Advertisement

ಕಾಸರಗೋಡು: ಬಾಯಿಯೊಳಗಿತ್ತು 29 ಪವನ್‌ ಚಿನ್ನ

12:51 AM Nov 08, 2022 | Team Udayavani |

ಕಾಸರಗೋಡು: ಬಾಯಿಯೊಳಗೆ 29 ಪವನ್‌ ಚಿನ್ನಾಭರಣಗಳನ್ನು ಬಚ್ಚಿಟ್ಟು ಸಾಗಿಸುತ್ತಿದ್ದ ಪೆರುಂಬಳ ನಿವಾಸಿಯನ್ನು ಕರಿಪೂರ್‌ ವಿಮಾನ ನಿಲ್ದಾಣದಿಂದ ಪೊಲೀಸರು ಬಂಧಿಸಿದ್ದಾರೆ. ಪೆರುಂಬಳ ನಿವಾಸಿ ಅಬ್ದುಲ್‌ ಅಪ್ಸಲ್‌ (24)ನನ್ನು ಬಂಧಿಸಲಾಗಿದೆ. ಆತ ದುಬಾೖಯಿಂದ ಕರಿಪೂರ್‌ ವಿಮಾನ ನಿಲ್ದಾಣಕ್ಕೆ ಬಂದಾಗ ಕಾರ್ಯಾಚರಣೆ ನಡೆಸಲಾಗಿದೆ. ನಾಲಗೆ ಅಡಿ ಭಾಗದಲ್ಲಿ 233 ಗ್ರಾಂ ಚಿನ್ನವನ್ನು ಎಂಟು ತುಂಡುಗಳನ್ನಾಗಿ ಬಚ್ಚಿಟ್ಟು ಸಾಗಾಟ ನಡೆಸಿರುವುದು ಪತ್ತೆಯಾಗಿದೆ.

Advertisement

ಅಪಘಾತ ನಡೆಸಿ ಅಪಹರಣ
ಕಾಸರಗೋಡು: ಇನ್ನೋವಾ ಕಾರಿನಲ್ಲಿ ಬೈಕನ್ನು ಹಿಂಬಾಲಿಸಿ ಕೊಂಡು ಬಂದ ತಂಡ ಕಾರನ್ನು ಬೈಕಿಗೆ ಢಿಕ್ಕಿ ಹೊಡೆಸಿ ಬೈಕಿನಲ್ಲಿದ್ದ ಯುವಕನನ್ನು ಅಪಹರಿಸಿದ್ದಾರೆೆ. ನ. 7ರಂದು ಬೆಳಗ್ಗೆ 7 ಗಂಟೆಗೆ ಕಾಸರ ಗೋಡು-ಕಾಂಞಂಗಾಡ್‌ ಕೆಎಸ್‌ಟಿಪಿ ರಸ್ತೆಯ ಚಳಿಯಂಗೋಡು ಕೋಟರುವದಲ್ಲಿ ಘಟನೆ ನಡೆದಿದೆ. ಕಾಸರಗೋಡಿನಿಂದ ಮೇಲ್ಪರಂಬಕ್ಕೆ ತೆರಳುತ್ತಿದ್ದ ಬೈಕನ್ನು ಮಹಾರಾಷ್ಟ್ರ ನೋಂದಣಿಯ ಕಾರು ಹಿಂಬಾಲಿಸಿಕೊಂಡು ಬಂದು ಬೈಕ್‌ಗೆ ಢಿಕ್ಕಿ ಹೊಡೆಸಿ ಸವಾರನನ್ನು ಅಪಹರಿಸಿದೆ. ಬೈಕ್‌ ಕುಂಡಂಕುಳಿ ನಿವಾಸಿಯದ್ದೆಂದು ತಿಳಿದುಬಂದಿದೆ. ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಲ್ಲ ಠಾಣೆ ಗಳಿಗೆ ಮಾಹಿತಿ ನೀಡಲಾಗಿದೆ.

18 ಕೋಟಿ ರೂ. ದರೋಡೆ: ಬಂಧನ
ಕುಂಬಳೆ: ಕರ್ನಾಟಕದ ಯಲ್ಲಾಪುರದಲ್ಲಿ ವ್ಯಾಪಾರಿಗೆ ಹಲ್ಲೆ ಮಾಡಿ 18 ಕೋಟಿ ರೂ. ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಶಿರಿಯಕುನ್ನು ನಿವಾಸಿ ಕಬೀರ್‌ (35)ನನ್ನು ಕುಂಬಳೆಯಿಂದ ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವನಿಗಾಗಿ ಶೋಧ ನಡೆಸುತ್ತಿದ್ದಾರೆ.

ಗಾಂಜಾ ಸೇವನೆ: ಇಬ್ಬರು ವಶಕ್ಕೆ
ಮಂಗಳೂರು: ರಥಬೀದಿ ಬಳಿ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಬಜಾಲ್‌ನ ಗಗನ್‌ (22) ಮತ್ತು ಜಲ್ಲಿಗುಡ್ಡೆಯ ವಿಜೀತ್‌ (21)ನನ್ನು ಮಂಗಳೂರು ಉತ್ತರ ಠಾಣೆ ಪೊಲೀಸರು ನ. 6ರ ರಾತ್ರಿ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪತಿ, ಸಂಬಂಧಿಕರಿಂದ ಹಲ್ಲೆ ; ದೂರು
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಮದ್ದಡ್ಕ ಸಾರ್ಗ ಅಪಾರ್ಟ್‌ಮೆಂಟ್‌ನಲ್ಲಿ ಪತಿ ಹಾಗೂ ಸಂಬಂಧಿಕರಿಂದ ಪತ್ನಿಗೆ ಹಲ್ಲೆ ನಡೆದಿರುವ ಕುರಿತು ದೂರು ದಾಖಲಾಗಿದೆ.

