Advertisement

ಬೀದರ; ರಂಗೇರಿದ ಕಸಾಪ ಚುನಾವಣೆ ಅಖಾಡ; ಪರಿಷತ್‌ ಸಾರಥಿಗಾಗಿ ಪ್ರಚಾರ ಶುರು

05:00 PM Jan 15, 2021 | Team Udayavani |

ಬೀದರ: ಪ್ರವಾಸೋದ್ಯಮ ಜಿಲ್ಲೆ ಹೆಗ್ಗಳಿಕೆಯ ಬೀದರ ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆ ಕಾವು ತಣ್ಣಗಾಗುತ್ತಿದ್ದಂತೆ ಈಗ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಗೆ ಅಖಾಡ ರಂಗೇರುತ್ತಿದೆ. ಅಧ್ಯಕ್ಷ ಗದ್ದುಗೆಗಾಗಿ ತೆರೆ ಮೆರೆಯಲ್ಲಿ ಕಸರತ್ತುಗಳು ಶುರುವಾಗಿವೆ. ಹಾಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರ ಅವಧಿ ಬರುವ ಮಾರ್ಚ್‌ ಅಂತ್ಯಕ್ಕೆ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಅಷ್ಟರ ಒಳಗಾಗಿ ಚುನಾವಣೆ ಆಗಬೇಕಿದೆ.

Advertisement

ಅದರಂತೆ ಚುನಾವಣೆ ಇನ್ನೂ ಮೂರು ತಿಂಗಳು ಬಾಕಿ ಉಳಿದಿದ್ದು, ಅದಾಗಲೇ ಆಕಾಂಕ್ಷಿಗಳು ಸ್ಪರ್ಧೆಗೆ ಸಜ್ಜಾಗಿ ನಿಂತಿದ್ದಾರೆ. ತಮ್ಮ-ತಮ್ಮ ಬೆಂಬಲಿಗರ ಜತೆ ಸರಣಿ  ಸಭೆಗಳು ನಡೆಸುವ ಮೂಲಕ ತಮ್ಮ ಸ್ಪರ್ಧೆ ಬಗ್ಗೆ ಖಚಿತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಸದಸ್ಯ ಮತದಾರರರಿಗೆ ನೇರ ಮತ್ತು ಮೊಬೈಲ್‌ ಮೂಲಕ ಸಂಪರ್ಕಿಸಿ ಪ್ರಚಾರಕ್ಕೂ ಸಹ ಚಾಲನೆ ಕೊಟ್ಟಿದ್ದಾರೆ. ಹಾಗಾಗಿ ಈ ಸಲ ಕಸಾಪ ಸಾರಥಿ ಯಾರು ಆಗಬಹುದು ಎಂಬ ಕುತೂಹಲ ಹೆಚ್ಚಿಸಿದೆ.

ಈ ಬಾರಿಯ ಚುನಾವಣೆಯ ಆಕಾಂಕ್ಷಿಗಳೆಲ್ಲರೂ ಯುವಕರೇ ಆಗಿರುವುದು ವಿಶೇಷ. ಪ್ರಸ್ತುತ ಅಧ್ಯಕ್ಷರಾಗಿರುವ ಸುರೇಶ ಚನಶೆಟ್ಟಿ ಮತ್ತೂಂದು ಅವಧಿಗೆ ಕಣಕ್ಕೆ ಇಳಿಯಲು ತಯ್ನಾರು ಮಾಡಿಕೊಳ್ಳುತ್ತಿದ್ದಾರೆ. ಇವರಿಗೆ ಪ್ರತಿ ಸ್ಪರ್ಧಿಯಾಗಿ ಕಸಾಪ ಜಿಲ್ಲಾ ಕಾರ್ಯದರ್ಶಿ ಡಾ| ರಾಜಕುಮಾರ ಹೆಬ್ಟಾಳೆ ಅದೃಷ್ಟ
ಪರೀಕ್ಷೆಗೆ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ. ಇವರೊಟ್ಟಿಗೆ ಕರುನಾಡು ಸಾಂಸ್ಕೃತಿ ವೇದಿಕೆ ಅಧ್ಯಕ್ಷ ಡಾ| ಸಂಜುಕುಮಾರ ಅತಿವಾಳೆ ಅವರ ಹೆಸರು ಸಹ ಕೇಳಿ ಬರುತ್ತಿದೆ. ಮತದಾರರನ್ನು ಸೆಳೆಯಲು ಸಾಹಿತಿಗಳ ಗುಂಪುಗಳು ತಂತ್ರಗಾರಿಕೆ ಹೆಣೆಯಲು ಆರಂಭಿಸಿವೆ.

ಬೀದರ ಜಿಲ್ಲಾ ಕಸಾಪ ಅಂದಾಜು 15 ಸಾವಿರ ಸದಸ್ಯರನ್ನು ಹೊಂದಿದ್ದು, ಈ ಪೈಕಿ 6 ಸಾವಿರದಷ್ಟು ಸದಸ್ಯರು ಬೀದರ ತಾಲೂಕಿನಲ್ಲೇ ಇದ್ದಾರೆ. ಬುದ್ಧಿವಂತರ ಚುನಾವಣೆ ಎನಿಸಿಕೊಂಡಿರುವ ಪರಿಷತ್‌ ಚುನಾವಣೆಗೂ ಸಹ ರಾಜಕೀಯ ಲೇಪ ಪಡೆಯುತ್ತಿರುವುದರಿಂದ ಅಖಾಡ ಹೆಚ್ಚು ರಂಗೇರಲು ಕಾರಣವಾಗುತ್ತಿದೆ. ಮತದಾನದ ದಿನಗಳು ಸಮೀಪಿಸುತ್ತಿದ್ದಂತೆ “ವೋಟಿಗಾಗಿ ನೋಟು’ ವ್ಯವಸ್ಥೆ ಸಹ ಹೆಚ್ಚುತ್ತಿದೆ.

