ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಾಸ್ತಾನು ಮತ್ತು ಅಕ್ರಮ ಮರಳು ಸಾಗಾಟಗಾರರಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ಜಿಲ್ಲೆಯಾದ್ಯಂತ ಅನಿರೀಕ್ಷಿತ ದಾಳಿ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮರಳು ಮತ್ತು ಮರಳು ಸಾಗಾಟದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮದಲ್ಲಿ ತೊಡಗಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ.
ಶುಕ್ರವಾರ ಬೆಳಗ್ಗೆ 4 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಯಾವುದೇ ಇಲಾಖೆಗಳಿಗೆ, ಯಾವುದೇ ಮುನ್ಸೂಚನೆ ನೀಡದೆ, ಅಕ್ರಮದ ಕುರಿತು ತಮಗೆ ದೊರೆತಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದರು.
ದಾಳಿ ಸಂದರ್ಭದಲ್ಲಿ ಸ್ಥಳದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮರಳು ಸಂಗ್ರಹ, ಮರಳು ತುಂಬಿಕೊಂಡು ತೆರಳುತ್ತಿದ್ದ ವಾಹನ, ಮರಳು ತುಂಬಿದ್ದ ವಾಹನಗಳನ್ನು ಕಂಡ ಜಿಲ್ಲಾಧಿಕಾರಿಗಳು ಕೂಡಲೇ ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರರಿಗೆ ಅವುಗಳನ್ನು ವಶಪಡಿಸಿಕೊಳ್ಳುವಂತೆ ಮತ್ತು ಅಕ್ರಮದಲ್ಲಿ ತೊಡಗಿರುವವನ್ನು ಬಂಧಿಸುವಂತೆ ಸೂಚನೆ ನೀಡಿದರು.
ಅಂಕೋಲಾ ಮತ್ತು ಕುಮುಟಾ ತಾಲೂಕಿನಲ್ಲಿ ದಾಳಿ ನಡೆಸಿದ ಜಿಲ್ಲಾಧಿಕಾರಿಗಳು, ಶಿರೂರು, ಕೊಡ್ಕಣಿ, ಮಿರ್ಜಾನ, ದೀವಗಿ, ತಾರೆಬಾಗಿಲು, ಹೆಗಡೆ ಗ್ರಾಮ ನದಿ ದಂಡೆಯ ಪ್ರದೇಶಗಳಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ದಾಳಿ ನಡೆಸಿ ಅಕ್ರಮದ ವಿರುದ್ದ ಕಾನೂನು ಕ್ರಮ ಕೈಗೊಂಡರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಕುಮುಟಾ ಉಪ ವಿಭಾಗಾಧಿಕಾರಿ ಕಲ್ಯಾಣಿ, ತಹಸೀಲ್ದಾರ್ ಸತೀಶ್ ಗೌಡ, ಅಂಕೋಲ ತಹಸೀಲ್ದಾರ್ ಅಶೋಕ್ ಭಟ್ ಮತ್ತು ಕಂದಾಯ ಇಲಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪೂತ್ ನೇತೃತ್ವದ ಮತ್ತೊಂದು ಅಧಿಕಾರಿಗಳ ತಂಡ ಕೂಡಾ ಕಾರವಾರ ತಾಲೂಕಿನ ವಿವಿಧ ಭಾಗದಲ್ಲಿ ಕಾರ್ಯಚರಣೆ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮರಳು ಮತ್ತು ಮರಳು ಸಾಗಾಟದ ವಾಹನಗಳನ್ನು ವಶಪಡಿಸಿಕೊಂಡರು. ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ದಾಳಿ ಮಾಡಿದ್ದನ್ನು ಜಿಲ್ಲಾಧಿಕಾರಿ ದೃಢಪಡಿಸಿದರು.