Advertisement

ಫಾತಿಮಾ (29) ಹಲ್ಲೆಗೊಳಗಾದವರು. ಅವರ ಪತಿ ಮಹಮ್ಮದ್‌ ಸಾದಿಕ್‌ ಹಾಗೂ ಆತನ ತಂದೆ ಸಯ್ಯದ್‌ ಬ್ಯಾರಿ, ತಾಯಿ ಐಸಮ್ಮ, ತಂಗಿಯರಾದ ರಾಜಿಯಾ ಹಾಗೂ ಸಾಯಿದಾ ಸಹಿತ ಇತರರು ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.

ಫಾತಿಮಾ ಹಾಗೂ ಮಹಮ್ಮದ್‌ ಸಾದಿಕ್‌ 12 ವರ್ಷಗಳ ಹಿಂದೆ ವಿವಾಹವಾಗಿದ್ದು, ಪತಿ-ಪತ್ನಿಯರ ಮಧ್ಯೆ ಪರಸ್ಪರ ಸಣ್ಣ ಪುಟ್ಟ ವಿಚಾರಗಳಿಗೆ ಜಗಳವಾಗುತ್ತಿತ್ತು. ನ. 4ರಂದು ಅಪಾರ್ಟ್‌ಮೆಂಟ್‌ನ ಬಾಡಿಗೆ ಮನೆಯಲ್ಲಿದ್ದ ವೇಳೆ ಮನೆ ಕಟ್ಟಲು ತವರು ಮನೆಯಿಂದ ಹಣ ತರುವಂತೆ ಪತಿ ಹಾಗೂ ಪತಿಯ ಮನೆಮಂದಿ ಮನೆಯೊಳಗೆ ಏಕಾಏಕಿ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಅತ್ತೆ ಹಾಗೂ ನಾದಿನಿಯವರು ಹಲ್ಲೆ ನಡೆಸಿರುವುದಾಗಿ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಮನೆ ಮಾರಾಟದ ವಿಚಾರ: ಆತ್ಮಹತ್ಯೆ
ಮಲ್ಪೆ: ಮನೆ ಮಾರಾಟದ ವಿಚಾರದಲ್ಲಿ ಪದೇ ಪದೇ ಜಗಳವಾಡುತ್ತಿದ್ದ ಮಲ್ಪೆ ತೆಂಕನಿಡಿಯೂರು ಗ್ರಾಮದ ರವಿ ಎಂ.ಎಸ್‌. ಅವರ ಪುತ್ರ ಸಾಗರ್‌ (20) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಂಬಲಪಾಡಿಯಲ್ಲಿ ಎನಿಮೆಶನ್‌ ಕೆಲಸ ಮಾಡಿಕೊಂಡಿದ್ದ ಆತನಿಗೆ ಮದ್ಯಪಾನ ಮಾಡುವ ಚಟವಿತ್ತು. ಸೋಮವಾರ ಮುಂಜಾನೆ ಬಚ್ಚಲು ಮನೆಯ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗೋಳಿಯಂಗಡಿ: ಬೈಕ್‌ ಢಿಕ್ಕಿ; ವೃದ್ಧ ಸಾವು
ಸಿದ್ದಾಪುರ: ಬೆಳ್ವೆ ಗ್ರಾಮದ ಗೋಳಿಯಂಗಡಿ ಸುರಭಿ ಹೊಟೇಲ್‌ ಬಳಿಯ ಮಣ್ಣು ರಸ್ತೆಯಲ್ಲಿ ನಿಂತಿದ್ದ ರಾಮ ನಾಯ್ಕ (70) ಅವರಿಗೆ ಬೈಕ್‌ ಢಿಕ್ಕಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಮ್ಯಾನೇಜರ್‌ಗೆ ವೈಟರ್‌ನಿಂದ ಹಲ್ಲೆ
ಕುಂದಾಪುರ: ಇಲ್ಲಿನ ಫಿಶ್‌ ಮಾರ್ಕೆಟ್‌ ರಸ್ತೆಯಲ್ಲಿರುವ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಒಂದರಲ್ಲಿ ವೈಟರ್‌ ಆಗಿದ್ದ ಮಂಜುನಾಥ ಇತರ 3 ಜನರನ್ನು ಕರೆದುಕೊಂಡು ಬಂದು ವೇತನದ ವಿಚಾರದಲ್ಲಿ ಜಗಳ ಮಾಡಿದ್ದಾರೆ. ಈ ಸಂದರ್ಭ ಮ್ಯಾನೇಜರ್‌ ಸಂತೋಷ್‌ ಕುಮಾರ್‌ ಶೆಟ್ಟಿ ಅವರಿಗೆ ಆರೋಪಿಗಳು ಹಲ್ಲೆ ಮಾಡಿದ್ದು, ಮಾಲಕರಿಗೆ ಜೀವ ಬೆದರಿಕೆ ಹಾಕಿದ್ದಾಗಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next