ಕಾಸರಗೋಡು: ರಸ್ತೆಗಳಲ್ಲಿ ಸಾರಿಗೆ ಕಾನೂನು ಉಲ್ಲಂಘನೆ ನಡೆಸುತ್ತಿರುವವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲು ರಸ್ತೆ ಬದಿಯಲ್ಲಿ ಸ್ಥಾಪಿಸಲಾದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಕೆಮರಾಗಳು ಕಾರ್ಯಾಚರಣೆ ಆರಂಭಿಸಿದ್ದು, ಮೊದಲ ದಿನ ಜೂ. 5ರಂದು ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯ ವರೆಗಿನ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 1,040 ಸಾರಿಗೆ ಉಲ್ಲಂಘನೆ ಪ್ರಕರಣಗಳು ಪತ್ತೆಯಾಗಿವೆ.
ಕೇರಳ ರಾಜ್ಯದಲ್ಲಿ ಒಟ್ಟು 38,520 ಸಾರಿಗೆ ಕಾನೂನು ಉಲ್ಲಂಘನೆ ಪತ್ತೆಯಾಗಿವೆ. 250ರಿಂದ 3 ಸಾವಿರ ರೂ. ತನಕ ದಂಡ ವಸೂಲು ಮಾಡಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ. ಸಾರಿಗೆ ನಿಯಮ ಉಲ್ಲಂ ಸಿದವರಿಗೆ ಶೀಘ್ರದಲ್ಲೇ ನೋಟಿಸ್ ಬರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜನರನ್ನು ಹಿಂಡುವ ಯೋಜನೆ: ಕಾಂಗ್ರೆಸ್
ಹದಗೆಟ್ಟ ರಸ್ತೆಗಳು ಮತ್ತು ಸುರಕ್ಷಿತ ಚಾಲನೆಗೆ ಪೂರಕ ಸೌಲಭ್ಯಗಳನ್ನು ಒದಗಿಸದೇ ಇರುವುದು ಸಂಚಾರ ಉಲ್ಲಂಘನೆಗೆ ಕಾರಣ. ರಾಜ್ಯದ ಪಿಣರಾಯಿ ಸರಕಾರವು ರಸ್ತೆಗಳಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸುವ ಬದಲು ಎಐ ಕೆಮರಾದ ಮೂಲಕ ಜನರನ್ನು ಹಿಂಡಿ ಬೊಕ್ಕಸ ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ಇದೇವೇಳೆ ಆರೋಪಿಸಿದ್ದಾರೆ.
Related Articles
ರಾಜ್ಯದಲ್ಲಿ ಮೊದಲ ದಿನವೇ 38,520 ಸಂಚಾರ ನಿಯಮ ಉಲ್ಲಂಘನೆಗಳನ್ನು ಪತ್ತೆಹಚ್ಚುವ ಮೂಲಕ ಸರಾಸರಿ 1,000 ರೂ.ಗಳಂತೆ ಜನರಿಂದ ಸುಮಾರು 4 ಕೋಟಿ ಸಂಗ್ರಹಿಸಲಾಗಿದೆ. ಮಾಸಿಕ 115 ಕೋಟಿ ರೂ.ಗಳನ್ನು ಸಂಗ್ರಹಿಸುವ ನಿರೀಕ್ಷೆಯನ್ನು ಸರಕಾರ ಹೊಂದಿದೆ. ಇದು ಮದ್ಯದ ಅನಂತರದ ಎರಡನೇ ಅತಿ ಹೆಚ್ಚು ಆದಾಯವಾಗಿದೆ ಮತ್ತು ಲಾಟರಿ ಆದಾಯಕ್ಕಿಂತಲೂ ಹೆಚ್ಚು. ಎಐ ಕೆಮರಾ ಯೋಜನೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಹೋರಾಟವನ್ನು ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ.