Advertisement

Kasaragod: ಜೂನ್‌ 9 ರಿಂದ ಜುಲೈ 31ರ ತನಕ ಮೀನುಗಾರಿಕೆ ನಿಷೇಧ

04:50 PM May 26, 2023 | Team Udayavani |

ಕಾಸರಗೋಡು: ಮಳೆಗಾಲ ಸನಿಹವಾಗುತ್ತಿರುವಂತೆಯೇ ಕೇರಳ ವ್ಯಾಪ್ತಿಗೆ ಸೇರಿದ ಆಳ ಸಮುದ್ರದಲ್ಲಿ ಮೀನುಗಾರಿಕೆ ಟ್ರೋಲಿಂಗ್‌ ನಿಷೇಧ ಏರ್ಪಡಿಸುವ ದಿನಾಂಕವನ್ನು ಫಿಶರೀಸ್‌ ಕೋ-ಆರ್ಡಿನೇಶನ್‌ ಸಮಿತಿ ಪ್ರಕಟಿಸಿದೆ.

Advertisement

ಜೂನ್‌ 9ರಂದು ಮಧ್ಯರಾತ್ರಿ 12 ಗಂಟೆಯಿಂದ ಜುಲೈ 31ರ ಮಧ್ಯರಾತ್ರಿ 12 ಗಂಟೆಯ ತನಕ ಟ್ರೋಲಿಂಗ್‌ ನಿಷೇಧ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಮಳೆಗಾಲದಲ್ಲಿ ಮೀನುಗಳ ಸಂತಾನೋತ್ಪತ್ತಿ ಋತುವಾಗಿದ್ದು, ಅದರಿಂದಾಗಿ ಸಮುದ್ರದಲ್ಲಿ ಮತ್ಸ್ಯ ಸಂಪತ್ತನ್ನು ಹೆಚ್ಚಿಸಿ ಅದನ್ನು ಸಂರಕ್ಷಿಸುವ ಉದ್ದೇಶದಿಂದ ಪ್ರತೀ ವರ್ಷ ಈ ಋತುವಿನಲ್ಲಿ ನಿಗದಿತ ಅವಧಿ ತನಕ ಟ್ರೋಲಿಂಗ್‌ ನಿಷೇಧ ಜಾರಿಗೊಳಿಸಲಾಗುತಿದೆ.

ಈ ಅವಧಿಯಲ್ಲಿ ಬೆಸ್ತರಿಗೆ ಉಚಿತವಾಗಿ ರೇಶನ್‌ ಸಾಮಗ್ರಿ ವಿತರಣೆ, ಆರ್ಥಿಕ ನೆರವು ಇತ್ಯಾದಿ ನೀಡಲಾಗುವುದು. ಮೀನು ಕಾರ್ಮಿಕ ಕಲ್ಯಾಣ ನಿಧಿ ಮಂಡಳಿಯಲ್ಲಿ ಸದಸ್ಯರಾಗಿರುವ ಬೆಸ್ತರಿಗೆ ಕಳೆದ ವರ್ಷ ತಲಾ 1000 ರೂ. ನಂತೆ ಆರ್ಥಿಕ ಸಹಾಯ ನೀಡಲಾಗಿತ್ತು. ಈ ಸಹಾಯವನ್ನು ಈ ವರ್ಷ ಹೆಚ್ಚಿಸುವಂತೆ ಇಲಾಖೆ ಸರಕಾರದೊಡನೆ ಆಗ್ರಹಿಸಿದೆ. ಟ್ರೋಲಿಂಗ್‌ ನಿಷೇಧ ಜಾರಿಗೊಂಡ ಬಳಿಕ ಕೇರಳ ರಾಜ್ಯದ ಸಮುದ್ರ ಕಿನಾರೆಯಿಂದ 12 ನೋಟಿಕಲ್‌ ಮೈಲ್‌ ತನಕದ ಪ್ರದೇಶದ ಸಮುದ್ರದಲ್ಲಿ ಯಾಂತ್ರೀಕೃತ ಇತ್ಯಾದಿ ಬೋಟ್‌ಗಳನ್ನು ಬಳಸಿ ಮೀನಗಾರಿಕೆ ನಡೆಸುವಂತಿಲ್ಲ. ಅದರಲ್ಲೂ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ಪೂರ್ಣ ನಿಷೇಧ ಹೇರಲಾಗುತ್ತಿದೆ. ಅದರಿಂದಾಗಿ ಯಾಂತ್ರೀಕೃತ ದೋಣಿಗಳು ಜೂನ್‌ 9ರ ಬಳಿಕ ಸಮುದ್ರಕ್ಕಿಳಿಯದೆ ಅವುಗಳನ್ನು ಸುರಕ್ಷಿತ ತಾಣಗಳಿಗೆ ಸಾಗಿಸಿ ಅಲ್ಲಿ ಸಂರಕ್ಷಿಸಬೇಕು. ಇತರ ರಾಜ್ಯಗಳ ಮೀನುಗಾರಿಕಾ ಬೋಟುಗಳು ಜೂನ್‌ 10ರೊಳಗಾಗಿ ಕೇರಳದ ಸಮುದ್ರ ವ್ಯಾಪ್ತಿ ಬಿಟ್ಟು ಹೊರಹೋಗಬೇಕೆಂಬ ಆದೇಶ ನೀಡಲಾಗಿದೆ.

ಆದರೆ ಪರಂಪರಾಗತ ರೀತಿಯಲ್ಲಿ ನಾಡ ದೋಣಿ ಬಳಸಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವವರಿಗೆ ಇದು ಅನ್ವಯವಾಗುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next