ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹೊನ್ನಾವರ ಹಾಗೂ ಭಟ್ಕಳ ಪೊಲೀಸ್ ಠಾಣೆಯನ್ನು ಶೀಘ್ರದಲ್ಲೇ ಪೊಲೀಸ್ ಇನ್‌ಸ್ಪೆಕ್ಟರ್ ಠಾಣೆಗಳನ್ನಾಗಿ ಮೇಲ್ದರ್ಜೆಗೆ ಏರಿಸಲು ಸಿದ್ಧತೆ ನಡೆದಿದೆ. ಸರ್ಕಾರದ ಆದೇಶದ ಪ್ರಕಾರ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.
ಕಾರವಾರ ಸಿಪಿಐ ಅಡಿ ಪ್ರತ್ಯೇಕವಾಗಿ ಗ್ರಾಮೀಣ, ನಗರ ಹಾಗೂ ಸಂಚಾರ ಠಾಣೆಗಳಿದ್ದವು. ಹಾಗೆ ಹೊನ್ನಾವರ ಸಿಪಿಐ ಅಡಿಯಲ್ಲಿ ಮಂಕಿ ಪೊಲೀಸ್ ಠಾಣೆ ಇದ್ದು, ಭಟ್ಕಳ ಸಿಪಿಐ ಅಡಿಯಲ್ಲಿ ನಗರ, ಗ್ರಾಮೀಣ ಹಾಗೂ ಮುಡೇìಶ್ವರ ಠಾಣೆಗಳಿದ್ದವು. ಇದೀಗ ಈ ಪೊಲೀಸ್ ಠಾಣೆಗಳು ಮೇಲ್ದರ್ಜೆಗೆ ಏರುತ್ತಿವೆ. ಕೆಲ ತಿಂಗಳ ಹಿಂದೆ ರಾಜ್ಯ ಸರ್ಕಾರ ಹಲವು ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಿದ್ದು, ಅದರಂತೆ ಕಾರವಾರ, ಹೊನ್ನಾವರ ಹಾಗೂ ಭಟ್ಕಳ ಸಿಪಿಐ ಠಾಣೆಯನ್ನು ಪೊಲೀಸ್ ಇನ್‌ಸ್ಪೆಕ್ಟರ್ ಠಾಣೆಯನ್ನಾಗಿ ಮಾಡಿ ಪರಿವರ್ತಿಸಿ ಆದೇಶಿಸಿತ್ತು.
ಕಾರವಾರ ನಗರ ಠಾಣೆಗೆ ಪೊಲೀಸ್ ಇನ್‌ಸ್ಪೆಕ್ಟರ್ ಮುಖ್ಯಸ್ಥರಾಗಿದ್ದು, ಸಂಚಾರ ಠಾಣೆಯನ್ನು ಅವರ ಅಧೀನಕ್ಕೆ ಒಳಪಡಿಸಿ ಆದೇಶಿಸಿತ್ತು. ಹಾಗೆಯೇ ಕಾರವಾರ ಗ್ರಾಮೀಣ ಠಾಣೆಗೂ ಪೊಲೀಸ್ ಇನ್‌ಸ್ಪೆಕ್ಟರನ್ನು ಮುಖ್ಯಸ್ಥರನ್ನಾಗಿ ಮಾಡಿ ಪರಿವರ್ತಿಸಲು ಸೂಚಿಸಿತ್ತು. ಇನ್ನೊಂದೆಡೆ ಹೊನ್ನಾವರ ಠಾಣೆಯನ್ನ ಸಹ ಪೊಲೀಸ್ ಇನ್‌ಸ್ಪೆಕ್ಟರ್ ಠಾಣೆಯನ್ನಾಗಿ ಮಾಡಲಾಗಿದೆ. ಭಟ್ಕಳ ಗ್ರಾಮೀಣ ಠಾಣೆ ವೃತ್ತ ನಿರೀಕ್ಷಕರ ಠಾಣೆಯನ್ನಾಗಿ ಮಾಡಿ ಅದರಡಿ ಹೊನ್ನಾವರ ವೃತ್ತ ನಿರೀಕ್ಷಕರ ಅಡಿಯಲ್ಲಿದ್ದ ಮಂಕಿ, ಮುಡೇìಶ್ವರ ಠಾಣೆ ಸೇರ್ಪಡೆ ಮಾಡಲಾಗುತ್ತಿದೆ.