“ಕನ್ನಡ ಸಾಹಿತ್ಯ ಪರಿಷತ್‌ ಯಾರೊಬ್ಬರ ಸ್ವತ್ತಾಗಬಾರದು. ಅಧ್ಯಕ್ಷ ಸ್ಥಾನಕ್ಕೆ ಹೊಸ ಮುಖಗಳಿಗೆ ಅವಕಾಶ ಸಿಗುವಂತಾಗಬೇಕು. ಇದು ಹೆಚ್ಚಿನ ಸದಸ್ಯರ ಅಪೇಕ್ಷೆ ಸಹ ಇದೆ. ಬೀದರ ಗಡಿ ಜಿಲ್ಲೆಯಾಗಿರುವ ಹಿನ್ನೆಲೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚು, ಪರಿಣಾಮಕಾರಿಯಾಗಿ ನಡೆಯಬೇಕಿದೆ. ಮತದಾರರು ಅವಕಾಶ ನೀಡಿದರೆ ಕನ್ನಡದ ತೇರನ್ನು ಎಳೆದುಕೊಂಡು ಹೋಗುತ್ತೇವೆ. ಸದಸ್ಯರ ಜತೆಗೆ ಶೀಘ್ರ ಸಭೆ ಸೇರಿ ನನ್ನ ಸ್ಪರ್ಧೆಯ ಬಗ್ಗೆ ಅಂತಿಮ
ನಿರ್ಣಯ ಕೈಗೊಳ್ಳುತ್ತೇನೆ.”

Advertisement

ಡಾ| ಸಂಜೀವಕುಮಾರ ಅತಿವಾಳೆ,ಹಿರಿಯ ಸಾಹಿತಿ

ನನ್ನ ಅಧ್ಯಕ್ಷ ಅವಧಿಯಲ್ಲಿ ಕನ್ನಡ ಕಟ್ಟುವ ಚಟುವಟಿಕೆಗಳನ್ನು ನಿರಂತರವಾಗಿ ನಡೆದಿವೆ. ಸಾಹಿತ್ಯಾಸಕ್ತರ ಸ್ವಾಭಿಮಾನದ ಹೆಗ್ಗುರುತಾಗಿರುವ ಜಿಲ್ಲಾ ಕನ್ನಡ ಭವನ ನಿರ್ಮಾಣ ಆಗಬೇಕಿದೆ. ಜಿಲ್ಲೆಯ ಎರಡ್ಮೂರು ತಾಲೂಕು ಕೇಂದ್ರಗಳಲ್ಲಿ ಭವನಕ್ಕೆ ನಿವೇಶನ ಮಂಜೂರಾತಿ ಅಂತಿಮ ಹಂತದಲ್ಲಿವೆ. ಈ ಮಹತ್ವದ ಕೆಲಸಗಳು ಆಗಬೇಕಾದರೆ ಇನ್ನೊಂದು ಅವ ಧಿಗೆ ಮುಂದುವರೆಯಬೇಕೆಂಬುದು ಎಲ್ಲರ ಒತ್ತಡ ಇದೆ. ಹಾಗಾಗಿ ಸ್ಪರ್ಧೆಗೆ ಮನಸ್ಸು ಮಾಡಿದ್ದೇನೆ. ಶೀಘ್ರ ಸಭೆ ನಡೆಸಿ ಸ್ಪರ್ಧೆ ಬಗ್ಗೆ ನಿರ್ಣಯ ಪ್ರಕಟಿಸುತ್ತೇನೆ.

ಸುರೇಶ ಚನಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ

ಕಳೆದ ಬಾರಿ ಜಿಲ್ಲಾ ಕಸಾಪ ಚುನಾವಣೆಗೆ ಸ್ಪರ್ಧಿಸುವಂತೆ ಬಹಳಷ್ಟು ಒತ್ತಡ ಇತ್ತು. ಹಾಗಾಗಿ ಈ ಬಾರಿ ಕಣಕ್ಕಿಳಿಯಲು ನಿಶ್ಚಯಿಸಿದ್ದೇನೆ. ತಾಯಿ ಭುವನೇಶ್ವರಿಯ ಸೇವೆ, ಕನ್ನಡದ ಚಟುವಟಿಕೆ ನಡೆಸಲು ನನಗೆ ಅವಕಾಶ ಸಿಗುವ ವಿಶ್ವಾಸ ಇದೆ. ನಿಗದಿತ ಅವಧಿಯಲ್ಲಿ ಕನ್ನಡ ಭವನ ನಿರ್ಮಾಣದ ಜತೆಗೆ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ,  ಅಂತಾರಾಷ್ಟ್ರೀಯ ಜಾನಪದ ಸಮ್ಮೇಳನ ಸಂಘಟಿಸುವುದು ಸ್ಥಳೀಯ ಸಾಹಿತಿ, ಕಲಾವಿದರನ್ನು ರಾಜ್ಯ-ರಾಷ್ಟ್ರ ಮಟ್ಟದಲ್ಲಿ
ಅವಕಾಶ ಕಲ್ಪಿಸಲು ಪ್ರಯತ್ನಿಸುವುದು ತಮ್ಮ ಆಶಯ.

ಡಾ| ರಾಜಕುಮಾರ ಹೆಬ್ಟಾಳೆ,ಜಿಲ್ಲಾ ಕಸಾಪ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next