Advertisement

ವಿಧಾನಸಭೆಗೆ ಕೆಎಎಸ್‌ ಪ್ರಕರಣ

11:27 PM Jan 27, 2022 | Team Udayavani |

ಬೆಂಗಳೂರು: ಕರ್ನಾಟಕ ಆಡಳಿತಾತ್ಮಕ ಸೇವೆ (ಕೆಎಎಸ್‌)ಯಲ್ಲಿ 2011ರಿಂದಲೂ ಕಗ್ಗಂಟಾಗಿರುವ 362 ಅಧಿಕಾರಿಗಳ ನೇಮಕ ಪ್ರಕರಣಕ್ಕೆ ತಾರ್ಕಿಕ ಅಂತ್ಯ  ಹಾಡಲು ಮುಂದಾಗಿರುವ ರಾಜ್ಯ ಸರಕಾರವು “ವಿಧಾನ ಸಭೆಯ ಒಪ್ಪಿಗೆ’ಯ ಹಾದಿ ಹಿಡಿದಿದೆ.

Advertisement

ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಕೆಎಎಸ್‌ ಅಧಿಕಾರಿಗಳ ನೇಮಕ ವಿಚಾರವನ್ನು ವಿಧಾನಸಭೆಯ ಮುಂದೆ ತರಲು ನಿರ್ಧರಿಸಲಾಗಿದೆ. ಇಲ್ಲಿ ಆಗುವ ನಿರ್ಧಾರದಂತೆ ಮುಂದಿನ ಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಒಂದು ವೇಳೆ ವಿಧಾನಸಭೆ ಈ ನೇಮಕಗಳಿಗೆ ಒಪ್ಪಿಗೆ ನೀಡಿದರೂ ಕೋರ್ಟ್‌ ಮತ್ತೂಮ್ಮೆ ಪರಿಶೀಲನೆಗೆ ಒಳಪಡಿಸುವ ಸಾಧ್ಯತೆ ಇದ್ದು, ಅಭ್ಯರ್ಥಿಗಳ ಭವಿಷ್ಯ ಅತಂತ್ರವಾಗಬಹುದೇ ಎಂಬ ಆತಂಕವೂ ಇದೆ.

2011ನೇ ಸಾಲಿನ ಪಟ್ಟಿ ಒಪ್ಪಿಕೊಳ್ಳುವುದಾಗಿ ಸದನದಲ್ಲಿ ಕೊಟ್ಟ ಮಾತಿನಂತೆ ಮುಂದೆ ಕ್ರಮ ಕೈಗೊಳ್ಳಬೇಕಾಗಿದೆ. ಕಾನೂನಿನಂತೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚಿಸಲು ಈ ವಿಚಾರವನ್ನು ವಿಧಾನಸಭೆ ಮುಂದೆ ತಂದು ನೋಡಬೇಕಾಗಿದೆ ಎಂದು ಸಂಪುಟ ಸಭೆ ಬಳಿಕ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಬೀದಿ ಹೋರಾಟ, ರಾಜಕೀಯ ರಂಪ ಮತ್ತು ಕಾನೂನು ಹೋರಾಟಗಳ ಮೂಲಕ ಸಾಗಿ ಬಂದಿರುವ 2011ನೇ ಸಾಲಿನ ಕೆಎಎಸ್‌ ನೇಮಕ ಅಕ್ರಮ ವಿಚಾರ ಸರಕಾರದ ಪಾಲಿಗೆ “ನುಂಗಲಾರದ ಬಿಸಿ ತುಪ್ಪ’ವಾಗಿದೆ.

ಸರಕಾರದ ಕಸರತ್ತು ಯಾಕೆ? :

