ಅಂಕೋಲಾ: ಕೇಂದ್ರ ಸರಕಾರದ ಪ್ರತಿಷ್ಠಿತ ಯೋಜನೆಯಾದ ಪ್ರತಿ ಮನೆಗೂ ಕುಡಿಯುವ ನೀರು ಜಲ ಜೀವನ ಮಿಶನ್ ಕಾರ್ಯರೂಪಕ್ಕೆ ತರುವಲ್ಲಿ ಇಲಾಖೆ ಅಧಿಕಾರಿಗಳು ಲೋಪವೆಸಗಿದ ಕಾರಣ ಶಾಸಕಿ ರೂಪಾಲಿ ನಾಯ್ಕ ಅಧಿಕಾರಿಗಳ ಬೆವರಿಳಿಸಿದ ಪ್ರಸಂಗ ತಾಪಂ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಶಾಸಕಿ ರೂಪಾಲಿ ನಾಯ್ಕ ಸಭೆಯಲ್ಲಿ ಹಾಜರಿದ್ದ ಜೆಜೆಎಂ ಅನುಷ್ಠಾನ ಅಧಿಕಾರಿಗಳಾದ ಗುರುದತ್ ಶೇಟ್ ಹಾಗೂ ವಿ.ಎಸ್. ಬಾಲಚಂದ್ರ ಇವರ ಬಳಿ ಯೋಜನೆಯ ಮಾಹಿತಿ ಕೇಳಿದರು. ಈ ಅಧಿಕಾರಿಗಳ ವಿರುದ್ಧ ಈಗಾಗಲೇ ಹಲವಾರು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇಂದಿನ ಸಭೆಯಲ್ಲಿ ಅವರಿಂದ ಮಾಹಿತಿ ಬಯಸಿದ್ದರು. ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದೆ ಕೆಲಸ ಮಾಡದೆಯೂ ಅಲ್ಲಿ ಇಲ್ಲಿ ಕೆಲಸ ಆಗಿದೆ ಪ್ರಗತಿಯಲ್ಲಿದೆ ಮುಂತಾದ ಉಡಾಫೆ ಉತ್ತರ ನೀಡಲು ಮುಂದಾದಾಗ ಶಾಸಕಿ ಕೆರಳಿ ಕೆಂಡವಾದರು. ನೀವು ಕುಡಿಯುವ ನೀರಿನ ಯೋಜನೆ ವಿಷಯದಲ್ಲಿ ಅಸಡ್ಡೆ ತೋರಿದರೆ ತಕ್ಕ ಶಾಸ್ತಿ ಮಾಡಬೇಕಾಗುವದು ಎಂದು ಎಚ್ಚರಿಕೆಯನ್ನೂ ನೀಡಿದರು.
ತಾಲೂಕಿನ ಬಹುತೇಕ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗಳು ಈ ಯೋಜನೆಯ ಬಗ್ಗೆ ತಮಗೆ ಮಾಹಿತಿಯೇ ಇಲ್ಲ. ಅಧಿ ಕಾರಿಗಳು ತಮ್ಮನ್ನು ಸಂಪರ್ಕಿಸುತ್ತಿಲ್ಲ ಹಾಗೂ ಸರಿಯಾಗಿ ಸರ್ವೇ ಕೂಡ ನಡೆಸಿಲ್ಲ ಎಂದು ಆರೋಪಿಸಿದರು. 16 ಕೋಟಿ ರೂ ಯೋಜನೆಯಾದ ಜಲ ಜೀವನ ಮಿಶನ್ ಅನುಷ್ಠಾನ ಮಾಡಬೇಕಾದರೆ ಜನಪ್ರತಿನಿಧಿ ಗಳನ್ನು ಸಂಪರ್ಕಿಸದೇ ತಾಲೂಕು ದಂಡಾಧಿಕಾರಿಗಳನ್ನೂ, ತಾಪಂ ಕಾರ್ಯನಿರ್ವಹಣಾ ಧಿಕಾರಿಗಳನ್ನೂ, ಶಾಸಕರನ್ನೂ ಸಂಪರ್ಕಿಸದೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಪ್ರಮುಖ ಯೋಜನೆ ಉದ್ಘಾಟನೆಯನ್ನೂ ನಡೆಸದೆ ಇರುವ ಹಿಂದಿನ ಉದ್ದೇಶವೇನು ಎಂದು ಶಾಸಕಿ ಖಾರವಾಗಿ ಪ್ರಶ್ನಿಸಿದರು. ಒಂದು ಹಂತದಲ್ಲಿ ಸಮಜಾಯಿಶಿಯನ್ನು ನೀಡಲು ಯತ್ನಿಸಿದ ಅ ಧಿಕಾರಿಗಳ ಬೆವರಿಳಿಸಿದ ಶಾಸಕಿ ಇದು ಪ್ರಧಾನ ಮಂಗತ್ರಿಗಳ ಮಹತ್ವಾಕಾಂಕ್ಷೆ ಯೋಜನೆ ಪ್ರತೀ ಮನೆಗೂ ನೀರಿನ ಸಂಪರ್ಕ ನೀಡುವುದೇ ಉದ್ದೇಶ. ಇದನ್ನು ಹಾಳು ಮಾಡಿ ಹಣವನ್ನು ನೀರಲ್ಲಿ ಹೋಮ ಮಾಡಿದಂತಾಗಲು ಬಿಡುವುದಿಲ್ಲ. ನಿಮ್ಮಿಂದ ಆಗದಿದ್ದರೆ ರಾಜಿನಾಮೆ ನೀಡಿ ಹೋಗಿ ಬೇರೆ ಅ ಧಿಕಾರಿಗಳಿಂದ ಮಾಡಿಸುತ್ತೇವೆ ಎಂದರು.
