ಕಾಸರಗೋಡು: ಮೂವರು ಮಕ್ಕಳನ್ನು ಕೊಲೆಗೈದು ದಂಪತಿಗಳು ಆತ್ಮಹತ್ಯೆಗೈದ ಘಟನೆ ಕಣ್ಣೂರು ಚೆರುಪುಳದಲ್ಲಿ ನಡೆದಿದೆ. ಚೆರುಪುಳ ನಿವಾಸಿ ಶಾಜಿ(42), ಆತನ ಎರಡನೇ ಪತ್ನಿ ಶ್ರೀಜಾ(38), ಮಕ್ಕಳಾದ ಸೂರಜ್(10), ಸುರಭಿ(8), ಸುಜಿನ್(12) ಸಾವಿಗೀಡಾದರು. ಮನೆಯೊಳಗೆ ಆತ್ಮಹತ್ಯೆ ಎಂದು ಬರೆದ ಪತ್ರವೊಂದು ಪೊಲೀಸರು ಪತ್ತೆಹಚ್ಚಿದ್ದಾರೆ.
ಮೂವರು ಮಕ್ಕಳನ್ನು ಕೊಲೆಗೈದ ಬಳಿಕ ಶಾಜಿ ಮತ್ತು ಶ್ರೀಜ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಮೂವರು ಮಕ್ಕಳು ಮನೆಯ ಮೆಟ್ಟಿಲ ಬಳಿ ನೇಣು ಬಿಗಿದ ಸ್ಥಿತಿಯಲ್ಲೂ, ಶಾಜಿ ಮತ್ತು ಶ್ರೀಜ ಒಂದೇ ಹಗ್ಗದಲ್ಲಿ ನೇಣು ಬಿಗಿದುಕೊಂಡಿದ್ದಾರೆ.
**
ರೈಲಿನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ : ಬಂಧನ
ಕಾಸರಗೋಡು: ರೈಲು ಗಾಡಿಯಲ್ಲಿ ಪ್ರಯಾಣಿಸುತ್ತಿದ್ದ ಮೆಡಿಕಲ್ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ತೃಶ್ಶೂರು ಕಾತ್ತಂಗಾಡ್ ಕಾರಮುಕ್ಕಿನ ಸನೀಶ್(45)ನನ್ನು ಕಾಸರಗೋಡು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.
ಚೆನ್ನೈ-ಮಂಗಳೂರು ಮೈಲ್ ಎಕ್ಸ್‌ಪ್ರೆಸ್ ರೈಲುಗಾಡಿಯಲ್ಲಿ ಮೇ 23 ರಂದು ಬೆಳಗ್ಗೆ ವೈದ್ಯಕೀಯ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಬಗ್ಗೆ ಆರೋಪಿಸಲಾಗಿದೆ. ಈ ವಿದ್ಯಾರ್ಥಿನಿ ಮಂಗಳವಾರ ಬೆಳಗ್ಗೆ ತಲಶೈರಿಯಿಂದ ರೈಲಿನ ಜನರಲ್ ಬೋಗಿಗೆ ಏರಿದ್ದಳು. ಅದೇ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ ಆಕೆಯ ದೇಹ ಸ್ಪರ್ಶ ನಡೆಸಿದನೆನ್ನಲಾಗಿದೆ. ಆಗ ಆಕೆ ಪ್ರತಿಭಟಿಸಿ ಪ್ರಶ್ನಿಸಿದಾಗ ಇತರ ಪ್ರಯಾಣಿಕರು ಆಕೆಯ ನೆರವಿಗೆ ಬಂದರು. ಈ ಮಧ್ಯೆ ರೈಲು ನೀಲೇಶ್ವರಕ್ಕೆ ತಲುಪಿದಾಗ ಆರೋಪಿ ರೈಲಿನಿಂದ ಇಳಿದು ಪರಾರಿಯಾಗಿದ್ದಾನೆ. ಈ ಮಧ್ಯೆ ವಿದ್ಯಾರ್ಥಿನಿ ಮೊಬೈಲ್ ಫೋನ್‌ನಲ್ಲಿ ಆರೋಪಿಯ ಫೋಟೋವನ್ನು ಕ್ಲಿಕ್ಕಿಸಿದ್ದಳು. ರೈಲುಗಾಡಿ ಕಾಸರಗೋಡಿಗೆ ತಲುಪಿದಾಗ ವಿದ್ಯಾರ್ಥಿನಿ ಕಿರುಕುಳದ ಬಗ್ಗೆ ಕಾಸರಗೋಡು ರೈಲ್ವೇ ಪೊಲೀಸರಿಗೆ ದೂರು ನೀಡಿದಳು. ಮೊಬೈಲ್‌ನಲ್ಲಿ ಕ್ಲಿಕ್ಕಿಸಿದ ಫೋಟೋವನ್ನು ಪೊಲೀಸರಿಗೆ ನೀಡಿದ್ದಳು. ಈ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕವಾಗಿ ಪ್ರಚಾರವಾಗಿತ್ತು.
ಇದೇ ಸಂದರ್ಭದಲ್ಲಿ ಆರೋಪಿ ಮೇ 23 ರಂದು ರಾತ್ರಿ ಹೊಸದುರ್ಗ ಕೋಟಚ್ಚೇರಿಯ ರಸ್ತೆ ಬದಿಯ ಚಹದಂಗಡಿಯೊಂದರಲ್ಲಿ ಆಹಾರ ಸೇವಿಸುತ್ತಿದ್ದಾಗ ಅಲ್ಲೇ ಪಕ್ಕದಲ್ಲಿ ವ್ಯಕ್ತಿಯೋರ್ವರು ಸಾಮಾಜಿಕ ಜಾಲತಾಣದಲ್ಲಿ ಕಂಡ ವ್ಯಕ್ತಿಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ತತ್‌ಕ್ಷಣ ಧಾವಿಸಿ ಬಂದ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ಕಾಸರಗೋಡು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.