ಇನ್ನು ಭಟ್ಕಳ ನಗರ ಠಾಣೆಯನ್ನ ಪೊಲೀಸ್ ಇನ್‌ಸ್ಪೆಕ್ಟರ್ ಠಾಣೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಆದೇಶದಲ್ಲಿ ಸೂಚಿಸಿತ್ತು. ಅದರಂತೆ ಮುಂದಿನ ತಿಂಗಳ ಒಳಗೆ ಈ ಎಲ್ಲಾ ಠಾಣೆಗಳನ್ನು ವಿಂಗಡಿಸಿ, ಮೇಲ್ದರ್ಜೆಗೆ ಏರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ. ಹೆಚ್ಚುವರಿಯಾಗಿ 2 ಸಿಪಿಐ ಹುದ್ದೆ ಸೃಷ್ಟಿ: ಇನ್ನು ಠಾಣೆಗಳನ್ನು ಮೇಲ್ದರ್ಜೆಗೆ ಏರಿಸುವುದರಿಂದ ಕಾರವಾರ ಹಾಗೂ ಭಟ್ಕಳದಲ್ಲಿ ಇಬ್ಬರು ಇನ್‌ಸ್ಪೆಕ್ಟರ್ ಹುದ್ದೆಗಳು ಹೆಚ್ಚುವರಿಯಾಗಿ ಸೃಷ್ಟಿಯಾಗಲಿವೆ, ಸದ್ಯ ಈ ಹುದ್ದೆಗಳಿಗೆ ನೇಮಕ ಮಾಡುವ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ. ಈ ಹಿಂದೆಯೇ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಬೇಕಿತ್ತು. ಕೊರೊನಾ ಇನ್ನಿತರ ಕಾರಣದಿಂದ ತಡವಾಗಿದ್ದು, ಸರ್ಕಾರದ ಆದೇಶದಂತೆ ಶೀಘ್ರದಲ್ಲೇ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ.
ಗೊಂದಲದ ಆದೇಶ: ಠಾಣೆಗಳನ್ನು ವಿಂಗಡಿಸಿ ಮೇಲ್ದರ್ಜೆಗೆ ಏರಿಸುವ ಸರ್ಕಾರದ ಆದೇಶ ಹೊನ್ನಾವರ ಭಾಗದಲ್ಲಿ ಸಾಕಷ್ಟು ಗೊಂದಲ ಮೂಡಿಸಿದೆ. ಈ ಹಿಂದೆ ಹೊನ್ನಾವರ ತಾಲೂಕಿನ ಮಂಕಿ ಠಾಣೆ ಹೊನ್ನಾವರ ವೃತ್ತ ನಿರೀಕ್ಷಕರ ಅಡಿಯಲ್ಲಿ ಬರುತ್ತಿತ್ತು. ಸದ್ಯ ಹೊನ್ನಾವರ ಠಾಣೆ ಮೇಲ್ದರ್ಜೆಗೆ ಏರಲಿದ್ದು, ಭಟ್ಕಳ ಗ್ರಾಮೀಣ ವೃತ್ತ ನಿರೀಕ್ಷಕರ ಠಾಣೆಯಡಿ ಮಂಕಿ ಠಾಣೆ ಸೇರಿಸಲು ಆದೇಶಿಸಲಾಗಿದೆ. ಮಂಕಿ ಠಾಣಾ ವ್ಯಾಪ್ತಿಯಲ್ಲಿ ಇಡಗುಂಜಿ ಸೇರಿದಂತೆ ಬಹುತೇಕ ಪ್ರದೇಶ ಹೊನ್ನಾವರ ತಾಲೂಕಿನಲ್ಲಿಯೇ ಬರಲಿದೆ. ಆದರೆ ಭಟ್ಕಳ ಗ್ರಾಮೀಣ ವೃತ್ತ ನಿರೀಕ್ಷಕರ ಅಡಿಯಲ್ಲಿ ಠಾಣೆ ಸೇರಿಸಲಿರುವುದರಿಂದ ಹೊನ್ನಾವರ ತಾಲೂಕಿನ ಜನರು ವೃತ್ತ ನಿರೀಕ್ಷರ ಕೆಲಸಕ್ಕಾಗಿ ಭಟ್ಕಳಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಸಣ್ಣಪುಟ್ಟ ವಿಚಾರಕ್ಕೂ ವೃತ್ತ ನಿರೀಕ್ಷಕರ ಕಚೇರಿಗಾಗಿ ದೂರದ ಭಟ್ಕಳಕ್ಕೆ ತೆರಳುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಎದ್ದಿದೆ. ಹೊನ್ನಾವರ ಪೊಲೀಸ್ ಠಾಣೆಯನ್ನ ಮೇಲ್ದರ್ಜೆಗೆ ಏರಿಸುವ ಅಗತ್ಯವೇ ಇರಲಿಲ್ಲ. ಈಗಿರುವ ವೃತ್ತ ನಿರೀಕ್ಷಕರ ಕಚೇರಿ ಅಡಿಯಲ್ಲೇ ಮಂಕಿ, ಇಡಗುಂಜಿ ಪ್ರದೇಶ ಉಳಿಯಬೇಕು ಎಂಬ ಅಭಿಪ್ರಾಯ ಸಹ ಕೇಳಿ ಬಂದಿದೆ.