Advertisement

ಕಾಸರಗೋಡಿನ ಹತ್ತೂ ಬ್ಯಾಟುಗಾರ್ತಿಯರು ಸೊನ್ನೆಗೆ ಔಟ್

03:12 AM May 17, 2019 | Sriram |

ಮಲಪ್ಪುರಂ (ಕೇರಳ): ಕ್ರಿಕೆಟ್‌ನಲ್ಲಿ ಏನೇನೊ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಪ್ರಶಾಂತ್‌ ಧನವಾಡೆ ಎಂಬ ಮುಂಬೈ ಆಟಗಾರನೊಬ್ಬ ಸಾವಿರ ರನ್‌ ಹೊಡೆದು ವಿಶ್ವದಾಖಲೆ ನಿರ್ಮಿಸಿದ್ದು, ವೈಡ್‌ಗಳನ್ನು ಹಾಕಿ ಹಾಕಿಯೇ ಉದ್ದೇಶಪೂರ್ವಕವಾಗಿ ಸೋತು ಹೋಗಿದ್ದು, ಸಿಕ್ಸರ್‌ ಮೇಲೆ ಸಿಕ್ಸರ್‌ ಚಚ್ಚಿದ್ದು…ಇಂತಹ ಎಲ್ಲ ಘಟನೆಗಳ ಮಧ್ಯೆ, ಅತ್ಯಂತ ಅಪರೂಪದ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಯುವತಿಯರ 19 ವಯೋಮಿತಿ ಅಂತರ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಾಸರಗೋಡು ತಂಡದ ಎಲ್ಲ ಬ್ಯಾಟ್ಸ್‌ವುಮೆನ್‌ ಶೂನ್ಯಕ್ಕೆ ಔಟಾಗಿದ್ದಾರೆ.

Advertisement

ಮಾನ್ಯತೆ ಹೊಂದಿರುವ ಕ್ರಿಕೆಟ್‌ನಲ್ಲಿ ಇಂತಹ ಘಟನೆಗಳು ಅಪರೂಪಕ್ಕೊಮ್ಮೆ ಮಾತ್ರ ಕೇಳಿ ಬರುತ್ತವೆ. ಅದು ಬುಧವಾರ ನಡೆದಿದೆ. ಬಹುತೇಕ ದೇಶಾದ್ಯಂತ ಈ ಘಟನೆ ಸುದ್ದಿಯಾಗಿದೆ. ಬುಧವಾರ ಕಾಸರಗೋಡು ತಂಡದ ನಾಯಕಿ ಎಸ್‌.ಅಕ್ಷತಾ, ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಲು ನಿರ್ಧರಿಸಿದರು. ಆಗ ಅವರಿಗೆ ಹೀಗೊಂದು ಆಪತ್ತು ತಮಗೆ ಕಾದಿದೆ ಎಂಬ ಅರಿವೇ ಇರಲಿಲ್ಲ. 3ನೇ ಓವರ್‌ ಶುರುವಾದಾಗ ಎಲ್ಲವೂ ದಿಢೀರನೆ ಬದಲಾಯಿತು.

ಕಾಸರಗೋಡು ಆರಂಭಗಾರ್ತಿಯರಾದ ಕೆ.ವೀಕ್ಷಿತಾ ಮತ್ತು ಎಸ್‌.ಚೈತ್ರಾ ಮೊದಲೆರಡು ಓವರ್‌ಗಳಲ್ಲಿ ಯಾವುದೇ ರನ್‌ ಗಳಿಸದೇ ಔಟಾಗದೇ ಉಳಿದರು. 3ನೇ ಓವರ್‌ನಲ್ಲಿ ನಡೆದಿದ್ದು ದುರಂತ. ವಯನಾಡ್‌ ನಾಯಕಿ ನಿತ್ಯಾ ಲೂಧ್‌ರ್, ಒಂದೇ ಓವರ್‌ನಲ್ಲಿ 3 ವಿಕೆಟ್ ಕಿತ್ತರು. ಅಲ್ಲಿಂದ ಪಟಪಟನೆ ವಿಕೆಟ್‌ಗಳು ಉದುರಿದವು. ಕಾಸರಗೋಡು ತಂಡದ ಒಬ್ಟಾಕೆಯೂ ರನ್‌ ಗಳಿಸಲಿಲ್ಲ. ಆದರೂ ಅದೃಷ್ಟ ಚೆನ್ನಾಗಿತ್ತು. ವಯನಾಡ್‌ ಬೌಲರ್‌ಗಳು ಇತರೆ ರನ್‌ಗಳ ರೂಪದಲ್ಲಿ ನೀಡಿದ 4 ರನ್‌ಗಳು ಮರ್ಯಾದೆ ಉಳಿಸಿದವು. ವಯನಾಡ್‌ಗೆ ಕನಿಷ್ಠ 5 ರನ್‌ ಗುರಿ ನೀಡಲು ಕಾಸರಗೋಡಿಗೆ ಸಾಧ್ಯವಾಯಿತು.

ಈ ಮೊತ್ತವನ್ನು ವಯನಾಡ್‌ನ‌ ಆರಂಭಗಾರ್ತಿಯರು ಮೊದಲನೇ ಓವರ್‌ನಲ್ಲೇ ಚಚ್ಚಿ ಬಿಸಾಕಿದರು. 10 ವಿಕೆಟ್‌ಗಳಿಂದ ಗೆಲುವು ಸಾಧಿಸಿದರು. ಈ ಪಂದ್ಯ ಕ್ರಿಕೆಟ್ ಇತಿಹಾಸದ ಅತ್ಯಂತ ವಿಚಿತ್ರ ಪ್ರಕರಣಗಳಲ್ಲಿ ಒಂದಾಗಿ ದಾಖಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next