ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಸ್ಥಾಪಿಸಲಾಗಿರುವ ದತ್ತಿ ನಿಧಿಗಳ ಆಶಯ ಈಡೇರುತ್ತಿಲ್ಲ. ಏಕ ಕಾಲಕ್ಕೆ ನಾಲ್ಕೈದು ದತ್ತಿ ಉಪನ್ಯಾಸ ಮಾಡಿದರೆ ದತ್ತಿ ನೀಡಿದವರ ಉದ್ದೇಶಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ ನನ್ನನ್ನು ಆಯ್ಕೆ ಮಾಡಿದ್ದಲ್ಲಿ ದತ್ತಿ ಉಪನ್ಯಾಸ ಪ್ರತ್ಯೇಕವಾಗಿ ಸಂಘಟಿಸುವುದಾಗಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಹಾಸಿಂಪೀರ ವಾಲೀಕಾರ ಭರವಸೆ ನೀಡಿದರು.
ಹೊನವಾಡ ಬನಶಂಕರಿ ದೇವಸ್ಥಾನದಲ್ಲಿ ಕಸಾಪ ಮತದಾರರೊಂದಿಗೆ ಸಭೆ ನಡೆಸಿ, ಮತಯಾಚನೆ ಮಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್‌ನ ಹೊಸ ಸದಸ್ಯರ ಅಭಿಯಾನ ನಡೆಸುವುದಾಗಿ ಹೇಳಿದರು.
ಪ್ರತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಶ್ರೀಗಳ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಗೌರವ ತರುವ ಸಂಕಲ್ಪ ಮಾಡಿದ್ದೇನೆ. ಎಲ್ಲರಿಗೂ ಅವರವರ ಪ್ರತಿಭೆಗೆ ತಕ್ಕಂತೆ ವೇದಿಕೆ ಹಂಚಿಕೊಳ್ಳುವ ಅವಕಾಶ ನೀಡಲಾಗುತ್ತದೆ. ಪ್ರತಿಭಾವಂತರ ಲೇಖನ ಮುದ್ರಣ ಕಾರ್ಯ ಮಾಡುವ ಜವಾಬ್ದಾರಿ ನಿಭಾಯಿಸಲು ಯೋಜಿಸಿದ್ದೇನೆ ಎಂದರು.
ನಿವೃತ್ತ ಪ್ರಾಂಶುಪಾಲ ರೇ.ಶಿ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಹುಮುಖ ಪ್ರತಿಭೆಯ ಹಾಸಿಂಪೀರ ವಾಲೀಕಾರ ಜ್ಞಾನಿಯೂ ಹೌದು. ಸಾಹಿತ್ಯ ಕ್ಷೇತ್ರಕ್ಕೆ ಅವರಿಂದ ಘನತೆ ಬರಲು ಸಾಧ್ಯ ವಾಗಲಿದ್ದು, ಜಿಲ್ಲೆಯ ಕಸಾಪ ಮತದಾರರು ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಪ್ರಾಚಾರ್ಯ ಎಸ್.ಜಿ. ಲಕ್ಕುಂಡಿಮಠ ಪ್ರೊ| ಮಹಾದೇವ ರಬಿನಾಳ, ಪ್ರೊ| ಮಲ್ಲಿಕಾರ್ಜುನ ಅವಟಿ, ಮಹಮ್ಮದಗೌಸ್ ಹವಾಲ್ದಾರ, ಡಿ.ಬಿ. ಏಚ್ಚಿ, ಶ್ರೀಕಾಂತ ಕುಂಬಾರ, ಲಿಂಗರಾಜ ಪಾಟೀಲ ಮಾತನಾಡಿದರು. ಈ ವೇಳೆ ಮೌನೇಶ ಪತ್ತಾರ, ಬಾಪುರಾಯ ದೇನಾಯಕ, ಟಿ.ಆರ್. ಬಡಿಗೇರ, ಶರಣಪ್ಪ ಯಚ್ಚಿ, ಶೋಮು ಪೂಜಾರಿ, ಡಿ.ಬಿ. ಪಾಂಡಿಗಾವಿ, ನಾಗೇಶ ಹಿರೇಮಠ, ಬಿ.ಕೆ. ಪೂಜಾರಿ, ಸಿ.ಆರ್. ಗೋವರ, ಆರ್.ಸಿ. ಪಾಟಿಲ, ಶಿವಾನಂದ ಗಸ್ತಿ, ರಾಜಕುಮಾರ ಹೇಗಡಿಹಾಳ, ಭೀಮಣ್ಣ ದೇವನಾಯಕ, ನಿಂಗಪ್ಪ ಕಲಘಟಗಿ, ಸಚಿಕೇತ ಹಿರೇಮಠ, ಮಂಜುನಾಥ ಇತರರಿದ್ದರು.