Advertisement

ಆಯ್ಕೆಯಾದ 362 ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸ ಬೇಕು ಎಂಬ ಉದ್ದೇಶ ಸರಕಾರದ್ದಾಗಿತ್ತು. ಆದ್ದರಿಂದ ಸರಕಾರ 3 ವರ್ಷಗಳಿಂದ ನಾನಾ ಕಸರತ್ತುಗಳನ್ನು ನಡೆಸುತ್ತಿದೆ. ಇದರ ಭಾಗವಾಗಿ ಪಟ್ಟಿಯನ್ನು ಒಪ್ಪಿಕೊಳ್ಳುವ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನಿಸಿತು. ಇದು ಸದನದ ಮುಂದೆ ಬರಬೇಕಾಗಿತ್ತು. ಅನೇಕ ಬಾರಿ ಸದನದಲ್ಲೂ ಚರ್ಚೆ ನಡೆಸಿತ್ತು. ಆದರೆ ಅಂತಿಮ ತೀರ್ಮಾನ ಆಗಿರಲಿಲ್ಲ. ಕೆಲವು ಪ್ರಭಾವಿಗಳ ಮಕ್ಕಳು ಅಭ್ಯರ್ಥಿಗಳು ಆಗಿರು ವುದರಿಂದ ಸರಕಾರ ಒತ್ತಡದಲ್ಲಿದೆ. ಮತ್ತೂಂದು ಕಡೆ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ತೀರ್ಪು ಜಾರಿಗೊಳಿಸಲು ಬಿಜೆಪಿ ಸರಕಾರಕ್ಕೆ ನಿರ್ದೇಶನ ನೀಡುವಂತೆ ಪ್ರಧಾನಿ ಸಹಿತ ಕೇಂದ್ರದ ಬಿಜೆಪಿ ನಾಯಕರಿಗೆ ಮನವಿ ಸಲ್ಲಿಕೆಯಾಗಿದೆ. ಕೆಲವು ಪ್ರಭಾವಿ ಮಠಾಧೀಶರು ಕೂಡ ಒತ್ತಡ ಹೇರಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಸರಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.

ಏನಾಗಿತ್ತು? :

2011ರ ಕೆಎಎಸ್‌ ನೇಮಕಾತಿಯಲ್ಲಿ ಅಕ್ರಮ ನಡೆದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ವರದಿ ಆಧರಿಸಿ ಸರಕಾರ ನೇಮಕಾತಿ ಪಟ್ಟಿಯನ್ನು ವಾಪಸ್‌ ಪಡೆದಿತ್ತು. ಅಭ್ಯರ್ಥಿಗಳು ಕೆಎಟಿ ಮೆಟ್ಟಿಲೇರಿದ್ದರು. ಸರಕಾರದ ಆದೇಶ ವನ್ನು ಕೆಎಟಿ ರದ್ದುಪಡಿಸಿತ್ತು. ಕೆಎಟಿ ಆದೇಶ ಪ್ರಶ್ನಿಸಿ ಸರ ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಹೈಕೋರ್ಟ್‌ ನೇಮಕಾತಿ ಪಟ್ಟಿಯನ್ನು ರದ್ದುಪಡಿಸಿತು. ಪ್ರಕರಣ ಸುಪ್ರೀಂ ಕೋರ್ಟ್‌ ಅಂಗಳ

ತಲುಪಿತು. ಸುಪ್ರೀಂ ಕೋರ್ಟ್‌ ಕೂಡ ಹೈಕೋರ್ಟ್‌ ತೀರ್ಪು ಎತ್ತಿಹಿಡಿಯಿತು. ಈ ಮಧ್ಯೆ ರಾಜ್ಯ ಸರಕಾರವು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಪುನರ್‌ ಪರಿಶೀಲನ ಅರ್ಜಿ ಸಲ್ಲಿಸಿತು. ಅರ್ಜಿ ವಿಚಾ ರಣೆಗೆ ಪರಿಗಣಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್‌ ಪ್ರಕರಣವನ್ನು ಹೈಕೋರ್ಟ್‌ನಲ್ಲೇ ಇತ್ಯರ್ಥಪಡಿಸಿಕೊಳ್ಳುವಂತೆ ಹೇಳಿತು.

ಹಲವು ಬಾರಿ ಸಚಿವ ಸಂಪುಟದಲ್ಲಿ ಈ ವಿಚಾರ ಚರ್ಚಿಸಲಾಗಿದ್ದು, ಕಾನೂನು ಸಚಿವ ಮಾಧುಸ್ವಾಮಿ ಅವರ ನೇತೃತ್ವದಲ್ಲೇ ಸಚಿವ ಸಂಪುಟದ ಉಪ ಸಮಿತಿಯೂ ರಚಿಲಾಗಿತ್ತು. ಅಲ್ಲೂ ಪರಿಹಾರ ಸಿಕ್ಕಿಲ್ಲ. ಅನೇಕ ಬಾರಿ ಸದನದಲ್ಲೂ ಪ್ರಸ್ತಾವವಾಗಿದೆ. ಆದರೆ ಅಂತಿಮ ತೀರ್ಮಾನಕ್ಕೆ ಬರಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಈ ಮಧ್ಯೆ ಹೈಕೋರ್ಟ್‌, ಸುಪ್ರೀಂಕೋರ್ಟ್‌ ತೀರ್ಪುಗಳನ್ನು ಜಾರಿಗೊಳಿಸುವ ಕಾನೂನಿನ ಇಕ್ಕಟ್ಟು ಕೂಡ ಸರಕಾರದ ಮುಂದಿದೆ.

