಬಳಿಕ ಆಕೆ ನೇಣು ಬಿಗಿದು ಆತ್ಮಹತ್ಯೆಗೈದಿರಬಹುದೆಂದು ಭಾವಿಸಲಾಗಿದೆ. ಆದರೆ ಪುತ್ರಿಯನ್ನು ಕೊಲೆಗೈದು ನಾರಾಯಣಿ ಆತ್ಮಹತ್ಯೆಗೈದಿರುವ ಹಿನ್ನೆಲೆ ಇನ್ನಷ್ಟೇ ಸ್ಪಷ್ಟಗೊಳ್ಳಬೇಕಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕಾಗಿ ನಾರಾಯಣಿಯ ಪತಿ ಚಂದ್ರನ್, ಸಂಬಂಧಿಕರು ಮತ್ತು ಇತರರ ಹೇಳಿಕೆಗಳನ್ನು ದಾಖಲಿಸುವ ಕೆಲಸದಲ್ಲೂ ಪೊಲೀಸರು ತೊಡಗಿದ್ದಾರೆ. ಚಂದ್ರನ್ ಟೂರಿಸ್ಟ್ ಬಸ್‌ನೊಂದಿಗೆ ಊಟಿಗೆ ಹೋಗಿದ್ದರು. ಆ ವೇಳೆಯಲ್ಲೇ ಪತ್ನಿ ನಾರಾಯಣಿ ಮತ್ತು ಪುತ್ರಿ ಶ್ರೀನಂದ ಸಾವನ್ನಪ್ಪಿದ್ದರು.
ಬೇಕಲ ಡಿವೈಎಸ್‌ಪಿ ಪಿ.ಕೆ.ಸುನಿಲ್ ಕುಮಾರ್, ಇನ್‌ಸ್ಪೆಕ್ಟರ್ ದಾಮೋದರನ್ ನೇತೃತ್ವದ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.