ಈ ಹಿಂದೆ ತಾಪಂ ಸಾಮಾನ್ಯ ಸಭೆಯಲ್ಲಿ ಪ್ರತಿ ಬಾರಿಯೂ ಇದರ ಬಗ್ಗೆ ಚರ್ಚೆಯಾಗುತ್ತಲೇ ಇತ್ತು. ಅಧ್ಯಕ್ಷೆ ಸುಜಾತಾ ಗಾಂವಕರ ಕೂಡ ಹಲವಾರು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ ಅಧಿಕಾರಿಗಳು ಮತ್ತೆ ಅದೇ ಚಾಳಿಯಲ್ಲಿದ್ದರು. ಕೆಲವು ಗ್ರಾಮಗಳಲ್ಲಿ ಕೆಲಸ ಪ್ರಾರಂಭಿಸಿದ್ದರೆ. ನೀರಿನ ಮೂಲವೇ ಇಲ್ಲ. ಕೆಲವು ಕಡೆ ಕೆಲಸವೇ ಅರ್ಧ ಮರ್ಧ ಆದರೂ ಕೆಲಸ ಆಗಿದೆ ಎನ್ನುವುದೇ ಅ ಕಾರಿಗಳ ವಾದ. ಹಿಲ್ಲೂರಿನಲ್ಲಿ ಶೆಡ್ ಮಾತ್ರ ಇದೆ ಮಶಿನ್ನೇ ಇಲ್ಲ. ರಾಮನಗುಳಿಯಲ್ಲಿ ನೀರಿನ ಸೌಕರ್ಯ ಇದ್ದಲ್ಲಿಯೇ ಮತ್ತೆ ಕೆಲಸ ಪ್ರಾರಂಭಿಸಿದ್ದಾರೆ. ಹಟ್ಟಿಕೇರಿಯಲ್ಲಿ ಸಮರ್ಪಕವಾಗಿ ಮಾಡಿಲ್ಲ ಹೀಗೆ ಎಲ್ಲೂ ಕೂಡ ಕೆಲಸ ಸರಯಾಗಿಲ್ಲ ಎಂಬ ಆರೋಪಗಳೇ ಕೇಳಿಬರುತ್ತಿವೆ. ತಹಶೀಲ್ದಾರ್ ಉದಯ ಕುಂಬಾರ ಸರಕಾರದ ಯಾವುದೇ ಯೋಜನೆಗಳನ್ನು ಜಾರಿಗೊಳಿಸುವಾಗ ಪ್ರೊಟೋಕಾಲ ಪ್ರಕಾರ ಜನಪ್ರತಿನಿಧಿಗಳಿಗೆ, ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ. ಅದನ್ನು ಯಾಕೆ ಪಾಲನೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಜನರಿಗೆ ನೀರು ಕೊಡುವ ಯೋಜನೆ ಸರಿಯಾಗಿ ಮಾಡಿ ಎಂದರು. ತಾಪಂ ಇಒ ಪಿ.ವೈ. ಸಾವಂತ ಮಾತನಾಡಿ ಪ್ರತೀ ವಾರಕ್ಕೊಮ್ಮೆ ಕೆಲಸದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನ ಕೆಲವು ಪಂಚಾಯತಗಳಲ್ಲಿ ನೀರಿನ ಅಭಾವವಿದೆ ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡಲು ಜಿಲ್ಲಾಧಿಕಾರಿಗಳಿಂದ ಆದೇಶ ಬಂದಿಲ್ಲ. 14 ನೇ ಹಣಕಾಸಿನಲ್ಲಿ ಹಣವಿಲ್ಲ ತಾತ್ಕಾಲಿಕವಾಗಿ ಗ್ರಾಪಂಗಳಿಂದಲೇ ನೀರು ಪೂರೈಸುವ ಕ್ರಮದ ಬಗ್ಗೆ ಚರ್ಚಿಸಲಾಗುವದು ಎಂದರು. ಮಳೆಗಾಲದಲ್ಲಿ ನೆರೆ ಭೀತಿಯಿರುವ ಕುರ್ವೆಯ 14 ಕುಟುಂಬಗಳಿಗೆ ಈಗಾಗಲೇ ಬೇರೆ ಕಡೆ ಜೂಗದ ಸ.ನಂ. 12/ಅ ದಲ್ಲಿ 14 ಗುಂಟೆ ಮೀಸಲಿಡಲಾಗಿದೆ. ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗಳು ಉಪಸ್ಥಿತರಿದ್ದರು.