ಪ್ರಕರಣ ಸಾಗಿ ಬಂದ ಹಾದಿ:

 2011 ನ. 3: 362 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಕ್ಕೆ ಅರ್ಜಿ

 2014ರ ಮಾ. 22: ಸಂಭಾವ್ಯ ಪಟ್ಟಿ ಪ್ರಕಟ

 2014ರ ಮಾ. 26: ನೇಮಕದಲ್ಲಿ ಅವ್ಯವಹಾರ ಆರೋಪ

 2014ರ ಜೂ. 27: ಸಿಐಡಿ ತನಿಖೆಗೆ ಆದೇಶ

 2014ರ ಆ. 8: 362 ಹುದ್ದೆಗಳ ಆಯ್ಕೆಪಟ್ಟಿ ಹಿಂಪಡೆದ ಸರಕಾರ

 2016ರ ಅ. 19: ಕೆಎಟಿಯಿಂದ ಸರಕಾರದ ಆದೇಶ ರದ್ದು, ನೇಮಕಕ್ಕೆ ಆದೇಶ

 2017ರ ಮಾ. 9: ಹೈಕೋರ್ಟ್‌ನಿಂದ ಕೆಎಟಿ ಆದೇಶ ರದ್ದು, ಹೊಸದಾಗಿ ನೇಮಕ ಪ್ರಕ್ರಿಯೆ ನಡೆಸಲು ಆದೇಶ

 2018 ಎ. 4: ಹೈಕೋರ್ಟ್‌ ಆದೇಶ ಊರ್ಜಿತಗೊಳಿಸಿದ ಸುಪ್ರೀಂ ಕೋರ್ಟ್‌, ಪರೀಕ್ಷೆಯ ಅಕ್ರಮ ಪರಿಶೀಲಿಸಲು ಸೂಚನೆ

 2018. ಜು. 13: ಲಿಖೀತ ಪರೀಕ್ಷೆಯಲ್ಲೂ ಅಕ್ರಮ ಸಾಬೀತು, 362 ಹು¨ªೆಗಳ ನೇಮಕ ರದ್ದು ಪುನರುಚ್ಚರಿಸಿದ ಹೈಕೋರ್ಟ್‌.

 2019. ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರಕಾರದ ಮರುಪರಿಶೀಲನ ಅರ್ಜಿ ವಜಾ.

ಇದು 362 ಅಭ್ಯರ್ಥಿಗಳ ಪ್ರಶ್ನೆ ಅಲ್ಲ. ಪೂರ್ವಭಾವಿ ಪರೀಕ್ಷೆ ಬರೆದ 1.5 ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳ ಪ್ರಶ್ನೆ. ಹಾಗಾಗಿ ವಯೋಮಿತಿ ಹೆಚ್ಚಳ ಮಾಡಿ ಹೊಸದಾಗಿ ನೇಮಕಾತಿ ನಡೆಸಬೇಕು. 362 ಅಭ್ಯರ್ಥಿಗಳ ಪೈಕಿ 2014, 2015ನೇ ಸಾಲಿನ ನೇಮಕಾತಿಯಲ್ಲಿ 250ಕ್ಕೂ ಹೆಚ್ಚು ಅಭ್ಯರ್ಥಿಗಳು ನೇಮಕಗೊಂಡು ಸೇವೆಯಲ್ಲಿದ್ದಾರೆ. -ಎನ್‌. ಸಂತೋಷ್‌ ಕುಮಾರ್‌, ನೊಂದ ಅಭ್ಯರ್ಥಿ.

Advertisement

Udayavani is now on Telegram. Click here to join our channel and stay updated with the latest news.

Next