ಕಾಸರಗೋಡು: ಕಂಟೈನರ್ ಲಾರಿಯಲ್ಲಿ ಸಾಗಿಸುತ್ತಿದ್ದ 31,800 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಮೇಲ್ಪರಂಬ ಪೊಲೀಸರು ವಶಪಡಿಸಿಕೊಂಡಿದ್ದು, ಚಾಲಕನನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠರ ಕ್ಲೀನ್ ಕಾಸರಗೋಡು ಕಾರ್ಯಾಚರಣೆಯ ಅಂಗವಾಗಿ ಪೊಲೀಸರು ನಡೆಸಿದ ತಪಾಸಣೆ ಸಂದರ್ಭ ಕಂಟೈನರ್ ಲಾರಿಯಲ್ಲಿ ತಂಬಾಕು ಉತ್ಪನ್ನ ಪತ್ತೆಯಾಯಿತು. ಮಂಗಳೂರಿನಿಂದ ಕೊಚ್ಚಿಗೆ ಪಾರ್ಸಲ್‌ಗಳೊಂದಿಗೆ ತೆರಳುತ್ತಿದ್ದ ಕಂಟೈನರ್ ಲಾರಿಯಲ್ಲಿ ಮಾದಕ ವಸ್ತುಗಳನ್ನು ಸಾಗಿಸಲಾಗುತ್ತಿದೆಯೆಂಬ ರಹಸ್ಯ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ರಾ.ಹೆದ್ದಾರಿಯಲ್ಲಿ ಲಾರಿಯನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ತಂಬಾಕು ಉತ್ಪನ್ನಗಳು ಪತ್ತೆಯಾಯಿತು.
ಲಾರಿ ಚಾಲಕ ಕರ್ನಾಟಕ ವಿಜಯಪುರ ಗಾಂಧಿ ಚೌಕ್‌ನ ಸಿದ್ಧಲಿಂಗಪ್ಪ (39)ನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನಿಂದ ವ್ಯಕ್ತಿಯೋರ್ವ ತಂಬಾಕು ಉತ್ಪನ್ನಗಳನ್ನು ನೀಡಿದ್ದಾನೆಂದೂ, ಅದನ್ನು ಕಲ್ಲಿಕೋಟೆಗೆ ತಲುಪಿದಾಗ ವ್ಯಕ್ತಿಯೋರ್ವ ಪಡೆದುಕೊಳ್ಳುವನೆಂದು ತಿಳಿಸಿದ್ದಾಗಿ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇದಕ್ಕಾಗಿ 3,000 ರೂ. ಪ್ರತಿಫಲ ನೀಡುವುದಾಗಿ ತಿಳಿಸಿದ್ದ. ಇದಕ್ಕೂ ಮುನ್ನ ಇದೇ ರೀತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಸಾಗಿಸಿದ್ದಾಗಿ ಚಾಲಕ ತಿಳಿಸಿದ್ದಾನೆ.