ಕಾಸರಗೋಡು: ಹೊಸದುರ್ಗದ ವಸತಿಗೃಹವೊಂದರಲ್ಲಿ ಉದುಮ ಬಾರದ ಕುಂಡೋಳಂಪಾರ ಮುಕ್ಕುನ್ನೋತ್ ಕಾವು ಕ್ಷೇತ್ರದ ಬಳಿಯ ಬಾಲಕೃಷ್ಣನ್ ಅವರ ಪುತ್ರಿ ಪಿ.ಬಿ. ದೇವಿಕಾರಾಜ್(32) ಅವರನ್ನು ಕುತ್ತಿಗೆಗೆ ಇರಿದು ಕೊಲೆಗೈಯ್ಯಲು ಬಳಸಿದ ಚಾಕು ಸಹಿತ ನಾಲ್ಕು ಚಾಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಬೋವಿಕ್ಕಾನ ಅಮ್ಮಂಗೋಡು ನಿವಾಸಿ ಸತೀಶ್ ಭಾಸ್ಕರ್(34) ನನ್ನು ಬಂಧಿಸಿದ ಪೊಲೀಸರು ಆತನ ಕೊಠಡಿಯಲ್ಲಿ ನಡೆಸಿದ ತಪಾಸಣೆಯಲ್ಲಿ ನಾಲ್ಕು ಚಾಕುಗಳನ್ನು ಪತ್ತೆಹಚ್ಚಿದ್ದರು. ಕೊಲೆಗೈದ ವಸತಿಗೃಹದ ಕೊಠಡಿಯಲ್ಲಿ ಬೆರಳ ಗುರುತು ತಜ್ಞರು ಮತ್ತು ಶ್ವಾನ ದಳ ತನಿಖೆ ನಡೆಸಿದ್ದು ಹಲವು ಬೆರಳ ಗುರುತುಗಳನ್ನು ಪತ್ತೆಹಚ್ಚಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ. ಸಬ್‌ಕಲೆಕ್ಟರ್ ಸೂಫಿಯಾನ್ ಅಹಮ್ಮದ್, ಹೊಸದುರ್ಗ ಡಿವೈಎಸ್‌ಪಿ ಪಿ.ಬಾಲಕೃಷ್ಣನ್ ನಾಯರ್, ಹೊಸದುರ್ಗ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪಿ.ಶೈನ್ ನೇತೃತ್ವದ ಪೊಲೀಸರು ಕೊಲೆ ನಡೆದ ವಸತಿಗೃಹಕ್ಕೆ ತೆರಳಿ ತನಿಖೆ ನಡೆಸಿದರು. ಪೊಲೀಸರು ವಸತಿಗೃಹಕ್ಕೆ ಬಂದಾಗಲಷ್ಟೇ ವಸತಿಗೃಹದಲ್ಲಿ ಕೊಲೆ ನಡೆದ ವಿಷಯ ವಸತಿಗೃಹದವರಿಗೆ ತಿಳಿದು ಬಂತೆನ್ನಲಾಗಿದೆ. ದೇವಿಕಾರಾಜ್ ಕಾಸರಗೋಡು ಹಳೆ ಬಸ್ ನಿಲ್ದಾಣ ಪರಿಸರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದು, ಮೇ 16ರಂದು ಹೊಸದುರ್ಗದಲ್ಲಿ ನಡೆದ ಬಾರ್ಬರ್ – ಬ್ಯೂಟೀಶಿಯನ್ ಸಂಘಟನೆಯ ಸಭೆಯಲ್ಲೂ ಭಾಗವಹಿಸಿದ್ದಳು. ದೇವಿಕಾ ಹಾಗೂ ಸತೀಶ್ ಕಳೆದ ಒಂಬತ್ತು ವರ್ಷಗಳಿಂದ ಪರಸ್ಪರ ಪರಿಚಯ ಹೊಂದಿದ್ದರು.